Advertisement

Numbers ಇಲ್ಲವೆಂದು ಎದೆಗುಂದಬೇಡಿ: ನೂತನ JDS ಶಾಸಕರಿಗೆ ಧೈರ್ಯ ತುಂಬಿದ ಹೆಚ್ ಡಿಡಿ

06:39 PM May 24, 2023 | Team Udayavani |

ಬೆಂಗಳೂರು: ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎದೆಗುಂದಬೇಡಿ. ಹಿಂದಿನ ಲೋಕಸಭೆಯಲ್ಲೂ ನಾನು ನಮ್ಮ ಪಕ್ಷದ ಪರವಾಗಿ ಒಬ್ಬನೇ ಇದ್ದೆ. ಈಗಲೂ ನಮಗೆ ಒಬ್ಬರೇ ಎಂಪಿ ಇದ್ದಾರೆ. ಹಾಗಂತ ನಮ್ಮ ಹೋರಾಟದ ಕೆಚ್ಚು ಕಡಿಮೆ ಆಗಿದೆಯಾ? ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಬುಧವಾರ ಗುಡುಗಿದರು.

Advertisement

ತಮ್ಮ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಪಕ್ಷದ ನೂತನ ಶಾಸಕರನ್ನು ಉದ್ದೇಶಿಸಿ ಹಿತನುಡಿಗಳನ್ನು ಆಡಿದರು. 19 ಸೀಟು ಗೆದ್ದಿದ್ದೇವೆ ಎಂಬ ಆತಂಕ ಬೇಡ. 119 ಸೀಟು ಗೆಲ್ಲುವ ದಿಕ್ಕಿನಲ್ಲಿ ಕೆಲಸ ಮಾಡೋಣ. ನಾನು ಬದುಕಿರುವ ತನಕ ಪಕ್ಷಕ್ಕಾಗಿ ದುಡಿಯುತ್ತೇನೆ. ನೀವು ಯಾರೂ ಧೈರ್ಯ ಕಳೆದುಕೊಳ್ಳಬೇಡಿ.ಚುನಾವಣೆಯಲ್ಲಿ ಸೋಲು ಗೆಲವು ಸಾಮಾನ್ಯ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಜನರ ಜತೆ ನಿಂತು ಕೆಲಸ ಮಾಡೋಣ. ಪ್ರಾಮಾಣಿಕತೆ, ಬದ್ಧತೆ, ಆಚಲತೆಯಿಂದ ದುಡಿದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವಲ್ಲ.ನಾನು ಕೂಡ ಸೋತಿದ್ದೇನೆ, ಗೆದ್ದಿದ್ದೇನೆ. ಸೋತಾಗ ಹೆದರಿ ಮನೆ ಸೇರಿಕೊಂಡಿಲ್ಲ, ಗೆದ್ದಾಗ ಬೀಗಿಲ್ಲ. ಎಲ್ಲಾ ಸಮಯದಲ್ಲೂ ಶ್ರದ್ಧೆ, ವಿನಯದಿಂದ ಜನರ ಕೆಲಸ ಮಾಡಿದ್ದೇನೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಿದ್ದೇನೆ ಎಂದರು.

1962ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದುಬಂದು ಈ ನೆಲ ಜಲಕ್ಕಾಗಿ ಹೋರಾಟ ನಡೆಸಿದವನು ನಾನು. ಒಬ್ಬನೇ ಶಾಸಕ ಎಂದು ನಾನು ಕೈಕಟ್ಟಿ ಕೂತಿದ್ದರೆ ಕಾವೇರಿ ನೀರಿನ ಸದ್ಬಳಕೆ ಸಾಧ್ಯ ಆಗುತ್ತಿತ್ತಾ? ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ತಲೆ ಎತ್ತುತ್ತಿದ್ದವಾ? ಮನಸ್ಸಿಟ್ಟು ಯೋಚನೆ ಮಾಡಿ, ಅಧೈರ್ಯಪಟ್ಟರೆ ಉಪಯೋಗವಿಲ್ಲ. ನಿಮ್ಮ ಜತೆ ಕುಮಾರಸ್ವಾಮಿ ಅವರು ನಿಲ್ಲುತ್ತಾರೆ, ಹೋರಾಟ ಮಾಡಿ.ಮುಂದೆ ಅನೇಕ ಚುನಾವಣೆಗಳು ಬರಲಿವೆ. ಲೋಕಸಭೆ ಚುನಾವಣೆ ಕೂಡ ಬರುತ್ತದೆ. ಈಗಿನಿಂದಲೇ ಕೆಲಸ ಮಾಡಿ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿ. ನಿಮ್ಮ ಜತೆ ನಾನು, ಕುಮಾರಸ್ವಾಮಿ ಅವರು ಇರುತ್ತೇವೆ. ಹೆದರಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹೆದರಿ ಕೂತರೆ ಏನನ್ನೂ ಸಾಧನೆ ಮಾಡಿದಂತೆ ಆಗುವುದಿಲ್ಲ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ನೂತನ ಶಾಸಕರ ಜತೆ ಮಾತುಕತೆ ನಡೆಸಿದರು.ಈ ಸರಕಾರ ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ. ಆಗಲೇ ಅಧಿಕಾರಕ್ಕಾಗಿ ಕಿರಿಕಿರಿ ಮಾಡಿಕೊಳ್ಳುತ್ತಿದ್ದಾರೆ. ನಮಗೆ ಅವರ ರಾಜಕೀಯ ಬೇಕಿಲ್ಲ. ಜನತೆಗೆ ಅವರು ಕೊಟ್ಟ ವಚನ ಪಾಲಿಸುವಂತೆ ಹೋರಾಟ ಮಾಡೋಣ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಹಿರಿಯ ಶಾಸಕರಾದ ಜಿ.ಟಿ.ದೇವೇಗೌಡರು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಪಕ್ಷದ ಎಲ್ಲಾ ನೂತನ ಶಾಸಕರು ಸಭೆಯಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next