Advertisement

ನಾಯಿ ದಾಳಿ: ಮಕ್ಕಳಿಗೆ ಗಾಯ

10:48 AM Jan 07, 2022 | Team Udayavani |

ಕಲಬುರಗಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮತ್ತೆ ಐವರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ.

Advertisement

ಇಲ್ಲಿನ ವಾರ್ಡ್‌ ನಂ.1ರ ತಾಜ್‌ ನಗರದಲ್ಲಿ ಮನೆ ಎದುರು ಆಟವಾಡುತ್ತಿದ್ದಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ. ಐವರು ಮಕ್ಕಳಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ನಾಲ್ಕು ವರ್ಷದ ರಹೀಮ್‌ ಮತ್ತು ಐಜಜ್‌ ಹುಸೇನ್‌, 3 ವರ್ಷದ ಅಜೀಜಾ ಮತ್ತು ಶೀಜಾ ಅಂಜುಮ್‌ ನಾಯಿಗಳ ದಾಳಿಗೆ ಒಳಗಾಗಿದ್ದು, ಮುಖ, ಬೆನ್ನು ಮತ್ತು ಕೈಗಳಿಗೆ ಕಚ್ಚಿ ಗಾಯಗೊಳಿಸಿವೆ. ಇದರಿಂದ ಪಾಲಕರು ಆತಂಕಗೊಂಡು ಮಕ್ಕಳನ್ನು ಜಿಮ್ಸ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ವರ್ಷದ ಮಾರ್ಚ್‌, ಆಗಸ್ಟ್‌, ಅಕ್ಟೋಬರ್‌ ತಿಂಗಳಲ್ಲೂ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಂಡಿದ್ದಾರೆ. ಈಗಲೂ ಇದೇ ರೀತಿಯಾಗಿದ್ದರಿಂದ ಬೀದಿ ನಾಯಿಗಳಿಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಯುಕ್ತರಿಗೆ ದೂರು ಸಲ್ಲಿಕೆ

Advertisement

ಮಕ್ಕಳ ಮೇಲೆ ನಾಯಿಗಳ ದಾಳಿ ಸಂಬಂಧ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಅವರಿಗೆ ವಾರ್ಡ್‌ ನಂ.1ರ ಪಾಲಿಕೆ ಮಾಜಿ ಸದಸ್ಯ ಮೊಹಮ್ಮದ್‌ ಇಬ್ರಾಹಿಂ ಮತ್ತು ಜೆಡಿಎಸ್‌ನ ಉತ್ತರ ಮತಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅತರ್‌ ಪರ್ವೇಜ್‌ ದೂರು ಸಲ್ಲಿಸಿ, ನಾಯಿಗಳ ನಿಯಂತ್ರಣಕ್ಕೆ ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಿದೆ. ಮನೆ ಅಂಗಳದಲ್ಲೂ ಮಕ್ಕಳು ಆಟವಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಭಯ, ಆತಂಕದಲ್ಲೇ ಜೀವನ ನಡೆಸುವಂತೆ ಆಗಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಯಿಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next