ಜ್ಯೋತಿ, : ಕೊಂಕಣಿ, ತುಳು, ಬ್ಯಾರಿ, ಕನ್ನಡ ಸೇರಿದಂತೆ ರಂಗಭೂಮಿಯ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಕಳೆದ 70 ವರ್ಷಗಳಿಂದ ಅವಕಾಶ ನೀಡಿದ ಮಂಗಳೂರಿನ ಹೆಗ್ಗುರುತು “ಡಾನ್ ಬಾಸ್ಕೋ’ ರಂಗಮಂದಿರ ಇದೀಗ ನವೀಕರಣಗೊಳ್ಳುತ್ತಿದ್ದು, ಆಧುನಿಕ ಚೆಲುವಿಗೆ ಬದಲಾಗಲಿದೆ
1943ರಲ್ಲಿ ಹುಟ್ಟಿಕೊಂಡ “ಕೊಂಕಣಿ ನಾಟಕ್ ಸಭಾ’ ಸಂಸ್ಥೆಯ ಮೂಲಕ “ಡಾನ್ ಬಾಸ್ಕೋ’ ರಂಗಮಂದಿರ 70 ವರ್ಷಗಳ ಹಿಂದೆ ಆರಂಭಗೊಂಡಿತ್ತು. ನಾಟಕದ ಮೂಲಕ ನೈತಿಕ ಮೌಲ್ಯ, ಜೀವನ ಶೈಲಿ ಒಳಗೊಂಡ ಧಾರ್ಮಿಕ ಸಾಧನೆ ಎಂಬ ಸಂಕಲ್ಪದೊಂದಿಗೆ ರಂಗಮಂದಿರ ರೂಪುಗೊಂಡಿತ್ತು.
ಇದನ್ನೂ ಓದಿ:ತಾ.ಪಂ. ರದ್ದತಿ ಪ್ರಸ್ತಾವ: ಕೆಲವರಿಗೆ ಆತಂಕ, ಹಲವರಿಗೆ ನಿರಾತಂಕ!
ಸುದೀರ್ಘ ವರ್ಷ ನಾಟಕ/ಸಂಗೀತ/ನಾಟ್ಯ ಸಹಿತ ವಿವಿಧ ಪ್ರಕಾರಗಳಲ್ಲಿ ಡಾನ್ ಬಾಸ್ಕೋ ಸಾವಿರಾರು ಪ್ರದರ್ಶನಗಳ ಮೂಲಕ ಅವಕಾಶ ಕಲ್ಪಿಸಿತ್ತು. ಕರಾವಳಿಯ ಮೊದಲ ರಂಗಮಂದಿರ ಎಂಬ ಮಾನ್ಯತೆ ಕೂಡ ಇದಕ್ಕಿದೆ.
ಇದು 650 ಆಸನಗಳನ್ನು ಹೊಂದಿದೆ. ವಿಶಾಲವಾದ ಮೂರು ಸಾಲು ಕುರ್ಚಿ ಹಾಕಬಲ್ಲ ಉತ್ತಮ ವೇದಿಕೆಯಿದೆ. ನಾಟಕ ಸಂಬಂಧಿತ ಎಲ್ಲ ವ್ಯವಸ್ಥೆಗಳನ್ನು ಜೋಡಿಸಲು ಇಲ್ಲಿ ಅವಕಾಶವಿದೆ. ಪ್ರಸಾಧನ ಕೊಠಡಿ, ತಾತ್ಕಾಲಿಕ ವಿಶ್ರಾಂತಿ ಸ್ಥಳ ಕೂಡ ಇದೆ. ಪ್ರೇಕ್ಷಕರಿಗೆ ಸೂಕ್ತವೆನಿಸುವ ಆಸನ ವ್ಯವಸ್ಥೆ ಇಲ್ಲಿದೆ.
ಕೊಂಕಣಿ ನಾಟಕ್ ಸಭಾ ಕಾರ್ಯ ದರ್ಶಿ ಪ್ಲೋಯಿಡ್ ಡಿಮೆಲ್ಲೋ “ಉದಯವಾಣಿ-ಸುದಿನ’ ಜತೆಗೆ ಮಾತನಾಡಿ, ” 70 ವರ್ಷಗಳ ಹಳೆಯ ಡಾನ್‌ಬಾಸ್ಕೋ ಇದೀಗ ನವೀಕರಣಕ್ಕೆ ಸಿದ್ಧವಾಗಿದೆ. ರಂಗಮಂದಿರದ ಮೂಲ ಚೆಲುವಿಗೆ ಯಾವುದೇ ಧಕ್ಕೆ ಆಗದಂತೆ ಹಲವು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ರೂಫ್ ಕೆಲಸ, ಪ್ಲಾಸ್ಟರಿಂಗ್, ಆಸನ ವ್ಯವಸ್ಥೆ ಬದಲಾವಣೆ ಸಹಿತ ವಿವಿಧ ಬದಲಾವಣೆಗಳನ್ನು ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾ ಚಟುವಟಿಕೆಗಳಿಗೆ ಪೂರಕವೆನಿಸುವ, ಕಡಿಮೆ ದರದಲ್ಲಿ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಮುಂದಿನ ನಾಲ್ಕು ತಿಂಗಳುಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ’ ಎಂದರು.