ಆಚೆ ಮನೆಯ ರಾಜಮ್ಮ ನಿನ್ನೆ ಸಂಜೆ ಹೇಳುತ್ತಿದ್ದರು. ನಮ್ಮ ಮನೆ ಕೆಲಸದವಳು 3 ದಿನಗಳಿಂದ ಬಂದಿಲ್ಲ ಕಣ್ರೀ, ಭಾರೀ ಸೊಕ್ಕು ಅವಳಿಗೆ, ಹೇಳದೇ ಕೇಳದೇ ಕೈ ಕೊಟ್ಟು ಬಿಡ್ತಾಳೆ. ನಾನು ಎಷ್ಟೂಂತ ಮೈ ಬಗ್ಗಿಸಲಿ, ಈ ಕೆಲಸದವರಿಗೆ ಅಹಂಕಾರ ಅತಿಯಾಗಿಬಿಟ್ಟಿದೆ. ಹಾಗಲ್ಲ ರಾಜಮ್ಮ, ಏನೋ ಹುಷಾರಿಲ್ಲದಿರಬಹುದು, ಮನೆಯಲ್ಲಿ ಗಂಡ ಕುಡುಕ ಅಂತೀರಾ, ಏನು ಅವಾಂತರ ಮಾಡಿದ್ದಾನೋ-ಬರ್ತಾಳೆ ಬಿಡಿ… ನನ್ನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ ರಾಜಮ್ಮ ಗುಡುಗಿದರು.
ಈಗ ಸರಿಯೋಯ್ತು ನೋಡಿ, ನಿಮ್ಮಂಥವರು ಸಪೋರ್ಟ್ ಮಾಡೋದ್ರಿಂದಲೇ ಅವರು ಗಗನಕ್ಕೇರಿ ಹಾರಾಡ್ತಿರೋದು. ನಾನು ಮೌನಕ್ಕೆ ಶರಣಾಗಿದ್ದೆ. ಹೌದು, ಮನೆಗೆಲಸದವಳೆಂದರೆ ಈ ತಾತ್ಸಾರವೇಕೆ? ಕುತ್ಸಿತ ಮನೋಭಾವನೆಯೇಕೆ? ಬಹುತೇಕ ಮನೆಗಳಲ್ಲಿ ಕೆಲಸದವಳಿಗೆ ಕಡಿಮೆ ಸಂಬಳ, ಅಧಿಕ ಕೆಲಸ, ಕಸ, ಮುಸುರೆ, ನೆಲ ಒರೆಸುವುದು, ಬಟ್ಟೆ ಒಗೆಯುವುದು, ತೋಟದಲ್ಲಿ ಕೆಲಸ, ಗಿಡಕ್ಕೆ ನೀರು ಹಾಕಿಸುವುದು, ಕೆಲಸಗಳು. ಒಂದೇ, ಎರಡೇ? ಹೆಸರಿಗೆ ತಿಂಡಿ-ಊಟ ಕೊಡುತ್ತೇವೆ ಎಂದು ಬೆಳಗಿನ ತಿಂಡಿಗೆ ತಳ ಹಿಡಿದ ಉಪ್ಪಿಟ್ಟು, ರಾತ್ರಿ ಉಳಿದ ಅನ್ನದ ಚಿತ್ರಾನ್ನ, ಹಳೆಯ ಇಡ್ಲಿ, ಫ್ರೆಶ್ ಆಗಿ ಮಾಡಿದರೂ ತಮಗೆ ಮಾತ್ರ ಗೋಡಂಬಿ ಹಾಕಿದ ಹಾಗೂ ಅವಳಿಗೆ ಹಾಕದ ಖಾಲಿ ರವಾ ಇಡ್ಲಿ, ನೀರು ಹಾಲಿನ ಕಾಫಿ, ಇನ್ನು ಊಟಕ್ಕೋ ಬರೀ ಅನ್ನ, ಒಂದು ಸಾಂಬಾರ್ ಅಷ್ಟೇ. ಆದರೆ, ಕೆಲಸ ಮಾತ್ರ ದಂಡಿ ದಂಡಿ. ಸಣ್ಣಪುಟ್ಟ ಲೋಟ, ಚಮಚೆಗಳನ್ನು ತಾವೇ ತೊಳೆದುಕೊಳ್ಳುವುದಿಲ್ಲ, ಜ್ವರ ಬಂದಿದ್ದರೂ ಕೆಲಸಕ್ಕೆ ಬರಲೇಬೇಕೆಂದು ತಾಕೀತು ಮಾಡುವುದು. ಬಾಯಿಗೆ ಬಂದಂತೆ ಬಯ್ಯುವುದು. ವಾರಕ್ಕೊಂದು ದಿನವೂ ರಜೆಯಿಲ್ಲ, ಅನಿವಾರ್ಯತೆಗೆ ಶರಣಾಗಿ ರಜೆ
ಮಾಡಿದರೂ ಸಂಬಳದಲ್ಲಿ ನಿರ್ದಯೆಯಿಂದ ಕಟ್. ಅಡ್ವಾನ್ಸ್ ಹಣ ಕೇಳಲೇ ಕೂಡದು. ಏಕೆಂದರೆ ನಾಳೆ ಕೆಲಸದವಳು ಬರುವ ಕುರಿತು ಅನುಮಾನ! -ಮನೆ ಕೆಲಸದವರ ಕುರಿತು ಹೀಗೆಲ್ಲಾ ಯೋಚಿಸುವ ಜನ ಎಲ್ಲೋ ಇದ್ದಾರೆ. ಏಕೆ? ಮನೆಗೆಲಸದವಳೂ ಮನುಷ್ಯಳೇತಾನೇ? ಅವಳನ್ನೇಕೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ? ಬಡತನ, ಕುಡುಕ ಗಂಡ, ಪುಟ್ಟ ಮಕ್ಕಳ ಹೊಟ್ಟೆ ತುಂಬಿಸಲು ತಾನೇ ದುಡಿಯಬೇಕಾದ ಅವಳಿಗೆ ಬೇರೆ ಆದಾಯ ಮೂಲವಿಲ್ಲ. ಸರ್ಕಾರದಿಂದ ಉಚಿತ ಅಕ್ಕಿ ದೊರೆತರೂ ಉಳಿದ ವೆಚ್ಚಗಳಿಗೆ ಎಲ್ಲಿಗೆ ಹೋಗುವುದು? ಈ ಮನೆಗೆಲಸಕ್ಕೂ ಉದ್ಯೋಗ ಖಾತ್ರಿಯಿಲ್ಲ,ಪಿ.ಎಫ್, ಬೋನಸ್, ರಜೆ ಯಾವುದೂ ಇಲ್ಲ, ಮಾನವೀಯತೆಯ ದೃಷ್ಟಿಯಿಂದ ಮನೆ ಕೆಲಸದವರಿಗೆ “ಕೆಲಸ ಕೊಡುವ ರಾಜಮ್ಮನಂತಹ ಗೃಹಿಣಿಯರು ಬದಲಾಗಬೇಕಿದೆ.
ನಾವು ತಿನ್ನುವ ತಿಂಡಿ, ಕಾಫಿಯನ್ನೇ ಅವಳಿಗೂ ಕೊಡಬಹುದು, ಆದಷ್ಟು ಕಡಿಮೆ ಕೆಲಸ ಹೊರಿಸುವುದು, ಸಾಧ್ಯವಾದಷ್ಟೂ ಒಳ್ಳೆಯವೇತನ ನೀಡುವುದು, ಹಬ್ಬ ಹರಿದಿನಗಳಲ್ಲಿ ಬಟ್ಟೆ ಕೊಡಿಸುವುದು,ನಾವು ಉಪಯೋಗಿಸಿ ಬಿಟ್ಟು ವ್ಯರ್ಥವಾಗ ಬಹುದಾದ ವಸ್ತುಗಳನ್ನುಕೊಡುವುದು, ಉಳಿದು ಹಾಳಾಗಬಹುದಾದ ತಿನಿಸುಗಳನ್ನು ಕೊಡುವುದು, ಆಗಾಗ ಅವಳ ಕಷ್ಟಕ್ಕೆ ಕಿವಿಯಾಗುವುದು, ಅವಳನ್ನುಆದರದಿಂದ ಕಾಣುವುದು, ಅವಳ ಅಗತ್ಯಗಳಿಗೆ ನೆರವಾಗುವುದು, ಮೊದಲಾದ ಕ್ರಿಯೆಗಳಿಂದ ಅವಳಿಗೆ ನಮ್ಮಲ್ಲಿ ವಿಶ್ವಾಸ ಮೂಡಿಸಬಹುದು. ಮುಂದೆ ಅವಳ ಕಾರ್ಯತತ್ಪರತೆಗೂ ಅದು ಹಾದಿಯಾಗುತ್ತದೆ. ಅವಳೂ ಮನೆ ಮಂದಿಯಲ್ಲೊಬ್ಬಳಾಗುತ್ತಾಳೆ.
– ಕೆ.ಲೀಲಾ ಶ್ರೀನಿವಾಸರಾವ್