Advertisement

ಚನ್ನಪಟ್ಟಣದಲ್ಲಿದೆ ನಾಯಿ ದೇವಸ್ಥಾನ: ಇದರ ವಿಶೇಷತೆ ಏನು ಗೊತ್ತಾ?

01:09 PM Aug 31, 2021 | Team Udayavani |
ಗ್ರಾಮದ ಕೆಲವರ ಕನಸಿನಲ್ಲಿ ಬಂದ ಕೆಂಪಮ್ಮ ದೇವತೆ ನಾಪತ್ತೆಯಾದ ನಾಯಿಗಳಿಗಾಗಿ ದೇಗುಲವನ್ನು ನಿರ್ಮಿಸುವಂತೆ ಸೂಚಿಸಿದಳಂತೆ. ಹೀಗಾಗಿ ಈ ದೇವಸ್ಥಾನದಲ್ಲಿ ಎರಡು ನಾಯಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
Now pay only for what you want!
This is Premium Content
Click to unlock
Pay with

ನಾಯಿಯೊಂದಿಗಿನ ಮಾನವನ ಆತ್ಮೀಯ ಸಂಬಂಧಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಪುರಾಣಗಳಲ್ಲಿ ಇದರ ಉಲ್ಲೇಖ ಕಾಣಬಹುದು. ಗ್ರೀಕ್‌ ನಂಬಿಕೆಯ ಪ್ರಕಾರ ನಾಯಿ ಪಾತಾಳದ ಕಾವಲುಗಾರ, ಹಿಂದೂ ಪುರಾಣದಲ್ಲಿ ನಾಯಿ ಭೈರವನ ವಾಹನವಾಗಿ ಗುರುತಿಸಲ್ಪಡುತ್ತದೆ. ಹೀಗೆ ನಾಯಿಯೊಂದಿಗಿನ ಮಾನವನ ಒಡನಾಟಕ್ಕೆ ಹಲವು ಆಯಾಮಗಳಿವೆ. ಮಾತ್ರವಲ್ಲ ನಾಯಿ ಮಾನವನ ಒಡನಾಡಿಯಾಗಿ, ನಂಬಿಕಸ್ಥ ಪ್ರಾಣಿಯಾಗಿ ಗುರುತಿಸಿಕೊಂಡಿದೆ. ಆದ್ದರಿಂದಲೇ ಪ್ರಾಣಿಗಳ ಪೈಕಿ ನಾಯಿಗೆ ವಿಶೇಷ ಸ್ಥಾನವನ್ನೇ ನೀಡಲಾಗಿದೆ. ಅದರಲ್ಲೂ ನಮ್ಮ ರಾಜ್ಯದ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಾಯಿಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಈ ನಂಬಿಕಸ್ಥ ಜೀವಿಗೆ ಕೃತಜ್ಞತೆ ಅರ್ಪಿಸಲಾಗಿದೆ.

Advertisement

ಚನ್ನಪಟ್ಟಣ ನಗರದ ಅಗ್ರಹಾರ ವಲಗರಹಳ್ಳಿಯಲ್ಲಿ “ನಾಯಿ ದೇವಸ್ಥಾನ’ ಎಂದು ಕರೆಯಲ್ಪಡುವ ಈ ದೇಗುಲ ಇದೆ. ಗ್ರಾಮದ ಕೆಂಪಮ್ಮ ದೇಗುಲದ ನಿರ್ಮಾತೃ ಉದ್ಯಮಿ ರಮೇಶ್‌ ಈ ನಾಯಿ ದೇವಸ್ಥಾನವನ್ನು 2010ರಲ್ಲಿ ನಿರ್ಮಿಸಿದರು.

ಹಿನ್ನೆಲೆ: ದೇವಸ್ಥಾನ ನಿರ್ಮಾಣವಾದ ಬಗ್ಗೆ ಗ್ರಾಮಸ್ಥರಲ್ಲಿ ಕೇಳಿದರೆ ಅವರು ಹೀಗೆ ವಿವರಿಸುತ್ತಾರೆ. ಒಮ್ಮೆ ಗ್ರಾಮದ ಎರಡು ನಾಯಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾದವು. ಕೆಲವು ದಿನಗಳ ಬಳಿಕ ಗ್ರಾಮದ ಕೆಲವರ ಕನಸಿನಲ್ಲಿ ಬಂದ ಕೆಂಪಮ್ಮ ದೇವತೆ ನಾಪತ್ತೆಯಾದ ನಾಯಿಗಳಿಗಾಗಿ ದೇಗುಲವನ್ನು ನಿರ್ಮಿಸುವಂತೆ ಸೂಚಿಸಿದಳಂತೆ. ಹೀಗಾಗಿ ಈ ದೇವಸ್ಥಾನದಲ್ಲಿ ಎರಡು ನಾಯಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ನಾಯಿಗಳು ಎಲ್ಲವನ್ನೂ ಗಮನಿಸುತ್ತವೆ ಮತ್ತು ಕೆಟ್ಟ ಶಕ್ತಿ ಬಳಿ ಪ್ರವೇಶಿಸದಂತೆ ತಡೆಯುತ್ತವೆ ಎಂಬ ವಿಶ್ವಾಸ ಸ್ಥಳೀಯರದ್ದು. ಪ್ರತಿ ವರ್ಷ ಈ ನಾಯಿ ಹೆಸರಿನಲ್ಲಿ ವೈಭವದ ಉತ್ಸವ ಏರ್ಪಡಿಸಲಾಗುತ್ತದೆ. ಈ ನಾಯಿಗಳಿಗೆ ಸಮಾಜದ ಎಲ್ಲ ತಪ್ಪುಗಳನ್ನು ಸರಿ ಮಾಡುವ ಶಕ್ತಿ ಇದೆ ಎನ್ನುವುದು ಈ ಊರವರ ನಂಬಿಕೆ.

ಪ್ರತೀ ವರ್ಷ ಉತ್ಸವ ಸಂದರ್ಭದಲ್ಲಿ ಗ್ರಾಮಸ್ಥರು ಕುರಿಗಳನ್ನು ಬಲಿಕೊಟ್ಟು ಊರನ್ನು ಕಾಪಾಡುವಂತೆ ಪ್ರಾರ್ಥಿಸುತ್ತಾರೆ. ಮಾತ್ರವಲ್ಲ ಊರಿನ ಎಲ್ಲ ನಾಯಿಗಳಿಗೆ ಅದರ ಮಾಂಸವನ್ನು ನೀಡಲಾಗುತ್ತದೆ. ರವಿವಾರ, ಸೋಮವಾರ ಮತ್ತು ಗುರುವಾರ ಸಂಜೆ 4ರಿಂದ 6ರವರೆಗೆ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ.

ನಂಬಿಕೆ: ಗ್ರಾಮದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವ ಮುನ್ಸೂಚನೆ ಇದ್ದರೆ ಗ್ರಾಮದೇವತೆ ವೀರಮಾಸ್ತಿ ಕೆಂಪಮ್ಮ ತನ್ನ ಭಂಟರಾದ ಶ್ವಾನಗಳ ರೂಪದಲ್ಲಿ ಬಂದು ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡುತ್ತಾಳೆ ಎಂಬುದು ಗಾಮಸ್ಥರ ನಂಬಿಕೆ. ಒಟ್ಟಿನಲ್ಲಿ ಗೊಂಬೆಗಳ ನಾಡು ಎಂದೇ ಪ್ರಸಿದ್ಧವಾದ ಚನ್ನಪಟ್ಟಣ ಅಪರೂಪವೆನಿಸುವ ನಾಯಿ ದೇವಸ್ಥಾನದಿಂದಲೂ ಗುರುತಿಸಲ್ಪಡುತ್ತದೆ.

Advertisement

 ರಮೇಶ್‌ ಬಿ

Advertisement

Udayavani is now on Telegram. Click here to join our channel and stay updated with the latest news.