ಡೊಮಿನಿಕಾ: ಭಾರತದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು “ಡೊಮಿನಿಕಾ ಸರ್ಕಾರ ನಿಷೇಧಿತ ವಲಸಿಗ” ಎಂದು ಘೋಷಿಸಿದೆ. ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಡೊಮಿನಿಕಾ ಸರ್ಕಾರ ಗುರುವಾರ (ಜೂನ್ 10) ಘೋಷಿಸಿದ್ದು, ಇದರಿಂದ ಭಾರತದ ಕಾನೂನು ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ;42 ವರ್ಷ ಪ್ರಾಯದ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಗ್ಕೋ ಸಿಂಗ್ ನಿಧನ
ರಾಷ್ಟ್ರೀಯ ಭದ್ರತಾ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಆದೇಶ ಪ್ರಕಾರ, “ವಲಸೆ ಮತ್ತು ಪಾಸ್ ಪೋರ್ಟ್ ಕಾಯ್ದೆಯ ಸೆಕ್ಷನ್ (1)(f) ಪ್ರಕಾರ 2017ರ ಪರಿಷ್ಕೃತ ಕಾನೂನು ಅಧ್ಯಾಯ 18/01ರ ಕಾಮನ್ ವೆಲ್ತ್ ಡೊಮಿನಿಕಾದ ನೀವು ಮೆಹುಲ್ ಚಿನುಭಾಯಿ ಚೋಕ್ಸಿಯನ್ನು ಈ ಮೂಲಕ ನಿಷೇಧಿತ ವಲಸಿಗರೆಂದು ಘೋಷಿಸಲಾಗಿದೆ” ಎಂದು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಈ ಆದೇಶದಿಂದ ಇನ್ಮುಂದೆ ಕಾಮನ್ ವೆಲ್ತ್ ಆಫ್ ಡೊಮಿನಿಕಾಗೆ ಪ್ರವೇಶಿಸಲು ನಿಮಗೆ(ಚೋಕ್ಸಿ) ಅನುಮತಿ ಇಲ್ಲ. ಮತ್ತು ಇಲ್ಲಿಂದ ವಾಪಸ್ ಕಳುಹಿಸಲು ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಡೊಮಿನಿಕಾ ಸಚಿವ ರೇಬರ್ನ್ ಬ್ಲ್ಯಾಕ್ ಮೂರ್ ಸಹಿ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.
ಭಾರತದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ 2018ರಿಂದ ಆ್ಯಂಟಿಗಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಆ್ಯಂಟಿಗಾದಿಂದ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಮೇ 26 ಡೊಮಿನಿಕಾ ದೇಶದಲ್ಲಿ ಬಂಧಿಸಿದ್ದರು. ಡೊಮಿನಿಕಾ ದೇಶದೊಳಗೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕೆ ಚೋಕ್ಸಿಯನ್ನು ಆ ದೇಶದ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.
ಚೋಕ್ಸಿ ನಿಷೇಧಿತ ವಲಸಿಗ ಎಂಬ ಡೊಮಿನಿಕಾ ಸರ್ಕಾರದ ಘೋಷಣೆಯಿಂದ ಭಾರತಕ್ಕೆ ಕರೆ ತರುವ ಕೇಂದ್ರದ ಪ್ರಯತ್ನಕ್ಕೆ ಬಲ ನೀಡಿದಂತಾಗಿದೆ. ಏತನ್ಮಧ್ಯೆ ಮೆಹುಲ್ ಚೋಕ್ಸಿಯ ಮನವಿಯನ್ನು ತಿರಸ್ಕರಿಸಿ, ಭಾರತಕ್ಕೆ ಗಡಿಪಾರು ಮಾಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಡೊಮಿನಿಕಾ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.