ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ವಾಗ್ಧಂಡನೆ’ಯ ಬಿಸಿ ಅನುಭವಿಸಬೇಕಾದ ಅನಿವಾರ್ಯದಲ್ಲಿ ಸಿಲುಕಿದ್ದಾರೆ. ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಬುಧವಾರ ವಾಗ್ಧಂಡನೆ ಪ್ರಕ್ರಿಯೆ ಆರಂಭವಾಗಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 9ಕ್ಕೆ ಹೌಸ್ ಸಮಾವೇಶಗೊಂಡಿದ್ದು, ಮಹಾಭಿಯೋಗ ನಿರ್ಣಯ ಕುರಿತ ಚರ್ಚೆ ನಡೆದಿದೆ. ಈ ಚರ್ಚೆ ಪೂರ್ಣಗೊಂಡ ಬಳಿಕ ವಾಗ್ಧಂಡನೆ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಹೌಸ್‌ನಲ್ಲಿ ಡೆಮಾಕ್ರಾಟ್‌ಗಳ ಬಾಹುಳ್ಯವಿರುವ ಕಾರಣ, ನಿರ್ಣಯ ಅಂಗೀಕಾರ ಬಹುತೇಕ ಖಚಿತ ಎಂದು ಹೇಳಲಾಗಿದೆ.
ಇದೇ ವೇಳೆ, ವಾಗ್ಧಂಡನೆ ಕುರಿತು ಮಾತನಾಡಿರುವ ರಿಪಬ್ಲಿಕನ್ ಸಂಸದ ಹಾಗೂ ಹೌಸ್ ರೂಲ್ಸ್ ಸಮಿತಿ ಸದಸ್ಯ ಟಾಮ್ ಕೋಲ್, “ಮಹಾಭಿಯೋಗವು ದೇಶವನ್ನು ಮತ್ತಷ್ಟು ವಿಭಜಿಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಚಾನೆಲ್‌ಗೆ ನಿರ್ಬಂಧ: ಈ ನಡುವೆ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ಟ್ರಂಪ್ ಅವರ ಚಾನೆಲ್‌ನ ಪ್ರಸಾರವನ್ನು ಯೂಟ್ಯೂಬ್ ಒಂದು ವಾರ ಕಾಲ ಸ್ಥಗಿತಗೊಳಿಸಿದೆ. ತನ್ನ ನೀತಿಗಳನ್ನು ಉಲ್ಲಂ ಸುವಂತಹ ಹೊಸ ವಿಡಿಯೋವೊಂದು ಅಪ್‌ಲೋಡ್ ಆದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಯೂಟ್ಯೂಬ್ ಹೇಳಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ: ಹಲವು ಸಾಮಾಜಿಕ ಜಾಲತಾಣಗಳು ತಮ್ಮನ್ನು ನಿರ್ಬಂಧಿಸಿದ ಬೆನ್ನಲ್ಲೇ ಬುಧವಾರ ಪ್ರತಿಕ್ರಿಯಿಸಿರುವ ಟ್ರಂಪ್, “ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈಗ ಹಿಂದೆಂದೂ ಕಂಡಿರದಂತಹ ದಾಳಿ ನಡೆಯುತ್ತಿದೆ’ ಎಂದು ಹೇಳಿದ್ದಾರೆ. ಹಿಂಸಾಚಾರದ ಬಳಿಕ ಮೊದಲ ಬಾರಿಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “25ನೇ ತಿದ್ದುಪಡಿ ಅಥವಾ ವಾಗ್ಧಂಡನೆಯು ನನಗೆ ಯಾವ ಅಪಾಯವನ್ನೂ ಉಂಟುಮಾಡುವುದಿಲ್ಲ. ಆದರೆ ಜೋ ಬೈಡೆನ್ ಮತ್ತು ಅವರ ಆಡಳಿತಕ್ಕೆ ಅದು ಬೆಂಬಿಡದೇ ಕಾಡಲಿದೆ. ಹಾಗಾಗಿ ಎಚ್ಚರಿಕೆಯಿಂದಿರಿ’ ಎಂದೂ ಟ್ರಂಪ್ ಹೇಳಿದ್ದಾರೆ.