ನಟ ಡಾಲಿ ಧನಂಜಯ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಟನೆಯ ಜೊತೆಗೆ ನಿರ್ಮಾಪಕನಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
“ಡಾಲಿ ಪಿಕ್ಚರ್’ ಬ್ಯಾನರ್ ಮೂಲಕ ಈಗಾಗಲೇ “ಬಡವ ರಾಸ್ಕಲ್’ ಹಾಗೂ “ಹೆಡ್ ಬುಷ್’ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಧನಂಜಯ್, ಇದೀಗ ತಮ್ಮ ಬ್ಯಾನರ್ ಮೂಲಕ ಮೂರನೇ ಸಿನಿಮಾಕ್ಕೆ ತಯಾರಿ ನಡೆಸಿದ್ದಾರೆ.
ಹೌದು, ಕೆಲ ದಿನಗಳ ಹಿಂದಷ್ಟೇ “ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಧನಂಜಯ್ ನಿರ್ಮಿಸುತ್ತಿರುವ ಮೂರನೇ ಸಿನಿಮಾ ಅನೌನ್ಸ್ ಆಗಿದ್ದು, ಈ ಸಿನಿಮಾಕ್ಕೆ “ಟಗರು ಪಲ್ಯ’ ಎಂದು ಟೈಟಲ್ ಇಡಲಾಗಿತ್ತು. ಮೋಶನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ “ಟಗರು ಪಲ್ಯ’ ಸಿನಿಮಾ ಇದೀಗ ಸೆಟ್ಟೇರಲು ರೆಡಿಯಾಗಿದೆ. ಇನ್ನು “ಟಗರು ಪಲ್ಯ’ ಸಿನಿಮಾದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಮತ್ತು ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿರುವ ನಾಗಭೂಷಣ್ “ಟಗರು ಪಲ್ಯ’ ಸಿನಿಮಾದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
“ಟಗರು ಪಲ್ಯ’ ಸಿನಿಮಾಕ್ಕೆ ನವ ನಿರ್ದೇಶಕ ಉಮೇಶ್ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಸೇರಿದಂತೆ ಕನ್ನಡದ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಉಮೇಶ್ ಕೆ. ಕೃಪ “ಟಗರು ಪಲ್ಯ’ ಸಿನಿಮಾದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. “”ಟಗರು ಪಲ್ಯ’ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಬಹುತೇಕ ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ’ ಎಂಬುದು ಸಿನಿಮಾದ ಬಗ್ಗೆ ನಿರ್ದೇಶಕ ಉಮೇಶ್ ಕೆ. ಕೃಪ ನೀಡುವ ಮಾಹಿತಿ.
Related Articles
“ಟಗರು ಪಲ್ಯ’ ಸಿನಿಮಾದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಎಸ್. ಕೆ. ರಾವ್ ಛಾಯಾಗ್ರಹಣ, ವಿನೋದ್ ಸಾಹಸ ಸಂಯೋಜನೆಯಿದೆ. ನಾಗಭೂಷಣ್ ಅವರೊಂದಿಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಮೊದಲಾದವರು “ಟಗರು ಪಲ್ಯ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ನಾಯಕಿ ಯಾರೆಂಬುದನ್ನು ಮಾತ್ರ ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ.