ಮೈಸೂರು : ‘ಸಿದ್ದರಾಮೋತ್ಸವ’ ಶಕ್ತಿ ಪ್ರದರ್ಶನ ಅಲ್ಲ, ಇದು ಕೇವಲ ತಂದೆಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಅಷ್ಟೇ.ಇದರಲ್ಲಿ ರಾಜಕೀಯ ಹುಡುಕಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ. ಯತೀಂದ್ರ ಕೇಳಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಕತಾಳೀಯವಾಗಿ ಚುನಾವಣೆಯ ವರ್ಷವೇ ಅವರ ಅಮೃತ ಮಹೋತ್ಸವ ಬಂದಿದೆ. ಹೀಗಾಗಿ ಈ ವಿಚಾರ ಚರ್ಚೆಯಾಗುತ್ತಿದೆ. ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ಅಮೃತ ಮಹೋತ್ಸವ ಆಚರಿಸಿದರೆ ರಾಜಕೀಯವಾಗಿ ಬೇರೆ ರೀತಿಯ ಚರ್ಚೆಗಳು ಆಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಈ ಸಮಾರಂಭ ಆಯೋಜಿಸುತ್ತಿದ್ದೇವೆ ಎಂದರು.
ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವ ಪ್ರಶ್ನೆಯೇ ಇದರಲ್ಲಿ ಇಲ್ಲ.ಪಕ್ಷಕ್ಕೆ ಮೊದಲು ಬಹುಮತ ಬರಬೇಕು. ನಂತರ ಶಾಸಕರು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಹೈಕಮಾಂಡ್ ತನ್ನ ನಿಲುವು ತಿಳಿಸಬೇಕು, ಅಂತವರು ಸಿಎಂ ಆಗುತ್ತಾರೆ.ಈಗಲೇ ಅದನ್ನು ಬಿಂಬಿಸಿಕೊಳ್ಳುವ ಅಗತ್ಯ ಯಾರಿಗೂ ಇಲ್ಲ ಎಂದರು.