Advertisement

ರಕ್ತದಾನ ಮಾಡಿ ಬೇರೊಂದು ಜೀವ ಕಾಪಾಡಿ

04:52 PM Sep 25, 2022 | Team Udayavani |

ಶಿಗ್ಗಾವಿ: ಪ್ರತಿ ಜೀವಿಗೆ ಅಮೂಲ್ಯವಾದ ರಕ್ತದ ಅವಶ್ಯಕತೆಯಿದೆ. ಅವಘಡ, ಅಪಘಾತದ ಸಂದರ್ಭದಲ್ಲಿ ಜೀವ ಬದುಕಿಸಲು ಇನ್ನೊಬ್ಬರಿಂದ ದಾನರೂಪದಲ್ಲಿ ಸಂಗ್ರಹವಾದ ರಕ್ತ ಮತ್ತೆ ಮರು ಜೀವ ತುಂಬುತ್ತದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

Advertisement

ಪ್ರಧಾನಿ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸವಣೂರು ರಸ್ತೆಯಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಸಭಾಭವನದಲ್ಲಿ ಶಿಗ್ಗಾವಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತ ಎಂದರೆ ಜೀವಿಯ ದೇಹದ ಶಕ್ತಿ. ಅದೊಂದು ಜೀವ. ಆದ್ದರಿಂದ ಮತ್ತೂಂದು ಜೀವಕ್ಕೆ ಜೀವ ಕೊಡುವ ಶಕ್ತಿ ಅದಾಗಿದೆ. ನಾವು ಮಾಡುವ ರಕ್ತದಾನ ಮಹಾಪುಣ್ಯದ ಕೆಲಸ ಎಂದರು.

ಶಿಗ್ಗಾವಿ ಮಹಿಳಾ ಮೋರ್ಚಾ ವಿಶೇಷವಾಗಿ ಸತತ ಏಳು ದಿನಗಳ ಕಾಲ ಮೋದಿ ಅವರ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಜೊತೆಗೆ ಎಲ್ಲ ಮೋರ್ಚಾಗಳಿಂದ ವಿವಿಧ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಆರೋಗ್ಯ ಸೇವೆಗೆ ಮುಂದಾಗಿದ್ದೇವೆ. ಸಿಎಂ ಬೊಮ್ಮಾಯಿ ಅವರ ಸ್ಫೂರ್ತಿಯಿಂದ ಅವರ ಅನುಪಸ್ಥಿತಿಯಲ್ಲಿ ಇಂತಹ ಕಾರ್ಯಗಳನ್ನು ಕ್ಷೇತ್ರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಹಾವೇರಿ ವೈದ್ಯಕೀಯ ರಕ್ತ ನಿಧಿ ಕೇಂದ್ರದ ಡಾ|ಬಸವರಾಜ ತಳವಾರ ಮಾತನಾಡಿ, ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ರಕ್ತದಾನ ಮಾಡಲು ಆದೇಶ ನೀಡಲಾಗಿದೆ. ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಂಡು ಅರ್ಥ ಪೂರ್ಣವಾಗಿ ಆಚರಿಸಬೇಕು. ಹೆಚ್ಚು ರಕ್ತ ಸಂಗ್ರಹ ಶಿಗ್ಗಾವಿ ಕ್ಷೇತ್ರದಿಂದ ಆಗಿದೆ. ಆರೋಗ್ಯವಂತರು ರಕ್ತದಾನ ಮಾಡಿ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ. ಪ್ರತಿ ವರ್ಷ ಆರೋಗ್ಯ ಇಲಾಖೆಗೆ 8000 ಯೂನಿಟ್‌ ರಕ್ತದ ಬೇಡಿಕೆ ಬರುತ್ತಿದೆ. ಹಾಗಾಗಿ, ಎಲ್ಲರೂ ರಕ್ತದಾನ ಮಾಡಲು ಸಹಕರಿಸಬೇಕೆಂದರು.

Advertisement

ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ರಾಜ್ಯ ಯುವಮೋರ್ಚಾ ಸದಸ್ಯ ನರಹರಿ ಕಟ್ಟಿ, ಕೆಎಂಎಫ್‌ ನಿರ್ದೇಶಕ ಬಸವನಗೌಡ ಮೇಲಿನಮನಿ, ಶರೀಫಸಾಬ ನದಾಫ್‌, ದೇವಣ್ಣ ಚಾಕಲಬ್ಬಿ, ಶಿವಾನಂದ ಸೊಬರದ, ಉಮೇಶಣ್ಣ ಅಂಗಡಿ, ಪ್ರತೀಕ ಕೊಳೇಕರ, ಕಾಶೀನಾಥ ಕಳ್ಳೀಮನಿ, ವಿನಯ ಮುಂಡಗೋಡ, ಮಂಜುನಾಥ ಮಿರ್ಜಿ, ಪ್ರಥಮ ದರ್ಜೆ ಗುತ್ತಿಗೇದಾರ ಗದಿಗೇಶ ಓಲೇಕಾರ, ಸಂಜೀವ ಬಾರೀಗಿಡದ, ರಾಜೇಶ ಬಡ್ಡಿ, ರಾಜೇಶ ಟೋಪಣ್ಣವರ, ಸಿದ್ದು ಅಕ್ಕಿ, ರತ್ನಾ ಬನ್ನಿಕೊಪ್ಪ, ನಿರ್ಮಲಾ ಯಡೆಪ್ಪನವರ, ಭಾರತಿ ರಾಮಪೂರಮಠ, ಈರಮ್ಮ ಮಲ್ಲಾಡದ ಸೇರಿದಂತೆ ಹಾವೇರಿ ವೈದ್ಯಕೀಯ ರಕ್ತನಿಧಿ ಕೇಂದ್ರದ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾದ್ಯಂತ ರಕ್ತ ಸಂಗ್ರಹಣೆ ಮಾಡಲು ಸಿಬ್ಬಂದಿಗೆ ರಕ್ತನಿಧಿ ವಾಹನದ ಅಗತ್ಯವಿದೆ. ಈ ಕುರಿತು ಈಗಾಗಲೇ ಲಿಖೀತವಾಗಿ ಮತ್ತು ಮೌಖೀಕವಾಗಿ ಸಿಎಂ ಅವರಲ್ಲಿ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಕ್ತನಿಧಿ ವಾಹನ ನೀಡಿ ಅನುಕೂಲ ಮಾಡಿಕೊಡಬೇಕು. –ಬಸವರಾಜ ಕಮತರ, ವೈದ್ಯಕೀಯ ರಕ್ತನಿಧಿ ಕೇಂದ್ರ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next