ಬನ್ನೂರು: ಡೆಂಘೀ ಮತ್ತು ಚಿಕುನ್‌ಗುನ್ಯ ಸೋಂಕು ತಗುಲಿದ ಈಡಿಸ್ ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೂಬ್ಬರಿಗೆ ರೋಗಗಳು ಹರಡುತ್ತವೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಗಂಗಾಧರ್ ಹೇಳಿದರು.
ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಡೆಂಗೀ ಮತ್ತು ಚಿಕುನ್‌ಗುನ್ಯರದ ಬಗ್ಗೆ ಜಾಗೃತಿ ಜಾಥಾ ನಂತರ ಮಾತನಾಡಿ, ಸೊಳ್ಳೆಯ ಹತೋಟಿಯಿಂದ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಪ್ರತಿಯೊಬ್ಬರು ಮನೆಯ ಒಳಗೆ ಹಾಗೂ ಹೊರಗೆ ನೀರನ್ನು ಶೇಖರಿಸುವಂತ ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆ, ಒರಳು ಕಲ್ಲು, ಹೂವಿನ ಕುಂಡಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಮನೆಯಲ್ಲಿ ಉತ್ಪತ್ತಿಯಾಗುವಂತ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳ, ಚರಂಡಿ, ಖಾಲಿ ನಿವೇಶನಗಳಲ್ಲಿ ಎಸೆಯದೆ ಪುರಸಭೆಯಿಂದ ಬರುವ ವಾಹನಗಳಿಗೆ ನೀಡುವ ಮೂಲಕ ತಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪರಿಸರ ಅಭಿಯಂತರ ಧನಂಜಯ್ ಮಾತನಾಡಿ, ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿ ಲಭ್ಯವಿಲ್ಲ, ಆದರೆ ರೋಗದ ಲಕ್ಷಣಕ್ಕೆ ಅನುಗುಣವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಉಚಿತ ಚಿಕಿತ್ಸೆಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಕಣ್ಣು ಕೆಂಪಾಗುವುದು, ಸ್ನಾಯು ನೋವು, ಕೈಕಾಲು ಅಲ್ಲಾಡಿಸಲು ಕಷ್ಟವಾಗುವುದು, ಮೈ ಬಾಗುವಿಕೆ, ಜಡತ್ವ, ಬಾಪು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣವಾಗಿದೆ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕ ಗಮನ ಸೆಳೆದರು. ಪುರಸಭೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ರಾಮಲಿಂಗೇಗೌಡ, ಮುಖ್ಯಾಧಿಕಾರಿ ಕೆ.ಎಸ್.ಗಂಗಾಧರ್, ಆರೋಗ್ಯಾಧಿಕಾರಿ ಸಂತೋಷ್‌ಕುಮಾರ್, ಪದ್ಮನಾಭ್, ಅನಂತಮೂರ್ತಿ, ರಮೇಶ್, ನಂಜೇಗೌಡ, ಗುರುಚಕ್ರವರ್ತಿ, ಕುಮಾರ್, ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತಿರಿದ್ದರು.