Advertisement

ಬಾಕಿ ಕೇಳಬೇಡಿ; ವಿದ್ಯುತ್‌ ಕೊಡೋದು ಮರಿಬೇಡಿ!

06:18 PM Nov 09, 2022 | Team Udayavani |

ಬಾಗಲಕೋಟೆ: ಕೆಲಸಕ್ಕೆ ಕರಿಬೇಡಿ, ಊಟಕ್ಕೆ ಮರಿಬೇಡಿ ಎಂಬ ಗಾದೆ ಮಾತಿದೆ. ಹಾಗೆಯೇ ವಿದ್ಯುತ್‌ ಬಾಕಿ ಪಾವತಿ ವಿಷಯದಲ್ಲೂ ಜಿಲ್ಲೆಯ ಕೆಲವೊಂದು ಗ್ರಾಪಂಗಳು ನಡೆದುಕೊಳ್ಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಹೌದು. ವಿದ್ಯುತ್‌ ಪೂರೈಕೆ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಆದರೆ ಬಾಕಿ ಮಾತ್ರ ಕೇಳಬೇಡಿ ಎಂಬಂತೆ ವರ್ತಿಸುತ್ತಿವೆ ಎನ್ನಲಾಗಿದೆ.

Advertisement

ಏಕೆಂದರೆ ಕೆಲವು ಗ್ರಾಪಂಗಳ ಪಿಡಿಒಗಳು, ಆಯಾ ಗ್ರಾಮಗಳ ಕುಡಿಯುವ ನೀರು ಪೂರೈಕೆ,ಬೀದಿದೀಪ ನಿರ್ವಹಣೆ ಹೊಣೆ ನಮ್ಮದಲ್ಲ. ನಮ್ಮದೇನಿದ್ದರೂ ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಎಂಬಂತಿವೆ. ವಿದ್ಯುತ್‌ ಬಾಕಿ ವಿಷಯದಲ್ಲಿ ಬಹುತೇಕ ಗ್ರಾಪಂಗಳೂ ಹಾಗೆ ನಡೆದುಕೊಳ್ಳುತ್ತಿವೆ ಎಂಬುದು ಹೆಸ್ಕಾಂ ಅಧಿಕಾರಿಗಳ ಬೇಸರದ ಮಾತು.

19 ಗ್ರಾಪಂನಿಂದ ತಲಾ 10 ಲಕ್ಷಕ್ಕೂ ಹೆಚ್ಚು: ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕು ಸೇರಿ ಒಟ್ಟು 19 ಗ್ರಾಮ ಪಂಚಾಯಿತಿಗಳು, ತಲಾ 10ಲಕ್ಷಕ್ಕೂ ಅಧಿಕ ವಿದ್ಯುತ್‌ ಬಾಕಿ ಉಳಿಸಿಕೊಂಡಿವೆ. ಅದರಲ್ಲೂ ಜಮಖಂಡಿ ನಗರಕ್ಕೆ ಹೊಂದಿಕೊಂಡಿರುವ ಹುನ್ನೂರ ಗ್ರಾಪಂ ಇಡೀ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ 77.57 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಇನ್ನು ಕನ್ನೊಳ್ಳಿ ಗ್ರಾಪಂ 11.98 ಲಕ್ಷ ಬಾಕಿ ಉಳಿಸಿಕೊಂಡಿದ್ದು, ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂನಲ್ಲಿ ಇದು ಕೊನೆಯಲ್ಲಿದೆ.

ಜಮಖಂಡಿ ತಾಲೂಕಿನ 26, ರಬಕವಿ- ಬನಹಟ್ಟಿ ತಾಲೂಕಿನ 17 ಗ್ರಾಪಂ ಸಹಿತ ಒಟ್ಟು 38 ಗ್ರಾಪಂಗಳಿಂದ ಹೆಸ್ಕಾಂಗೆ ಬರೋಬ್ಬರಿ 903.32 ಲಕ್ಷ (9.03 ಕೋಟಿ) ಬಾಕಿ ಇದೆ. ಈ ಬಾಕಿ ಪಾವತಿಗೆ ಹೆಸ್ಕಾಂನಿಂದ ಈಗಾಗಲೇ ನೋಟಿಸ್‌ ಕೊಟ್ಟಿದ್ದು, ತಲಾ 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳ ಕುಡಿಯುವ ನೀರು ಪೂರೈಕೆ ಹಾಗೂ ಬೀದಿದೀಪಗಳಿಗೆ ಪೂರೈಸುವ ವಿದ್ಯುತ್‌ ಅನ್ನು ಅ.16ರಿಂದ ಕಡ್ಡಾಯ ಕಡಿತಗೊಳಿಸುವುದಾಗಿ ಹೇಳಿದೆ.

ನೀರು ಪೂರೈಕೆಯಿಂದ 5.61 ಕೋಟಿ: ಅವಿಭಜಿತ ಜಮಖಂಡಿ ತಾಲೂಕಿನ 38 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 1176 ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 461.67 ಲಕ್ಷ, 62.78 ಲಕ್ಷ ಬಡ್ಡಿ ಸೇರಿದಂತೆ ಸೆಪ್ಟಂಬರ್‌ ಅಂತ್ಯಕ್ಕೆ 561.81 ಲಕ್ಷ ಬಾಕಿ ಬರಬೇಕಿದೆ. ಇನ್ನು ಬೀದಿದೀಪಗಳಿಗಾಗಿ 328 ಸ್ಥಾವರಗಳಿದ್ದು, ಅವುಗಳಿಂದ 22.04 ಲಕ್ಷ ಬಾಕಿ ಉಳಿದಿದೆ.

Advertisement

ಪ್ರಭಾವಿಗಳಿಂದ ಫೋನ್‌ ಕರೆ: 2021ರ ಕಳೆದ ಸೆಪ್ಟಂಬರ್‌ನಲ್ಲಿ ಜಿಲ್ಲೆಯಾದ್ಯಂತ ಅಭಿಯಾನ ನಡೆಸಿ ವಿದ್ಯುತ್‌ ಬಾಕಿ ಕೊಡಲು ತಿಳಿಸಲಾಗಿತ್ತು. ಪ್ರತಿ ಗ್ರಾಪಂ ಮಟ್ಟದಲ್ಲೂ ಕುರಿತು ಹೆಸ್ಕಾಂನಿಂದ ಎಚ್ಚರಿಕೆಯ ನೋಟಿಸ್‌ ನೀಡಿದ್ದು, ಆಗ ಜಿಲ್ಲೆಯಾದ್ಯಂತ ಒಟ್ಟು 60ರಿಂದ 70 ಗ್ರಾಪಂಗಳು ಒಟ್ಟು 11 ಕೋಟಿಯಷ್ಟು ಬಾಕಿ ಪಾವತಿಸಿದ್ದವು. ಅಂದಿನಿಂದ ಪ್ರತಿ ತಿಂಗಳು ಪ್ರತಿಯೊಂದು ಗ್ರಾಪಂಗೂ ಆಯಾ ತಿಂಗಳ ವಿದ್ಯುತ್‌ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲು ಸ್ವತಃ ಜಿಪಂ ಸಿಇಒ, ಆಯಾ ತಾಪಂ ಇಒಗಳಿಗೆ ಮಾಹಿತಿ ಪತ್ರ ಹಾಗೂ ಗ್ರಾಪಂ ಪಿಡಿಒಗಳಿಗೆ ನೋಟಿಸ್‌ ಕೂಡ ಕೊಡಲಾಗುತ್ತಿದೆ.

ಕೆಲವು ಗ್ರಾಪಂಗಳ ಪಿಡಿಒಗಳು ನಿಯಮಿತವಾಗಿ ವಿದ್ಯುತ್‌ ಬಾಕಿ ಪಾವತಿಸಿದರೆ, ಇನ್ನೂ ಕೆಲವು ಪಂಚಾಯಿತಿಗಳ ಪಿಡಿಒಗಳು ಬಾಕಿಯೇ ಪಾವತಿಸಲ್ಲ. ಅತ್ಯಧಿಕ ವಿದ್ಯುತ್‌ ಬಾಕಿ ಉಳಿಸಿಕೊಳ್ಳುವ ಗ್ರಾಪಂಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದಾಗ, ಆಯಾ ಕ್ಷೇತ್ರದ ಶಾಸಕರು, ಇಲ್ಲವೇ ಸಚಿವರಿಂದ ಕರೆ ಮಾಡಿಸಿ, ಒತ್ತಡ ಹಾಕುವ ಪ್ರಸಂಗಗಳೂ ನಡೆಯುತ್ತಿವೆ. ಇಂತಹ ವಿಷಯದಲ್ಲಿ ಇಂಧನ ಸಚಿವ ಸುನೀಲಕುಮಾರವರೆಗೂ ಕೆಲವರು ಫೋನ್‌ ಕರೆ ಮಾಡಿದ ಪ್ರಸಂಗ ನಡೆದಿವೆ ಎನ್ನಲಾಗಿದೆ.ಯಾವುದಕ್ಕೂ ಹೆಸ್ಕಾಂ ಮಾತ್ರ ಈ ಬಾರಿ ಜಗ್ಗುವ ಪ್ರಸಂಗ ಬರಲ್ಲ. ಬಾಕಿ ಕೊಡದ ಗ್ರಾಪಂ ವಿದ್ಯುತ್‌ ಸಂಪರ್ಕ ಯಾವುದೇ ಮುಲಾಜಿಲ್ಲದೇ
ಕಡಿತಗೊಳ್ಳಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಶ್ರೀಶೈಲ ಕೆ. ಬಿರಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next