ವಾಷಿಂಗ್ಟನ್: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲು ಕಂಡುಬಂದ ಕೋವಿಡ್-19 ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಸಮರ್ಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಸೋಂಕು ಹರಡಲು ಕಾರಣವಾಗಿದಲ್ಲದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಈ ಕಾರಣದಿಂದ ಅಮೆರಿಕಾದಿಂದ ಕೊಡಲಾಗುವ ಧನಸಹಾಯವನ್ನು ರದ್ದು ಮಾಡಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಮಾರಣಾಂತಿಕ ಸಾಂಕ್ರಾಮಿಕ ರೋಗವು ಈಗಾಗಲೇ 1,25,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಕಳೆದ ವರ್ಷ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಂದಾಗಿನಿಂದ ವಿಶ್ವದಾದ್ಯಂತ ಸುಮಾರು ಎರಡು ಮಿಲಿಯನ್ ಜನರಿಗೆ ಸೋಂಕು ತಗುಲಿದೆ. ಶತಕೋಟಿ ಜನರಲ್ಲಿ ಜೀವಭಯವನ್ನು ಹೆಚ್ಚಿಸಿದೆ, ಅನೇಕ ರಾಷ್ಟ್ರಗಳು ಸೋಂಕು ಹರಡುವಿಕೆಯನ್ನು ತಡೆಯಲು ಲಾಕ್ ಡೌನ್ ಕ್ರಮಗಳನ್ನು ವಿಧಿಸಿವೆ – ಈ ಕ್ರಮ ನಿಸ್ಸಂದೇಹವಾಗಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಆದರೆ ಜಾಗತಿಕ ಆರ್ಥಿಕತೆಯನ್ನು ಅಧಃಪತನಕ್ಕೆ ತಳ್ಳುತ್ತದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಿಗಾವಹಿಸುವಲ್ಲಿ ವಿಫಲವಾದ್ದರಿಂದ ಅದಕ್ಕೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾತ್ರವಲ್ಲದೆ ಸೋಂಕು ಹರಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೂಡ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿಶ್ವ ಸಂಸ್ಥೆಯ ರಾಷ್ಟ್ರಗಳ ಪೈಕಿ ಅಮೆರಿಕ ಅತೀ ಹೆಚ್ಚು ಆರ್ಥಿಕ ಸಹಕಾರವನ್ನು ನೀಡುತ್ತಿದೆ. ಕಳೆದ ಬಾರಿ 400 ಮಿಲಿಯನ್ ಡಾಲರ್ ಧನಸಹಾಯ ಮಾಡಲಾಗಿತ್ತು. ಆದರೇ ಇದೀಗ ವಿಶ್ವ ಆರೋಗ್ಯ ಸಂಸ್ಥೆಗೆ ತಲುಪುವ ಹಣದಿಂದ ಏನೆಲ್ಲಾ ಮಹತ್ವದ ಕಾರ್ಯಗಳು ಆಗುತ್ತಿದೆ ಎಂಬುದನ್ನು ಚರ್ಚಿಸಬೇಕಾಗಿದೆ ಎಂದಿದ್ದಾರೆ.
ಜಿನೀವಾ ಮೂಲದ ಸಂಸ್ಥೆಯೊಂದು ಕೂಡ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದೆ. ಚೀನಾದ ಕೋವಿಡ್ -19 ದತ್ತಾಂಶವನ್ನು ಇತರ ದೇಶಗಳು ಅವಲಂಬಿಸಿರುವುದು ವಿಶ್ವದಾದ್ಯಂತ ಪ್ರಕರಣಗಳಲ್ಲಿ 20 ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಜಾಗತಿಕವಾಗಿ ಅಮೆರಿಕಾದಲ್ಲಿ ಸೋಂಕು ಅತೀ ವೇಗವಾಗಿ ವ್ಯಾಪಿಸುತ್ತಿದ್ದು 26 ಸಾವಿರಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ, ಮಾತ್ರವಲ್ಲದೆ 6 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣು ಪೀಡಿತರಾಗಿದ್ದಾರೆ.