ಪಣಜಿ: ‘ದಿನೇದಿನೆ ಪ್ರಾದೇಶಿಕ ಸಿನಿಮಾಗಳ (ಪುಟ್ಟ ಪುಟ್ಟ ರಾಜ್ಯಗಳ) ಪ್ರಾಬಲ್ಯ ಭಾರತೀಯ ಸಿನಿಮಾದಲ್ಲಿ ಹೆಚ್ಚುತ್ತಿದೆ’.ಇದು ಇಫಿ ಚಲನಚಿತ್ರೋತ್ಸವದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರಿಂದ ವ್ಯಕ್ತವಾದ ಅಭಿಪ್ರಾಯದ ಒಟ್ಟೂ ಸಾರ.
ಸಣ್ಣಪುಟ್ಟ ರಾಜ್ಯ, ಸಮುದಾಯಗಳ ಕುರಿತೂ ಸಿನಿಮಾಗಳು ಬರತೊಡಗಿರುವುದು ಸಂತೋಷದ ಸಂಗತಿ. ಇದು ಒಳ್ಳೆಯ ಬೆಳವಣಿಗೆ. ಭಾರತೀಯ ಸಿನಿಮಾದಲ್ಲಿ ಪ್ರಾದೇಶಿಕ ಸಿನಿಮಾಗಳ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂಬ ಅಭಿಮತ ವ್ಯಕ್ತವಾಯಿತು.
ಸುಮಾರು ನಾಲ್ಕು ನೂರರಷ್ಟು ಸಿನಿಮಾಗಳು ಬಂದಿದ್ದವು. ಅದರಲ್ಲಿ ಜನಪ್ರಿಯ ಐದು ಸಿನಿಮಾಗಳೂ ಸೇರಿದಂತೆ ಇಪ್ಪತ್ತೈದು ಕಥಾ ಚಿತ್ರಗಳನ್ನು ಆಯ್ಜೆ ಮಾಡುವ ಹೊಣೆ ಇತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದವರು ಸಮಿತಿ ಅಧ್ಯಕ್ಷ ವಿನೋದ್ ಗಣತ್ರ.
ಕೆಲವು ಸಿನಿಮಾಗಳಿಗೆ ಸಂಬಂಧಿಸಿ ಕೆಲವರ ಅಭಿಪ್ರಾಯಗಳು ಬೇರೆ ಇರಬಹುದು. ಹೊಂದಾಣಿಕೆ ಇದ್ದದ್ದೇ. ಆದರೆ ಬಹುಮತದ ಆಯ್ಕೆಯನ್ನು ಮಾಡಿದ್ದೇವೆ ಎಂದರು ವಿನೋದ್.
Related Articles
ಸಿನಿಮಾದ್ದೇ ಭಾಷೆ ಇದೆ. ಅದು ಬಹಳ ಸರಳ. ನಮ್ಮ ಮನಸ್ಸು ಮತ್ತು ಹೃದಯವನ್ನು ತಟ್ಟಬೇಕಷ್ಟೇ. ಅದೇ ಒಳ್ಳೆಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಾವೆಲ್ಲ ಸಿನಿಮಾದ ಬೇರೆ ಬೇರೆ ರಂಗದಿಂದ ಬಂದವರು. ಆದರೂ ಆಯ್ಕೆಯಲ್ಲಿ ಒಮ್ಮತ ಸಾಧ್ಯವಾಯಿತು ಎಂದರು ಗೀತಾ ಗುರಪ್ಪ.
ಹೆಚ್ಚು ಸಿನಿಮಾಗಳು ಗುಣಮಟ್ಡದಲ್ಲಿ ಇರಲಿಲ್ಲ. ಕೆಲವೊಮ್ಮೆ ಪ್ರತಿಯೊಬ್ಬರೂ ರಾಜಕಾರಣಿಯಾಗಲು ಇಷ್ಟ ಪಡುತ್ತಾರೆ. ಅದರೆ ಚುನಾಯಿತರಾಗುವುದಿಲ್ಲ. ಹದಿನೈದು ಸಿನಿಮಾಗಳ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು ಶೈಲೇಶ್ ದವೆ.
ಬಹುಭಾಷೆ, ಬಹು ಸಂಸ್ಕೃತಿಯೇ ಭಾರತದ ಹಿರಿಮೆ. ಅದು ಈ ವಿಭಾಗದಲ್ಲಿ ಶೋಭಿಸಿದೆ. ಎರಡನೇ ಸುತ್ತಿಗೆ 53 ಸಿನಿಮಾ ಆಯ್ಕೆ ಮಾಡಿದೆವು. ಅಂತಿಮವಾಗಿ ನಿಗದಿತ ಸಂಖ್ಯೆಗೆ ಕಟ್ಟು ಬೀಳಬೇಕಾಯಿತು ಎಂದು ಅಶೋಕ್ ಕಶ್ಯಪ್ ಹೇಳಿದರು.
ಎಲ್ಲ ರಾಜ್ಯಗಳ ಸಿನಿಮಾಗಳಿಗೆ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಪ್ರಶ್ನೆಗೆ, ನಾವು ರಾಜ್ಯಗಳ ಲೆಕ್ಕಾಚಾರದಲ್ಲಿ ಸಿನಿಮಾ ಆಯ್ಕೆ ಮಾಡುವುದಿಲ್ಲ. ಇದು ಸ್ಪರ್ಧೆ. ಅದರಲ್ಲಿ ಆಯ್ಕೆ ಮಾಡಲಾಗಿದೆ ಎಂದರು ತೀರ್ಪುಗಾರರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಇತರೆ ಸದಸ್ಯರೂ ಉಪಸ್ಥಿತರಿದ್ದರು.