ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯ ಸರಕಾರ ಈಗಾಗಲೇ 195 ತಾಲೂಕುಗಳನ್ನು ಬರಪೀಡಿತವೆಂದು ಘೋ ಷಿಸಿದೆ. ಇನ್ನೂ 32 ತಾಲೂಕುಗಳು ಅದೇ ಸ್ಥಿತಿಯಲ್ಲಿವೆ. ಬಹುತೇಕ ಇಡೀ ರಾಜ್ಯವನ್ನು ಬರಗಾಲ ಆವರಿಸಿದೆ. ಬರಗಾಲ ಎದುರಿಸುವುದು ಯಾವುದೇ ಸರಕಾರಕ್ಕೂ ನಿಜವಾದ ಸವಾಲು. ಈಗ ಅದೇ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರವಿದೆ. ರಾಜ್ಯ ಸರಕಾರದ ಕೋರಿಕೆ ಮೇರೆಗೆ ಕೇಂದ್ರ ಸರಕಾರ 10 ಅಧಿಕಾರಿಗಳನ್ನು ಒಳಗೊಂಡ 3 ತಂಡ ಗಳನ್ನು ಕಳುಹಿಸಿರುವುದು ನಿಜಕ್ಕೂ ಸ್ವಾಗತಾರ್ಹ.
ಆದರೆ ಈ ಬರ ಅಧ್ಯಯನ ತಂಡವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕು. ಈ ಹಿಂದೆ ಪ್ರವಾಹ ಇಲ್ಲವೇ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ ತಂಡಗಳು ಹವಾನಿಯಂತ್ರಿತ ಕಾರುಗಳಿಂದ ಕೆಳಗೆ ಇಳಿಯದೆ ರಸ್ತೆ ಬದಿಯಲ್ಲೇ ನಿಂತು ವೀಕ್ಷಣೆ ಮಾಡಿದ್ದರ ಬಗ್ಗೆ ರೈತರು, ಸಾರ್ವಜನಿಕರಿಂದಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಸಲ ಆ ರೀತಿ ಮಾಡದೇ ರೈತರ ಹೊಲ-ಗದ್ದೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚಿಸಿ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕೇ ಹೊರತು ಬರ ಅಧ್ಯಯನ ಒಂದು ಕಾಟಾಚಾರದ ಕೆಲಸವಾಗಬಾರದು. ಈ ನಿಟ್ಟಿನಲ್ಲಿ ರಾಜ್ಯದ ಕೃಷಿ, ಕಂದಾಯ, ತೋಟಗಾರಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಮಾಹಿತಿ ಪೂರೈಸಬೇಕು .
ರಾಜ್ಯಕ್ಕೆ ಆಗಮಿಸಿರುವ ಬರ ಅಧ್ಯಯನ ತಂಡದ ಜತೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಶೇ.90 ಬಿತ್ತನೆ ಆಗಿದ್ದು, ಅದರಲ್ಲಿ 42 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸುರು ಕಾಣಿಸಿದರೂ ಬೆಳೆಯಿಲ್ಲದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಹಸುರು ಬರ ತಲೆದೋರಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂದರೆ ರೈತರ ಭಾಷೆಯಲ್ಲಿ ಹೇಳುವುದಾದರೆ “ಗದ್ದೆಯಲ್ಲಿ ಹಸುರು, ಮನೆಯಲ್ಲಿ ಬಡತನ’ ಎಂಬಂತಿದೆ. ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರೇ ಹೆಚ್ಚಿದ್ದಾರೆ. ಬೆಳೆ ವಿಮೆ ಬಗ್ಗೆ ರೈತರಲ್ಲಿ ಇನ್ನೂ ಅಷ್ಟೊಂದು ಜಾಗೃತಿ ಮೂಡಿಲ್ಲ. ಹೀಗಾಗಿ ಎಲ್ಲರೂ ಬೆಳೆ ವಿಮೆ ಮಾಡಿಸಿರುವುದಿಲ್ಲ. ಈ ಮಧ್ಯೆ ಬೆಳೆ ಸಮೀಕ್ಷೆಯನ್ನು ಸಹ ಡಿಜಿಟಲೈಜ್ ಮಾಡಿರುವುದರಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಬೆಳೆ ವಿಮೆ ಕಂಪೆನಿಗಳು ಪರಿಹಾರಕ್ಕಾಗಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸದೆ ರೈತರಿಗೆ ಮಾನವೀಯತೆ ಆಧಾರದಲ್ಲಿ ಬೆಳೆ ವಿಮೆ ಪಾವತಿಸಬೇಕು. ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಬೆಳೆ ನಷ್ಟ ಪರಿಹಾರ ಕೂಡ ಅತ್ಯಂತ ಕಡಿಮೆ ಇದೆ. ಇದನ್ನು ಹೆಚ್ಚಿಸಬೇಕು.
ಆಗಸ್ಟ್‌ನಲ್ಲಿ 122 ವರ್ಷಗಳಲ್ಲೇ ಅತೀ ಕಡಿಮೆ ಮಳೆಯಾಗಿದ್ದು, ಜಲಾ ಶಯಗಳು ಬರಿದಾಗಿವೆ. ಸೆಪ್ಟಂಬರ್‌ನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಯಾಗಿದೆ. ಮುಂಗಾರು ಮಳೆ ಮುಗಿಯುವ ಹಂತಕ್ಕೆ ಬಂದಿದೆ. ಕುಡಿ ಯುವ ನೀರಿಗೆ ಅಭಾವ, ವಿದ್ಯುತ್ ಕೊರತೆಯ ಆತಂಕವನ್ನೂ ಸೃಷ್ಟಿ ಸಿದೆ. ಮಳೆಗಾಲದಲ್ಲೇ ಈ ಪರಿಸ್ಥಿತಿ ಎದುರಾದರೆ ಮುಂದೆ ಬರಲಿರುವ ಬೇಸಗೆ ಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು. ಉದ್ಯೋಗ ಸೃಷ್ಟಿ, ವಿದ್ಯುತ್ ಪೂರೈಕೆ ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಂತದಲ್ಲಿ ಕೇಂದ್ರ ಸರಕಾರ ರಾಜ್ಯದ ನೆರವಿಗೆ ಬರುವುದು ಅನಿವಾರ್ಯವಾಗಿದೆ.