Advertisement
ಪಾಲಿಕೆಯ ವ್ಯಾಪ್ತಿಯಲ್ಲಿ ನಿತ್ಯ 100 ಟನ್‌ಗೂ ಹೆಚ್ಚಿನ ಪ್ರಾಣಿಜನ್ಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಪಾಲಿಕೆಯಿಂದ ವೈಜ್ಞಾನಿಕವಾಗಿ ಸಂಗ್ರಹ ಹಾಗೂ ವಿಲೇವಾರಿ ಮಾಡುವ ವ್ಯವಸ್ಥೆಯಿಲ್ಲ. ಇದರಿಂದ ಪ್ರಾಣಿಜನ್ಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದು ಬೀದಿ ನಾಯಿಗಳ ಸಂಖ್ಯೆ ಹಾಗೂ ಹಾವಳಿ ಹೆಚ್ಚಾಗಲು ಕಾರಣವಾಗಿದೆ.
Related Articles
Advertisement
ಆದರೆ, ಪಾಲಿಕೆಯ ಅಧಿಕಾರಿಗಳು ವರ್ಷದಲ್ಲಿ ಮೂರು ಹಂತಗಳಲ್ಲಿ ಎಬಿಸಿ ಮಾಡುವುದರಿಂದ ಒಂದು ಹಂತಪೂರ್ಣಗೊಳಿಸುವ ವೇಳೆಗೆ ಎರಡು ಹಂತಗಳಲ್ಲಿನ ನಾಯಿಗಳು ಮರಿ ಮಾಡುತ್ತವೆ. ಇದೇ ಕಾರಣದಿಂದ ಪಾಲಿಕೆಯಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬ ಆರೋಪವಿದೆ. ಎನ್‌ಜಿಒಗಳ ಕುತಂತ್ರ: ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಗಂಡು-ಹೆಣ್ಣು ನಾಯಿಗಳು ಒಟ್ಟಿಗೆ ಸೇರುತ್ತವೆ. ಆದರೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಗುತ್ತಿಗೆ ಪಡೆದಿರುವ ಎನ್‌ಜಿಒಗಳು ಎರಡು ತಿಂಗಳಲ್ಲಿ ನಾನಾ ಕಾರಣ ಮುಂದಿಟ್ಟು ಶಸ್ತ್ರ ಚಿಕಿತ್ಸೆಗೆ ಮುಂದಾಗುವುದಿಲ್ಲ. ಹೀಗಾಗಿ ನಾಯಿಗಳು ಒಟ್ಟಿಗೆ ಸೇರುತ್ತವೆ. ಒಂದೊಮ್ಮೆ ನಗರದಲ್ಲಿರುವ ಎಲ್ಲ ನಾಯಿಗಳಿಗೆ ಎಬಿಸಿ ಮಾಡಿದರೆ ಮುಂದಿನ ದಿನಗಳಲ್ಲಿ ಪಾಲಿಕೆಯಿಂದ ಅನುದಾನ ಸಿಗುವುದಿಲ್ಲ ಎಂದು ಇಂತಹ ಕೃತ್ಯಕ್ಕೆ ಮುಂದಾಗುತ್ತವೆ ಎಂದು ಪಾಲಿಕೆಯ ಪಶುವಿಭಾಗದ ಹಿರಿಯ ಅಧಿಕಾರಿ ದೂರಿದರು. ಹತ್ತು ವರ್ಷಗಳಲ್ಲಿ 1.92 ಲಕ್ಷ ಮಂದಿಗೆ ಕಡಿತ: ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1.92 ಲಕ್ಷ ಜನರಿಗೆ ನಾಯಿ ಕಡಿತಕ್ಕೆ ಒಳಗಾಗಿ ಚುಚ್ಚುಮದ್ದು ಪಡೆದಿದ್ದಾರೆ. ಈ ಪೈಕಿ ಶೇ.95ರಷ್ಟು ಬೀದಿ ನಾಯಿಗಳ ಕಡಿತವಾಗಿರುವುದು ವರದಿಯಾಗಿದೆ. ಇನ್ನು ನಾಯಿ ಕಡಿತದಿಂದ 2000ರ ಇಸವಿ ಬಳಿಕ ನಗರದಲ್ಲಿ 61 ಜನರು ಮೃತಪಟ್ಟಿದ್ದರೂ, 2012-13ನೇ ಸಾಲಿನಿಂದ ಈವರೆಗೆ ಯಾವುದೇ ಮೃತಪಟ್ಟ ಪ್ರಕರಣ ವರದಿಯಾಗಿಲ್ಲ.
35 ಕೋಟಿ ರೂ. ವ್ಯಯ: ಕಳೆದ 18 ವರ್ಷಗಳಿಂದ ಎಬಿಸಿ ಚಿಕಿತ್ಸೆಗಾಗಿ 6,30,685 ಬೀದಿ ನಾಯಿಗಳು ಹಾಗೂ 8,17,085 ರೇಬಿಸ್ ವಿರೋಧಕ ಲಸಿಕೆಗಾಗಿ ಒಟ್ಟು 35,73,36,907 ಕೋಟಿ ರೂ.. ವ್ಯಯಿಸಲಾಗಿದ್ದರೂ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೆ, ಪಾಲಿಕೆಯಿಂದ ವಯಸ್ಸಾದ, ಜೀವಿಸಲು ಸಾಧ್ಯವಾಗದಂತಹ ಬೀದಿನಾಯಿಗಳಿಗೆ ದಯಾಮರಣ ನೀಡಲಾಗುತ್ತದೆ. ಅಂತಹ ಪಟ್ಟಿಯಲ್ಲಿ 18 ವರ್ಷದಿಂದ 53,580 ನಾಯಿಗಳಿಗೆ ದಯಾಮರಣ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ. ಸಮಸ್ಯೆಗೆ ಪರಿಹಾರವೇನು?: ನಗರದಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಬೇಕಾದರೆ, ಗುತ್ತಿಗೆ ನೀಡುವ ವೇಳೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಬೇಕಿದ್ದು, ಎಬಿಸಿ ಚಿಕಿತ್ಸೆ ಸಮರ್ಪಕವಾಗಿ ನಡೆಸದಂತಹ ಸಂಸ್ಥೆಗಳ ವಿರುದ್ಧ ಕಠಿಣ
ಕ್ರಮಕೈಗೊಳ್ಳಬೇಕು. ಪಾಲಿಕೆಯಿಂದ ಹಂತಗಳಲ್ಲಿ ಎಬಿಸಿ ಮಾಡುವುದು ಕೈಬಿಟ್ಟು ಒಂದು ವರ್ಷದಲ್ಲಿ ಎಲ್ಲ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಿದರೆ ನಗರದಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಅಡಬಂದು ಮಾನ ತೆಗೆದಿದ್ದ ನಾಯಿ
ಬೆಂಗಳೂರಿನಲ್ಲಿ 2016ರ ಮೇ ತಿಂಗಳಲ್ಲಿ ಆಯೋಜಿಸಿದ್ದ 10ಕೆ ಮ್ಯಾರಥಾನ್‌ನಲ್ಲಿ ಕ್ರೀಡಾಪಟುವಿಗೆ ಬೀದಿ ನಾಯಿ ಅಡ್ಡಬಂದ ಪರಿಣಾಮ ಓಟದಲ್ಲಿ ಸೋತ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗುವಂತೆ ಮಾಡಿತ್ತು. ಓಟದಲ್ಲಿ ಭಾಗವಹಿಸಿದ್ದ ಇಥಿಯೋಪಿಯಾದ ಜನಪ್ರಿಯ ಮ್ಯಾರಾಥಾನ್ ಪಟು ಮೂಲೆ ವಾಸಿಹುನ್ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿತ್ತಾದರೂ, ಅಡ್ಡಬಂದ ಬೀದಿ ನಾಯಿ ಓಟಕ್ಕೆ ತೊಡಕು ಉಂಟು ಮಾಡಿದ ಪರಿಣಾಮ ಅವರು ಸೋಲಬೇಕಾಯಿತು. ಪ್ರಗತಿಯಲ್ಲಿದೆ ಗಣತಿ ಕಾರ್ಯ ಪಶುಸಂಗೋಪನೆ ಇಲಾಖೆಯಿಂದ ರಾಜ್ಯದಲ್ಲಿರುವ ಪ್ರಾಣಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಾಯಿಗಳ ಸಮೀಕ್ಷೆ ಸಹ ನಡೆಸಲಾಗುತ್ತಿದೆ. 2012ರಲ್ಲಿ ನಡೆಸಿದ ಸಮೀಕ್ಷೆಯಂತೆ ನಗರದಲ್ಲಿ 2.90 ಲಕ್ಷ ನಾಯಿಗಳಿರುವುದು ಕಂಡುಬಂದಿದ್ದು, ಆ ಪೈಕಿ 1.05 ಲಕ್ಷ ಸಾಕಿದ, 1.85 ಲಕ್ಷ ಬೀದಿ ನಾಯಿಗಳಿರುವುದು ಕಂಡುಬಂದಿತ್ತು.