Advertisement

ರಾಜಕಾರಣಿಗಳ ನಂಬಿದ್ರೆ ಮೀಸಲು ಸಿಗಲ್ಲ

03:22 PM May 13, 2022 | Team Udayavani |

ಚಿತ್ರದುರ್ಗ: ಸಮುದಾಯದ ಸಂಘಟನೆಯಿಂದ ಮೀಸಲಾತಿ ಪಡೆಯಲು ಸಾಧ್ಯವೇ ವಿನಃ ರಾಜಕಾರಣಿಗಳನ್ನು ನಂಬಿ ಕೂತರೆ ನಮಗೆ ಮೀಸಲಾತಿ ಸಿಗುವುದಿಲ್ಲ ಎಂದು ರಾಜ್ಯ ಪರಿಶಿಷ್ಟ ಪಂಗಡ ನಾಯಕ ನೌಕರರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ನಾಯಕ ನೌಕರರ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ ಎಲ್‌.ಜಿ. ಹಾವನೂರು ಅವರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಪರಸ್ಪರ ಕಾಲೆಳೆಯುವುದು, ವೃಥಾ ಆರೋಪ ಮಾಡುತ್ತಾ ಕಾಲಹರಣ ಮಾಡಬಾರದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಸಂಘಟನೆಯಿದೆ. ಏಳು ವರ್ಷಗಳ ಹಿಂದೆ ಪ್ರಾರಂಭವಾದ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನಾಯಕ ನೌಕರರ ಸಂಘ ಸಮಾಜಮುಖೀಯಾಗಿ ಕೆಲಸ ಮಾಡಬೇಕಿದೆ ಎಂದರು.

ಉನ್ನತ ಹುದ್ದೆಯಲ್ಲಿರುವ ನಾಯಕ ಸಮಾಜದವರು ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾಗಮೋಹನ್‌ದಾಸ್‌ ಸರ್ಕಾರಕ್ಕೆ ವರದಿ ನೀಡಿ ಒಂದೂವರೆ ವರ್ಷ ಕಳೆದರೂ ರಾಜ್ಯ ಸರ್ಕಾರ ನಾಟಕ ಮಾಡುತ್ತಿದೆ. ಇದರ ಹಿಂದೆ ಆರೆಸ್ಸೆಸ್‌ ಕೈವಾಡ ಇದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಗೆ ಶೇ. 17ರಷ್ಟು, ಎಸ್‌ಟಿಗೆ ಶೇ.7.5ರಷ್ಟು ಮೀಸಲಾತಿಯನ್ನು ಸರ್ಕಾರ ನೀಡಲೇಬೇಕು. ಆದರೆ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿರುವುದರ ವಿರುದ್ಧ ನಾಯಕ ಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ನಾಯಕ ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿಗೆ ಒತ್ತಾಯಿಸಿ ರಾಜನಹಳ್ಳಿಯ ಶ್ರೀ ಪ್ರಸನ್ನಾನಂದ ಸ್ವಾಮೀಜಿ 91 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದಾರೆ. ಇದು ನಮ್ಮ ಹಾಗೂ ನಮ್ಮ ಮಕ್ಕಳಿಗಾಗಿ ಎನ್ನುವುದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಮೀಸಲಾತಿ ನೀಡುವ ತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ವಾಮೀಜಿಗಳು ಪಟ್ಟು ಹಿಡಿದಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದರು.

ಪರಿಶಿಷ್ಟ ಸಮುದಾಯಗಳು ಒಂದಾಗಬಾರದು ಎಂದು ಸರ್ಕಾರ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದೆ. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಬೇರೆ ಜನಾಂಗದವರನ್ನು ಎಸ್‌ ಟಿಗೆ ಸೇರಿಸಲು ನಮ್ಮದೇನೂ ತಕರಾರಿಲ್ಲ. ಆದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ನಮ್ಮ ಮೀಸಲಾತಿಯನ್ನು ಬೇರೆಯವರು ಕಬಳಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Advertisement

ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಸದಾನಂದ ಮಾತನಾಡಿ, ನಾಯಕ ಸಮುದಾಯಕ್ಕೆ ಶೇ. 7.5 ಮೀಸಲಾತಿಗಾಗಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ರಾಜನಹಳ್ಳಿಯಿಂದ ರಾಜಧಾನಿವರೆಗೂ ಪಾದಯಾತ್ರೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದಕ್ಕೆ ನಮ್ಮ ಸಮಾಜದಲ್ಲಿನ ಸಂಘಟನೆ ಕೊರತೆಯೂ ಇರಬಹುದು. ಅದಕ್ಕಾಗಿ ಎಲ್ಲರೂ ಒಂದಾಗಿ ಮೀಸಲಾತಿ ಪಡೆಯೋಣ ಎಂದರು.

ಸಭೆಯಲ್ಲಿ ಸಮುದಾಯದ ನೌಕರರಾದ ಮಲ್ಲಿಕಾರ್ಜುನ್‌, ನಾಗರಾಜ್‌, ದೇವೇಂದ್ರಪ್ಪ, ಪ್ರಶಾಂತ್‌ ಕೂಲಿಕಾರ್‌, ನ್ಯಾಯವಾದಿ ಅಶೋಕ್‌ ಬೆಳಗಟ್ಟ, ಮಲ್ಲಿಕಾರ್ಜುನ್‌ ಕುಂಚಿಗನಾಳ್‌, ರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next