ತಾಳಿಕೋಟೆ: ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿಯಲ್ಲಿ ಪ್ರವಾಹ ಉಕ್ಕಿ ಬಂದಿದ್ದರಿಂದ ಹಡಗಿನಾಳ ಗ್ರಾಮಕ್ಕೆ ತೆರಳುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಪುನರ್ವಸತಿ ಹಡಗಿನಾಳ ಗ್ರಾಮ ಒಳಗೊಂಡು ಅನೇಕ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯುಂಟಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ವಲ್ಪೇ ಮಳೆಯಾದರೂ ನದಿಯಲ್ಲಿ ತುಂಬಿ ಬರುವ ನೀರಿನ ಪ್ರವಾಹ ನದಿತೀರದ ಗ್ರಾಮಸ್ಥರಿಗೆ ತೊಂದರೆಯುಂಟು ಮಾಡುತ್ತಸಾಗಿದೆ. ಅಲ್ಲದೇ ನದಿ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬಿತ್ತಿದ ಬೆಳೆ ಕೊಚ್ಚಿಕೊಂಡು ಹೋದ ಉದಾಹರಣೆಗಳು ಸಾಕಷ್ಟು ಜರುಗಿವೆ. ಪುರಾತನ ಕಾಲದ ಡೋಣಿ ನದಿಯಲ್ಲಿ ದಶಕಗಳಿಂದಲೂ ತುಂಬಿಕೊಂಡಿರುವ ಹೂಳು ಈ ಹಾನಿ ಸಂಭವಿಸಲು ಕಾರಣವಾಗುತ್ತಿದೆ.
ಕಳೆದ ವರ್ಷವೂ ಸುರಿದ ಮಳೆಯಿಂದ ಮೈದುಂಬಿ ಬಂದ ಡೋಣಿ ನದಿಯಲ್ಲಿ ದನ ಕರುಗಳು ಹಾಗೂ ಮೂವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆಗಳು ಇನ್ನೂ ಮಾಸಿಲ್ಲ. ಕೆಲವು ವಾಹನ ಸವಾರರು ನದಿ ದಾಟುವ ವೇಳೆ ವಾಹನ ಸಮೇತವಾಗಿ ಕೊಚ್ಚಿಕೊಂಡು ಹೋಗಿರುವ ಘಟನೆಗಳೂ ಸಹ ಜರುಗಿವೆ.
ಸುಮಾರು ದಶಕಗಳಿಂದಲೂ ಡೋಣಿ ನದಿಯಲ್ಲಿ ತುಂಬಿಕೊಂಡಿರುವ ಹೂಳು ಎತ್ತಲು ಶಾಸಕ, ಸಚಿವರಿಗೆ ಹಾಗೂ ಮುಖ್ಯಮಂತ್ರಿವರೆಗೂ ವಿವಿಧ ಸಂಘಟಕರು ಹಾಗೂ ಸಾರ್ವಜನಿಕರು ಮನವಿ ಮಾಡುತ್ತ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಪುನರ್ವಸತಿ ಹಡಗಿನಾಳ ಗ್ರಾಮಕ್ಕೆ ತೆರಳುವ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಿಸಲು ಸರ್ಕಾರದಿಂದ 20 ಕೋಟಿ ರೂ. ಮಂಜೂರಾಗಿ ಹೈದ್ರಾಬಾದ್ ಮೂಲದ ಕಂಪನಿಗೆ ಟೆಂಡರ್ ಕೂಡಾ ಆಗಿ ವರ್ಷ ಕಳೆದರೂ ಇನ್ನೂವರೆಗೂ ಕಾಮಗಾರಿ ಆರಂಭವಾಗಿಲ್ಲ. ಕಳೆದ 6 ತಿಂಗಳ ಹಿಂದೆ ಈ ಸೇತುವೆಗೆ ಹಿಂದಿನ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ಸಿ.ಎಸ್. ನಾಡಗೌಡ ಅವರು ಚಾಲನೆ ನೀಡಿ ಹೋಗಿದ್ದು ನೆಪಕ್ಕೆ ಮಾತ್ರ ಎಂಬಂತಾಗಿದೆ.
ದಿನನಿತ್ಯ ಕೂಲಿ ಅರಸಿ ಈ ಕೆಳಮಟ್ಟದ ಸೇತುವೆ ಮೇಲೆ ಕಾಲ್ನಡಗಿ ಮೂಲಕ ತಾಳಿಕೋಟೆ ಪಟ್ಟಣಕ್ಕೆ ಆಗಮಿಸುವ ಹಡಗಿನಾಳ, ಶಿವಪುರ, ಕಲ್ಲದೇವನಳ್ಳಿ ಗ್ರಾಮಸ್ಥರಿಗ ಡೋಣಿ ನದಿ ಪ್ರವಾಹ ಅಡಚಣೆ ಮಾಡುತ್ತಿದೆ. ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕಿದೆ.
ಡೋಣಿ ನದಿಯಲ್ಲಿ ತುಂಬಿಕೊಂಡಿರುವ ಹೂಳು ಎತ್ತುವ ಸಲುವಾಗಿ ಶಾಸಕ, ಸಚಿವರಿಂದ ಸಿಎಂವರೆಗೆ ಸಾಕಷ್ಟು ಬಾರಿ
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಳಮಟ್ಟದ ಸೇತುವೆ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಜೈಭೀಮ ಮುತ್ತಗಿ, ಕರವೇ ತಾಲೂಕು ಉಪಾಧ್ಯಕ್ಷ
ಜಿ.ಟಿ. ಘೋರ್ಪಡೆ