ಕೊಪ್ಪಳ: ರಾಜ್ಯ ಸರ್ಕಾರ ಜಿಂದಾಲ್ಗೆ 3,667 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಅಂಗುಲ ಭೂಮಿಯನ್ನು ಕೊಡುವಂತಿಲ್ಲ ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟವು ಹೋರಾಟಗಾರ ವಾಟಾಳ್ ನಾಗರಾಜ ನೇತೃತ್ವದಲ್ಲಿ ತಾಲೂಕಿನ ಮುನಿರಾಬಾದ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸಿತು.
ಮೈತ್ರಿ ಸರ್ಕಾರವು ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಕಾರ್ಖಾನೆಗೆ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ. ಇದೊಂದು ಕೆಟ್ಟ ನಿರ್ಧಾರ. ರೈತರ ಹಿತಾಸಕ್ತಿಯ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ವಾಟಾಳ್ ನಾಗರಾಜ ಮಾತನಾಡಿ, ಜಿಂದಾಲ್ಗೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿ ಕೊಡುತ್ತಿರುವುದು ಅನ್ಯಾಯ. ಇದರಿಂದ ರೈತರಿಗೆ ಹಾಗೂ ಪರಿಸರಕ್ಕೆ ಅನ್ಯಾಯವಾಗುತ್ತಿದೆ. ಕಾರ್ಖಾನೆಗಳು ಈಗಾಗಲೇ ತುಂಗಭದ್ರಾ ನದಿಯಿಂದ 8 ಟಿಎಂಸಿ ಅಡಿ ನೀರು ಪಡೆಯುತ್ತಿದ್ದಾರೆ. ಈ ಅನ್ಯಾಯದಲ್ಲೂ ಜಿಂದಾಲ್ಗೆ ಭೂಮಿ ಕೊಡುತ್ತಿರುವುದನ್ನು ವಿರೋಧಿಸಿದ್ದಕ್ಕೆ ಈಗ ಸರ್ಕಾರ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಉಪ ಸಮಿತಿ ಮಾಡಿದೆ. ಇದು ಹೇಗೆ ಆಗಿದೆಯಂದ್ರೆ ತೋಳವನ್ನು ಕುರಿ ಕಾಯಿ ಎಂದರೆ, ಸಂಬಳ ಇಲ್ಲದೇ ಕುರಿ ಕಾಯುವೆ ಎಂತಂತೆ. ಜಿಂದಾಲ್ ವಿಚಾರದಲ್ಲಿ ಉಪ ಸಮಿತಿ ಸ್ಥಿತಿಯೂ ಹಾಗೆ ಆಗಿದೆ. ಉಪ ಸಮಿತಿಯನ್ನು ನಾವು ತಿರಸ್ಕಾರ ಮಾಡುತ್ತೇವೆ. ಕಮಿಟಿಗೆ ನಾವು ಬೆಲೆ ಕೊಡಲ್ಲ. ಜಿಂದಾಲ್ಗೆ ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ ಎಂದರು. ಇನ್ನೂ ಜು. 27ರಂದು ತೋರಣಗಲ್ನಲ್ಲಿ ಕನ್ನಡಪರ ಸಂಘಟನೆಗಳಿಂದ ದೊಡ್ಡ ಸಮ್ಮೇಳನ ಮಾಡಲಿದ್ದೇವೆ. ಬಳ್ಳಾರಿ ಬಂದ್‌ಗೆ ಕರೆ ಕೊಡಲಿದ್ದೇವೆ. ಬಳಿಕ ಕರ್ನಾಟಕ ಬಂದ್‌ಗೆ ಕರೆ ಕೊಡಲಿದ್ದೇವೆ.
ರಾಜ್ಯದಲ್ಲಿ ವಿವಿಧೆಡೆ ಲೂಟಿಯಾಗುತ್ತಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಲೂಟಿ ಮಾಡಲಾಗುತ್ತಿದೆ. ಇದನ್ನು ದರೋಡೆ ಎಂದರೂ ತಪ್ಪಲ್ಲ. ಜಿಂದಾಲ್ ಕಂಪನಿಗೆ 1995ರಿಂದ ಈ ವರೆಗೂ 11,500 ಎಕರೆ ಭೂಮಿಯನ್ನು ಕೊಟ್ಟಿದ್ದಾರೆ. ಯಾವ ಉದ್ದೇಶಕ್ಕೆ ಭೂಮಿ ಕೊಡಲಾಗಿದೆ ಎಂಬ ಷರತ್ತನ್ನು ಕೈಗಾರಿಕೆ ಮಂತ್ರಿ, ಮುಖ್ಯಮಂತ್ರಿ ನೋಡಿಲ್ಲ. ಅರಣ್ಯ ಪ್ರದೇಶವನ್ನು ಕಾರ್ಖಾನೆಗೆ ಕೊಡಲಾಗಿದೆ. ಕಾರ್ಖಾನೆ ಎಷ್ಟು ಅರಣ್ಯ ಬೆಳೆಸಿದೆ ಎನ್ನುವುದನ್ನು ಪರಿಶೀಲನೆ ಮಾಡಬೇಕು. ಜಿಂದಾಲ್ ಕಾರ್ಖಾನೆ ಮಾಲೀಕ ಇಲ್ಲಿಯವರಲ್ಲ. 1995ರಿಂದ ಎಲ್ಲ ಸರ್ಕಾರಗಳು ಜಿಂದಾಲ್ ಗುಮಾಲರಾಗಿದ್ದಾರೆ. ಜಿಂದಾಲ್ ಹೇಳಿದಂತೆ ಕೇಳಿದ್ದಾರೆ. ಈಗ 3667 ಎಕರೆ ಭೂಮಿಯನ್ನು ಎಕರೆಗೆ 1.20 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಭೂಮಿಯಲ್ಲಿ ಏನೇನು ಸೌಲಭ್ಯವಿದೆ. ಎಂಬುದನ್ನು ನೋಡಿಲ್ಲ. ಎಷ್ಟು ಖನಿಜ ಇದೆ ಎಂಬುದನ್ನು ನೋಡಿಲ್ಲ. ಇದನ್ನು ಮೈಸೂರು ಮಿನಿರಲ್ಸ್ ಅವರು ನೋಡಿದ್ದಾರೆಯೇ? ಮೈಸೂರು ಮಿನಿರಲ್ಸ್ ಇರೋದು ದನ ಕಾಯೋಕಾ? ಈ ಭೂಮಿಯಲ್ಲಿ ಎಷ್ಟು ಖನಿಜ ಇದೆ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಕ್ಕೆ ಭೂಮಿ ಕೊಟ್ಟಿರುವ ಷರತ್ತಿನ ಬಗ್ಗೆ ನೋಡುವ ಜೊತೆಗೆ ಹೊರ ರಾಜ್ಯದ ಜನರಿಗೆ ಕಾರ್ಖಾನೆಗಳಲ್ಲಿ ಕೆಲಸ ಕೊಟ್ಟಿದ್ದಾರೆ. ಆದರೆ ಕನ್ನಡಿಗರಿಗೆ ಕೆಲಸವಿಲ್ಲ. ಇದು ಅತ್ಯಂತ ಗಂಭೀರ ವಿಷಯ. ಇನ್ನೂ ಉಪ ಸಮಿತಿ ಯಾವುದೇ ಕಾರಣಕ್ಕೂ ಬಳ್ಳಾರಿಗೆ ಬರುವಂತಿಲ್ಲ. ಬಂದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನೆಯ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರಾದ ರಾಜೇಶ ಅಂಗಡಿ, ಆರ್. ವಿಜಯಕುಮಾರ, ಕೆ.ಎರಿಸ್ವಾಮಿ, ವಿರುಪಾಕ್ಷಗೌಡ ನಾಯಕ ಸಏರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.