Advertisement

“ಹಳೆ ಮನೆ ದುರಸ್ತಿಗಾದರೂ ಅನುದಾನ ಕೊಡಿ’

11:25 PM Dec 18, 2019 | mahesh |

ಕೆಯ್ಯೂರು: ಸರಕಾರದಿಂದ ಮಂಜೂರಾಗುವ ಮನೆಗೆ ಅರ್ಜಿ ಕೊಟ್ಟು ಸಾಕಾಯಿತು. ಮನೆ ಮಂಜೂರಾಗಿಲ್ಲ. ಹಳೆ ಮನೆ ಬೀಳುವ ಹಂತದಲ್ಲಿದೆ. ಅದರ ದುರಸ್ತಿಗೆ ಅನುದಾನ ಕೇಳಿದರೆ ಕೊಡುತ್ತಿಲ್ಲ. ಸರಕಾರ ಮನೆ ಮಂಜೂರು ಮಾಡುತ್ತಿಲ್ಲ, ಹಳೆ ಮನೆ ದುರಸ್ತಿಗಾದರೂ ಅನುದಾನ ಕೊಡಿಸುವ ವ್ಯವಸ್ಥೆ ಮಾಡಿ ಎಂದು ಕೆಯ್ಯೂರು ಗ್ರಾಮದ ದೇರ್ಲ ದಲಿತ ಕಾಲನಿ ನಿವಾಸಿಗಳು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

Advertisement

ಪುತ್ತೂರು ತಾ.ಪಂ., ಕೆಯ್ಯೂರು ಗ್ರಾ.ಪಂ. ಮತ್ತು ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವನಗರ ಕಾರ್ಕಳ ಇದರ ಆಶ್ರಯದಲ್ಲಿ “ಜನರ ಬಳಿಗೆ ನಮ್ಮ ಗ್ರಾ.ಪಂ.’ ಕಾರ್ಯಕ್ರಮ ದೇರ್ಲ ಪರಿಶಿಷ್ಟ ಜಾತಿ ಕಾಲನಿಯಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಬಾಬು ಬಿ. ಕಾರ್ಯಕ್ರಮ ಉದ್ಘಾಟಿಸಿ, ಗ್ರಾ.ಪಂ.ನಿಂದ ಸಾಧ್ಯವಾಗುವ ಎಲ್ಲ ಸೌಲಭ್ಯಗಳನ್ನು ಕಾಲನಿಗಳಿಗೆ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ. ಸರಕಾರದಿಂದ ಹೊಸ ಮನೆ ಮಂಜೂರು ಆಗದೆ ಮತ್ತು ಹಳೆ ಮನೆ ದುರಸ್ತಿಗೆ ಅನುದಾನ ನೀಡಲು ಆದೇಶ ಇಲ್ಲದೆ ಈ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಆಗಬೇಕು ಎಂದರು.

ಹೊಸ ಬಾವಿ ಕೊರೆಯಲು ಉದ್ಯೋಗ ಖಾತರಿಯಲ್ಲಿ ಅವಕಾಶ ಇದೆ. ಆದರೆ ಹಳೆ ಬಾವಿ ದುರಸ್ತಿಗೂ ಅವಕಾಶ ನೀಡಬೇಕು ಎಂದು ದಲಿತ ಕಾಲನಿ ನಿವಾಸಿಗಳು ಆಗ್ರಹಿಸಿದರು. ಕಾಲನಿಗೆ ದಾರಿದೀಪ, ಚರಂಡಿ ವ್ಯವಸ್ಥೆ, ಶ್ಮಶಾನ, ಅಂಬೇಡ್ಕರ್‌ ಭವನ ಇತ್ಯಾದಿ ಬೇಡಿಕೆಗಳ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ತಾ.ಪಂ. ಸಹಾಯಕ ನಿರ್ದೇಶಕ ಸಂದೇಶ್‌ ಮಾತನಾಡಿ, ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಕೆ.ಎಂ. ಗ್ರಾ.ಪಂ. ಹಾಗೂ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕಾಲನಿ ನಿವಾಸಿಗರ ಬೇಡಿಕೆಗಳು
ಕಾಲನಿಯದಲ್ಲಿ ದೇವಸ್ಥಾನದ ಬಳಿ ತಡೆಗೋಡೆ ಆಗಬೇಕಿದೆ ಎಂದು ಶೀನ ತಿಳಿಸಿದರು. ಚರಂಡಿಯಲ್ಲಿ ಮಣ್ಣು ತುಂಬಿದ್ದರಿಂದ ನೀರು ಮನೆ ಅಂಗಳಕ್ಕೆ ಬರುತ್ತಿದೆ. ಚರಂಡಿ ದುರಸ್ತಿ ಮಾಡಿಸಬೇಕು. ಕಾಲನಿಯಲ್ಲಿ ಅಂಬೇಡ್ಕರ್‌ ಭವನ ಕಟ್ಟಿಸಬೇಕು ಎಂದು ಸ್ಥಳೀಯರು ಹೇಳಿದರು. ಯಶಸ್ವಿ ನಾಗರೀಕ ಸೇವಾ ಸಂಘ ವಾಸುದೇವನಗರ ಕಾರ್ಕಳ ಇದರ ಸಂಯೋಜಕ ಮುರಳೀಧರ್‌ ಕಾಲನಿ ನಿವಾಸಿಗಳೊಂದಿಗೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು. ಗ್ರಾ.ಪಂ. ಸದಸ್ಯ ಎ.ಕೆ. ಜಯರಾಮ ರೈ ಮಾಹಿತಿ ನೀಡಿದರು.

ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರಾದ ಗೀತಾ, ಕಾಲನಿ ನಿವಾಸಿಗಳಾದ ಜಯರಾಮ ದೇರ್ಲ, ಲೀಲಾವತಿ ಬಿ., ಪುರಂದರ ಡಿ., ಕಂಜೋಲಿ, ಸುಂದರಿ, ಲೀಲಾವತಿ, ಗಿರಿಜಾ, ಯಶೋದಾ, ಅಪ್ಪಿ, ಲಲಿತಾ, ಸುನೀತಾ, ಬೊಮ್ಮಿ, ಕುಕ್ಕೆದಿ, ಹುಕ್ರು, ತಾರಾ, ರಾಜೀವಿ ಉಪಸ್ಥಿತರಿದ್ದರು. ಪಂ. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿದರು. ಸಿಬಂದಿ ಶಿವಪ್ರಸಾದ್‌, ರಾಕೇಶ್‌ ಸಹಕರಿಸಿದರು.

Advertisement

ದಾರಿದೀಪ ಇಲ್ಲ
ದೇರ್ಲ ಕಾಲನಿಯಲ್ಲಿ 250ಕ್ಕಿಂತಲೂ ಹೆಚ್ಚು ಮನೆಗಳಿವೆ. ಶ್ಮಶಾನದ ವ್ಯವಸ್ಥೆ ಆಗಬೇಕು ಎಂದು ಹಲವು ವರ್ಷಗಳಿಂದ ಅರ್ಜಿ ನೀಡುತ್ತಿದ್ದೇವೆ. ಆದರೆ ಬೇಡಿಕೆ ಈಡೇರಿಲ್ಲ. ದಾರಿದೀಪ ಅಥವಾ ಸೋಲಾರ್‌ ದೀಪಗಳ ವ್ಯವಸ್ಥೆಯೂ ಇಲ್ಲ ಎಂದು ಶೀನ ದೇರ್ಲ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಸುಬ್ರಹ್ಮಣ್ಯ, ಶ್ಮಶಾನದ ಬಗ್ಗೆ ಕಂದಾಯ ಇಲಾಖೆಗೆ ಬರೆದುಕೊಳ್ಳಲಾಗಿದೆ. ದಾರಿ ದೀಪವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next