Advertisement

ಅನ್ಯ ಊರಿನಿಂದ ಬಂದವರಿಗೆ ಆದ್ಯತೆ ನೀಡಬೇಡಿ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

12:48 PM Jan 12, 2023 | Team Udayavani |

ಗಂಗಾವತಿ: ಸ್ಥಳೀಯ ವ್ಯಕ್ತಿ ಶಾಸಕನಾಗಿ ಸ್ಥಳೀಯ ಜನರ ಸಮಸ್ಯೆ ಪರಿಹಾರ ಮಾಡಲು ಸಾಧ್ಯ. ಚುನಾವಣಾ ಸಂದರ್ಭದಲ್ಲಿ ಅಧಿಕಾರದ ಆಸೆಯಿಂದ ಜನರನ್ನು ಮರಳು ಮಾಡಿ ಗೆದ್ದ ನಂತರ ಬೆಂಗಳೂರು, ಹೈದ್ರಾಬಾದ್ ಸೇರುವವರಿಂದ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಅನ್ಯ ಊರುಗಳಿಂದ ಆಗಮಿಸಿದವರಿಗೆ ಕ್ಷೇತ್ರದ ಜನರು ಆದ್ಯತೆ ನೀಡದಂತೆ ಶಾಸಕ ಪರಣ್ಣ ಮುನವಳ್ಳಿ ಪರೋಕ್ಷವಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಟೀಕಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾತನಾಡಿದ ವಿಡಿಯೋ ಹಾಕಿ ‘ಗಂಗಾವತಿ ಕ್ಷೇತ್ರದಲ್ಲಿ ಕಳೆದೆರಡು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಹೇಳುತ್ತಲೇ ಅನ್ಯ ಊರುಗಳಿಂದ ಆಗಮಿಸಿ ಜನರನ್ನು ಭ್ರಮಾಲೋಕದಲ್ಲಿ ತೇಲಿಸುತ್ತಿರುವ  ಗ್ಯಾಂಗ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಎದೆಗುಂದಬಾರದು. ಕೆಲ ತಪ್ಪು ಮಾಹಿತಿಗಳಿಂದ ಕೆಲ ಮುಖಂಡರು ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ಪಕ್ಷದ ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸುತ್ತಿದೆ. ಬಿಜೆಪಿ ಕಾರ್ಯಕರ್ತರ ಸಂಪೂರ್ಣ ಸಹಕಾರದೊಂದಿಗೆ ಎರಡು ಬಾರಿ ಶಾಸಕನಾಗಿ ಗಂಗಾವತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಯಶಸ್ವಿಯಾಗಿ ಆನೆಗೊಂದಿ ಉತ್ಸವ, ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ, ಗಂಡುಗಲಿ ಕುಮಾರರಾಮನ ಕ್ಷೇತ್ರದ ಅಭಿವೃದ್ಧಿ ರಸ್ತೆ ನಿರ್ಮಾಣ, ಇಂಜಿನಿಯರಿಂಗ್ ಕಾಲೇಜ್ ,ಕೃಷಿ ಕಾಲೇಜ್ ,ಕೆರೆಗಳ ತುಂಬಿಸುವ ಯೋಜನೆ, ಕೇಂದ್ರೀಯ ವಿದ್ಯಾಲಯ ಹೀಗೆ ಹಲವಾರು ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ವಿಶ್ವಕ್ಕೆ ಸವಾಲಾಗಿರುವಂತಹ ಕೊರೊನಾದ ಸಮಯದಲ್ಲಿಯೂ ಕೂಡ ಜನರ ಜೊತೆಗಿದ್ದು ,ಸಾರ್ವಜನಿಕರಿಗೆ ಸಮಸ್ಯೆಯಾಗದ ಹಾಗೆ ಅವರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯ ಸಹಾಯ ಸಹಕಾರದೊಂದಿಗೆ ,ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸಲಾಗಿದೆ ಈಗ ಚುನಾವಣೆ ಬಂದಿರುವುದರಿಂದ ಹಲವಾರು ಆಕಾಂಕ್ಷಿಗಳು ಅನ್ಯ ಊರುಗಳಿಂದ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಆಗಮಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಲು ಸ್ವಾತಂತ್ರ‍್ಯವಿದೆ. ಆದರೆ ಸೋತರು- ಗೆದ್ದರೂ ಯಾರು ಜನತೆಯೊಂದಿಗೆ ಇರುತ್ತಾರೋ ಅಂತಹವರನ್ನು ಮತದಾರರು ಬೆಂಬಲಿಸುತ್ತಾರೆ ಎಂದಿದ್ದಾರೆ.

ಈಗ ಯಾರೇ ಬಂದು ಆಮಿಷಗಳನ್ನು ಒಡ್ಡಬಹುದು. ಗಂಗಾವತಿಯ ಮತದಾರರು ಆಸೆ ಆಮೀಷಗಳಿಗೆ ಬಲಿಯಾಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸರಕಾರದ ಸಾಧನೆಗಳನ್ನು ಕಾರ್ಯಕರ್ತರು ಎಲ್ಲರಿಗೂ ತಿಳಿಸುವುದರ ಜೊತೆಗೆ, ಮತ್ತೊಮ್ಮೆ ಗಂಗಾವತಿಯ ವಿಧಾನಸಭೆಯ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕವಾಗಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಕಾರ್ಯಕರ್ತರ ಪಡೆ ಶ್ರಮಿಸುತ್ತಿದ್ದು ಸುಳ್ಳುಭರವಸೆ ನೀಡುವ ಮತ್ತು ಡೋಂಗಿತನ ಮಾಡುವರರನ್ನು ಮತದಾರರು ನಂಬದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next