Advertisement

ವಾಗ್ದಂಡನೆಗೆ ಗ್ರೀನ್ ಸಿಗ್ನಲ್; ವಿಶ್ವದ “ದೊಡ್ಡಣ್ಣ” ಗದ್ದುಗೆಯಿಂದ ಕೆಳಗಿಳಿಯಲಿದ್ದಾರೆಯೇ?

10:20 AM Dec 15, 2019 | Team Udayavani |

ವಾಷಿಂಗ್ಟನ್: ರಾಜಕೀಯ ವೈರಿ ಡೆಮೋಕ್ರಟಿಕ್ ಪಕ್ಷದ ಜೋ ಬಿಡೆನ್ ವಿರುದ್ಧ ತನಿಖೆ ನಡೆಸಲು ಉಕ್ರೈನ್ ಮೇಲೆ ಒತ್ತಡ ಹೇರಲು ಅಮೆರಿಕದ ಅಧ್ಯಕ್ಷಗಾದಿಯನ್ನು ದುರುಪಯೋಗಪಡಿಸಿಕೊಂಡ ಎರಡು ಆರೋಪಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಅಮೆರಿಕ ಸಂಸತ್ ನ ನ್ಯಾಯಾಂಗ ಸಮಿತಿ ಅನುಮತಿ ನೀಡಿದ್ದು, ಟ್ರಂಪ್ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಉಕ್ರೈನ್ ಹಗರಣ ಮತ್ತು ತನ್ನ ವಿರುದ್ಧದ ತನಿಖೆಯನ್ನು ತಡೆಯಲು ಡೆಮೋಕ್ರಟ್ಸ್ ಸದಸ್ಯರನ್ನು ಪ್ರತಿಬಂಧಿಸಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರು ಆರೋಪದಡಿ ಡೊನಾಲ್ಡ್ ಟ್ರಂಪ್ ಅವರನ್ನು ಮಹಾಭಿಯೋಗಕ್ಕೆ ಗುರಿಪಡಿಸಲು ಅಮೆರಿಕದ ನ್ಯಾಯಾಂಗ ಸಮಿತಿಯು 23-17ರ ಮತಗಳಲ್ಲಿ ಅನುಮೋದನೆ ನೀಡಿದೆ.

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಈ ರೀತಿ ವಾಗ್ದಂಡನೆಗೆ ಗುರಿಯಾಗುತ್ತಿರುವ ಅಮೆರಿಕದ 3ನೇ ಅಧ್ಯಕ್ಷರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ವಾರ ರಿಪಬ್ಲಿಕ್ ಸಂಸದರ ಹಿಡಿತದಲ್ಲಿರುವ ಸೆನೆಟ್ ನಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.

ಏನಿದು ಜಟಾಪಟಿ?

2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ವಿರುದ್ಧ ತನಿಖೆ ನಡೆಸುವಂತೆ ಟ್ರಂಪ್ ಅವರು ಉಕ್ರೈನ್ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಇದೆ. ಈ ವಿಚಾರದಲ್ಲಿ ಡೆಮಾಕ್ರಟಿಕ್ ಪಕ್ಷ ಟ್ರಂಪ್ ವಿರುದ್ದ ವಾಗ್ದಂಡನೆ ನಿರ್ಣಯ ಮಂಡಿಸಲು ಕರೆ ನೀಡಿತ್ತು.

Advertisement

ಟ್ರಂಪ್ ಪರ ನಿಂತ ರಿಪಬ್ಲಿಕನ್ ಸದಸ್ಯರು:

ಟ್ರಂಪ್ ವಿರುದ್ಧದ ವಾಗ್ದಂಡನೆ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಸದಸ್ಯರು ಡೆಮಾಕ್ರಟಿಕ್ ಸದಸ್ಯರ ವಿರುದ್ಧ ಆರೋಪಿಸಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನು ಸಹಿಸಲಾರದೆ ಡೆಮಾಕ್ರಟಿಕ್ ಪಕ್ಷ ರಾಜಕೀಯ ದುರುದ್ದೇಶದಿಂದ ಟ್ರಂಪ್ ವಿರುದ್ಧ ಆರೋಪ ಹೊರಿಸುತ್ತಿದೆ ಎಂದು ದೂರಿದೆ.

ವಾಗ್ದಂಡನೆ ಬೆದರಿಕೆಯ ತಂತ್ರವಾಗಿದೆ. ಇದು ಅವಮಾನ ಎಂದು ಟ್ರಂಪ್ ವಿರುದ್ಧ ವಾಗ್ದಂಡನೆಗೆ ನ್ಯಾಯಾಂಗ ಸಮಿತಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರದ ಮೂಲಕ ವಾಗ್ದಂಡನೆ ಜಾರಿಗೊಳಿಸುವುದು ಅರ್ಥಹೀನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಗ್ದಂಡನೆ ಜಾರಿಯಾದರೆ ಏನಾಗಲಿದೆ?

ಈಗಾಗಲೇ ಅಮೆರಿಕ ನ್ಯಾಯಾಂಗ ಸಮಿತಿ ಟ್ರಂಪ್ ವಿರುದ್ಧ ವಾಗ್ದಂಡನೆಗೆ ಅನುಮತಿ ನೀಡಿದೆ. ಕ್ರಿಸ್ ಮಸ್ ರಜಾ ಅವಧಿಗೆ ಮುನ್ನವೇ ಹೌಸ್ ಆಫ್ ಸೆನೆಟ್ ಮತ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಆದರೆ ಸೆನೆಟ್ ಅಂತಿಮ ವಿಚಾರಣೆ 2020ರ ಜನವರಿಯಲ್ಲಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸೆನೆಟ್ ವಾಗ್ದಂಡನೆ ಶಿಕ್ಷೆ ವಿಧಿಸಿದರೆ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬಹುದಾಗಿದೆ. ಇದಕ್ಕೆ ಮೂರನೇ ಎರಡರಷ್ಟು ಮತಗಳು ಟ್ರಂಪ್ ವಿರುದ್ಧ ಚಲಾಯಿಸಬೇಕಾಗುತ್ತದೆ. ಆದರೆ ಸೆನೆಟ್ ನಲ್ಲಿ ರಿಪಬ್ಲಿಕ್ ಪಕ್ಷ 53 ಸ್ಥಾನಗಳ ಬಹುಮತ ಹೊಂದಿದೆ. ಹೀಗಾಗಿ ಟ್ರಂಪ್ ವಿರುದ್ಧ ವಾಗ್ದಂಡನೆ ಜಾರಿಗೊಳಿಸಿ ವಜಾಗೊಳಿಸುವುದು ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next