ಹಾವೇರಿ: ಪ್ರವಾಹದಿಂದ ಮನೆಗಳು ಹಾನಿಯಾಗಿ ವಾಸಿಸಲು ಇನ್ನೂ ಸಿದ್ಧವಾಗದ ಕಾರಣ ಹಾಗೂ ಪರಿಹಾರ ಕೇಂದ್ರಗಳ ಸ್ಥಾಪನೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಪರ್ಯಾಯ ಕ್ರಮವಾಗಿ ಜಿಲ್ಲಾಡಳಿತ ಸಂತ್ರಸ್ತರಿಗೆ ತಾತ್ಕಾಲಿಕ ತಗಡಿನ ಶೆಡ್ ನಿರ್ಮಾಣ ಮಾಡಿಕೊಡಲು ಸಿದ್ಧತೆ ನಡೆಸಿದೆ.
ಪ್ರವಾಹ ಕಡಿಮೆಯಾದರೂ ಬಹಳಷ್ಟು ಗ್ರಾಮಗಳ ಮನೆಗಳಲ್ಲಿ ತತಕ್ಷಣದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ನೆರೆಹಾವಳಿ ಗ್ರಾಮಗಳಲ್ಲಿ ಪರ್ಯಾಯವಾಗಿ ಶೆಡ್ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ಗ್ರಾಮಗಳ ಎತ್ತರ ಪ್ರದೇಶದ ಸರ್ಕಾರಿ ಜಮೀನು ಅಥವಾ ಸರ್ಕಾರಿ ಜಮೀನು ಸಿಗದಿದ್ದರೆ ಖಾಸಗಿ ಜಮೀನನ್ನು ಗುರುತಿಸಿ ಶೆಡ್‌ಗಳ ನಿರ್ಮಾಣ ಮಾಡಿ ಕೊಡಲು ಸಿದ್ಧತೆ ನಡೆಸಲಾಗಿದೆ.
ಮೊದಲ ಹಂತವಾಗಿ ಹಾವೇರಿ ತಾಲೂಕಿನ 11 ಗ್ರಾಮಗಳಲ್ಲಿ ಶೆಡ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಕಾರ್ಯ ಜರುಗಿದೆ. 835 ಶೆಡ್‌ಗಳ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಎರಡು ದಿನದಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಗುಯಿಲಗುಂದಿ, ಹಳೆ ಮೇಲ್ಮುರಿ, ಕೋಣನತಂಬಗಿ, ಕೆಸರಹಳ್ಳಿ, ಸಂಗೂರು, ವರದಾಹಳ್ಳಿ, ನಾಗನೂರು, ಕರ್ಜಗಿ, ಹೊಸರಿತ್ತಿ, ಕಂಚಾರಗಟ್ಟಿ ಹಾಗೂ ಹಳೆ ಕಿತ್ತೂರು ಗ್ರಾಮದಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
97.89 ಕೋಟಿ ನಷ್ಟ: ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಹಾನಿಯಾಗಿರುವ ಮೂಲ ಸೌಕರ್ಯಗಳ ಮರು ಸ್ಥಾಪನೆ ಕಾರ್ಯ ನಡೆಯುತ್ತಿದೆ. ಒಟ್ಟಾರೆ 5051 ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, 97.89 ಕೋಟಿ ರೂ.ನಷ್ಟು ಅಂದಾಜು ನಷ್ಟವಾಗಿದೆ. 7759 ಮನೆಗಳಿಗೆ ಹಾನಿಯಾಗಿದ್ದು, 45.90 ಕೋಟಿ ರೂ.ನಷ್ಟುವಾಗಿದೆ. 102.42 ಕೋಟಿ ರೂ. ನಷ್ಟು ತೋಟಗಾರಿಕೆ ಮತ್ತು ಕೃಷಿ ಭೂಮಿ ಹಾನಿಯಾಗಿದೆ. 2.21 ಕೋಟಿ ರೂ. ಕುಡಿಯುವ ನೀರು, 7.71 ಕೋಟಿ ರೂ. ವಿದ್ಯುತ್ ಸಂಪರ್ಕ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ತಂಡ ರಚನೆ: ಮನೆಹಾನಿ ಕುರಿತಂತೆ ಗ್ರಾಮವಾರು ಸಮೀಕ್ಷೆ ನಡೆಸಿ ವಿವರವನ್ನು ಸಂಗ್ರಹಿಸುವಂತೆ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ತಂಡ ರಚಿಸಿ ಜಂಟಿ ಸಹಿಯೊಂದಿಗೆ ಹಾನಿಯ ವಿವರವನ್ನು ಸಲ್ಲಿಸಲು ಸೂಚಿಸಲಾಗಿದೆ. ಬೆಳೆಹಾನಿ ಕುರಿತಂತೆ ಕೃಷಿ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಸಹಾಯಕ ಹಾಗೂ ಹಿರಿಯ ಸಹಾಯಕ ನಿರ್ದೇಶಕರು, ಕಂದಾಯ ಇಲಾಖಾ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಗ್ರಾಮವಾರು ಹಾಗೂ ಸರ್ವೇವಾರು ಜಮೀನಿನ ಬೆಳೆ ಹಾನಿ ಕುರಿತಂತೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಆರೋಗ್ಯಕ್ಕೆ ಗಮನ: ಶುದ್ಧ ನೀರಿನ ಪೂರೈಕೆ, ಜನ ಜಾನುವಾರುಗಳ ಸಾಂಕ್ರಾಮಿಕ ರೋಗಗಳ ತಡೆಗೆ ಎಲ್ಲ ಪ್ರಹಾವೋತ್ತರ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಮತ್ತು ಪಶು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸವಣೂರು ತಾಲೂಕಿನ ಕಳಸೂರು, ನದಿನೀರಲಗಿ, ಮಂತಗಿ, ಕೊರಡೂರ, ಕಾರವಾರ ಸಂಪರ್ಕ ರಸ್ತೆ, ನಾಗನೂರ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಹಲವು ರಸ್ತೆ ಹಾಗೂ ಕುಡಿಯುವ ನೀರಿನ ಘಟಕಗಳ ದುರಸ್ತಿ ಕೈಗೊಳ್ಳಲಾಗಿದೆ
ಆಹಾರ ಸಾಮಗ್ರಿ ಸ್ವೀಕಾರ: ಜಿಲ್ಲಾಡಳಿತ ಮನವಿಗೆ ಸ್ಪಂದಿಸಿದ ಜನರು ಅಕ್ಕಿ, ಬೆಳೆ, ಜೋಳ, ಬಟ್ಟೆ, ಹೊದಿಕೆ , ಅಡುಗೆ ಸಾಮಗ್ರಿಗಳು ಸೇರಿದಂತೆ ವಿವಿಧ ಪದಾರ್ಥಗಳನು ಸಂತ್ರಸ್ತರಿಗೆ ನೆರವಾಗಿ ನೀಡುತ್ತಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಾನಿಗಳು ನೀಡಿದ ಸಾಮಗ್ರಿಗಳನ್ನು ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸ್ವೀಕರಿಸಿದರು.