Advertisement

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

01:34 AM Dec 14, 2024 | Team Udayavani |

ಇತ್ತೀಚಿನ ವರ್ಷಗಳಲ್ಲಿ ಮೂಲಭೂತವಾದಿ ಸಂಘಟನೆಗಳು, ಜನರು ನಡೆಸುತ್ತಿರುವ ದಂಗೆಗಳಿಗೆ ಸರಕಾರ‌ಗಳು ಬೀಳುತ್ತಿವೆ. ಅದೇ ರೀತಿ ಕಳೆದ ವಾರ ಸಿರಿಯಾದಲ್ಲೂ ಸರಕಾರ‌ ಪತನಗೊಂಡಿದ್ದು, ದೇಶ ಉಗ್ರರ ಕೈಗೆ ಸಿಲುಕಿಕೊಂಡಿದೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ಮಧ್ಯಪ್ರಾಚ್ಯದಲ್ಲಿ ಹೊಸ ತಲೆ ನೋವು ಆರಂಭವಾಗಿದ್ದು, ಜಾಗತಿಕ ಭದ್ರತೆ ಮತ್ತು ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತವೂ ಸಿರಿಯಾದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದು, ಅದು ಖೋತಾ ಆಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ಆಗಿದ್ದೇನು? ಜಗತ್ತು ಮತ್ತು ಭಾರತದ ಮೇಲೆ ಅದರ ಪರಿಣಾಮವೇನು ಎಂಬ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಸಿರಿಯಾ ಕಚ್ಚಾತೈಲ ಉತ್ಪಾದನೆಯಿಂದಾಗಿ ಜಗತ್ತಿಗೆ ಬೇಕಾಗಿದ್ದರೂ ಇರಾನ್‌ ಮತ್ತು ರಷ್ಯಾದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರಿಂದ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಇಲ್ಲಿ ಅಧಿಕಾರ ನಡೆಸುತ್ತಿದ್ದ ಬಶರ್‌ ಅಲ್‌ ಅಸಾದ್‌ ಗಟ್ಟಿಗನಾಗಿದ್ದು, ಸುಮಾರು 30 ವರ್ಷಗಳ ಕಾಲ ತನ್ನ ಪ್ರಜೆಗಳು ಮತ್ತು ಹೊರಗಿನ ದೇಶಗಳನ್ನು ಹತ್ತಿಕ್ಕಿ ಅಧಿಕಾರ ನಡೆಸಿದ್ದ. ಸಿರಿಯಾದ ಬಳಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳಿಗೆ ಎಂಬ ಕಾರಣಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ದಾಳಿಗೆ ಮುಂದಾ­ಗಿರಲಿಲ್ಲ. ಆದರೆ, ಆಂತರಿಕ ದಂಗೆಯಿಂದ ಸಿರಿಯಾ ಸರಕಾರ‌ ಉರುಳಿ ಬಿದ್ದಿದೆ. ಸಿರಿಯಾ ಮೂಲಭೂತವಾದಿ ಸಂಘಟನೆ ವಶವಾಗಿದೆ. ಸಿರಿಯಾದಲ್ಲಿ ಜನರಿಗೆ ಬೇಕಾಗುವ ರೀತಿಯಲ್ಲಿ ಸರಕಾರ‌ ರಚನೆ ಮಾಡುವುದಾಗಿ ಅಲ್‌ಕಾಯಿದಾ ಜತೆ ಸಂಪರ್ಕ ಇದ್ದ ಹಯಾತ್‌ ಅಲ್‌ ಶಾಮ್‌ ಹೇಳಿದ್ದರೂ ಇಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗುತ್ತದೆ ಎಂದು ಹೇಳುವುದು ಕಷ್ಟ. ಈ ಸಂಘಟನೆಯ ನಾಯಕರ ಮನವೊಲಿಸಿ ಲಾಭ ಮಾಡಿಕೊಳ್ಳಲು ಈಗಾಗಲೇ ಅಮೆರಿಕ, ಇಸ್ರೇಲ್‌, ಇರಾನ್‌ಗಳು ಮುಂದಾಗಿವೆ.

ರಕ್ತಪಾತವಿಲ್ಲದೆ ನಡೆದ ಕ್ರಾಂತಿ!
2011ರಲ್ಲಿ ಸಿರಿಯಾ ಸರಕಾರ‌ದ ವಿರುದ್ಧ ಜನರ ದಂಗೆ ಆರಂ­ಭವಾಯಿತು. ಸುಮಾರು 14 ವರ್ಷಗಳ ಕಾಲ ನಿರಂತರ­ವಾಗಿ ನಡೆದ ದಂಗೆ ಕೊನೆಗೂ ಅಸಾದ್‌ ಸರಕಾರ‌ವನ್ನು ಬೀಳಿಸುವಲ್ಲಿ ಯಶಸ್ವಿಯಾಯಿತು. ಈ ದಂಗೆಯ ನೇತೃತ್ವವನ್ನು ಹಯಾತ್‌ ಅಲ್‌ ಶಾಮ್‌ ವಹಿಸಿಕೊಂಡ ಬಳಿಕ ವಿದೇಶಿ ನೆರವು ಹೆಚ್ಚಾಯಿತು. ಹೀಗಾಗಿ ಸರಕಾರ‌ ಬೀಳುವ 10 ದಿನಗಳ ಮೊದಲು ಹೋರಾಟ ತೀವ್ರಗೊಂಡಿತ್ತು. ಸಿರಿಯಾದ ಅತಿದೊಡ್ಡ ನಗರ ಅಲೆಪ್ಪೋವನ್ನು ಹೋರಾಟಗಾರರು ಮೊದಲು ವಶಪಡಿಸಿಕೊಂಡರು. ಬಳಿಕ ಹನಾ ಮತ್ತು ಹೋಮ್ಸ್‌ ನಗರಗಳನ್ನು ವಶಪಡಿಸಿಕೊಂಡರು. ಡಮಾಸ್ಕಸ್‌ ನಗರವನ್ನು ಪ್ರತಿಭಟನಕಾರರು ಹೊಕ್ಕುತ್ತಿದ್ದಂತೆ ಸೈನಿಕರು ಪ್ರತಿರೋಧ ತೋರದೆ ಹಿಂದೆ ಸರಿದ ಕಾರಣ ರಕ್ತಪಾತವಿ­ಲ್ಲದೆ ಕ್ರಾಂತಿ ನಡೆದು ಅಸಾದ್‌ ಅಧಿಕಾರ ಅಂತ್ಯಗೊಂಡಿತು. ಆದರೆ 14 ವರ್ಷಗಳ ದಂಗೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

ಅಧಿಕಾರ ಸ್ಥಾಪಿಸಲು ಭಾರೀ ಪೈಪೋಟಿ ಸಿರಿಯಾವನ್ನು ಯುದ್ಧಭೂಮಿಯನ್ನಾಗಿಸಿಕೊಂಡು ಅಮೆರಿಕ ಹಾಗೂ ರಷ್ಯಾಗಳು ದಶಗಳ ಕಾಲ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಸುತ್ತಿದ್ದವು. ಇಸ್ರೇಲ್‌ ಅಮೆರಿಕಕ್ಕೆ ಬೆಂಬಲ ಕೊಟ್ಟರೆ, ಇರಾನ್‌ ರಷ್ಯಾ ಪರವಾಗಿತ್ತು. ಇವುಗಳ ಕಚ್ಚಾಟಕ್ಕೆ ಮಧ್ಯಪ್ರಾಚ್ಯದ ಪುಟ್ಟ ದೇಶ ಸಿರಿಯಾ ಬಲಿಯಾಗಿತ್ತು. ಅಸಾದ್‌ ಅಧಿಕಾರಕ್ಕೆ ಬಂದ ಬಳಿಕ ಇವುಗಳ ಉಪಟಳವನ್ನು ಯಶಸ್ವಿಯಾಗಿ ತಗ್ಗಿಸಿದ್ದರಿಂದ ಆಂತರಿಕ ಗಲಭೆಗಳಿಗೆ ಈ ದೇಶಗಳು ಬೆಂಬಲ ನೀಡಲು ಆರಂಭಿಸಿದವು. ಇದೀಗ ಅಮೆರಿಕದ ಮಿತ್ರ ರಾಷ್ಟ್ರಗಳು ಇದರಲ್ಲಿ ಯಶಸ್ಸು ಸಾಧಿಸಿದ್ದು, ಸಿರಿಯಾದಲ್ಲಿ ಅಧಿಕಾರ ಸ್ಥಾಪಿಸಲು ಪೈಪೋಟಿ ಆರಂಭಿಸಿವೆ. ಇದು ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿದೆ.

ಸಿರಿಯಾ ವಶಕ್ಕೆ ಇಸ್ರೇಲ್‌ ಫ‌ುಲ್‌ ಪ್ಲಾನ್‌
ಸಿರಿಯಾದಲ್ಲಿ ಸರಕಾರ‌ ಬೀಳುತ್ತಿದ್ದಂತೆ ತನ್ನ ದಾಳಿಯನ್ನು ಇಸ್ರೇಲ್‌ ತೀವ್ರಗೊಳಿಸಿದೆ. ಈಗಾಗಲೇ ಹಲವು ಬಾರಿ ರಾಕೆಟ್‌ ದಾಳಿ ನಡೆಸಿ, ಪ್ರಮುಖ ಶಸ್ತ್ರಾಸ್ತ್ರ ಕೇಂದ್ರಗಳನ್ನು ನಾಶಪಡಿಸಿದೆ. ಅಸಾದ್‌ ಅಂತ್ಯವನ್ನು ಇಸ್ರೇಲ್‌ ಬೆಂಬಲಿಸಿ, ಉಗ್ರರಿಗೆ ನೆರವು ನೀಡುವುದಾಗಿ ಘೋಷಿಸಿದ್ದರೂ ಸಿರಿಯಾವನ್ನು ಸಂಪೂರ್ಣ­ವಾಗಿ ವಶಪಡಿಸಿಕೊಳ್ಳಲು ಇಸ್ರೇಲ್‌ ಮುಂದಾಗಿದೆ ಎಂದು ಹಲವು ವರದಿಗಳು ತಿಳಿಸಿವೆ. ಸಿರಿಯಾ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸಿದರೆ ಇರಾನ್‌, ಅಲ್‌ಕಾಯಿದಾ ಸೇರಿ ಹಲವು ದೇಶಗಳು ಸಿರಿಯಾ ಬೆಂಬಲಕ್ಕೆ ನಿಲ್ಲಲಿವೆ. ಹೀಗಾಗಿ ಮಧ್ಯಪ್ರಾಚ್ಯ­ದಲ್ಲಿ ಮತ್ತೂಂದು ವಿಶ್ವಯುದ್ಧಕ್ಕೂ ಮುನ್ನುಡಿ ಬರೆಯಬಹದು.

Advertisement

ಉಗ್ರವಾದಕ್ಕೆ ಮತ್ತಷ್ಟು ಪುಷ್ಟಿ ಸಿರಿಯಾ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಯಾತ್‌ ಅಲ್‌ ಶಾಮ್‌ ಅಲ್‌ಕಾಯಿದಾದ ಸಂಪರ್ಕದಲ್ಲಿದ್ದ ಸಂಘಟನೆ­ ಯಾಗಿದೆ. ಇದೀಗ ಹಳೆಯ ಪ್ರಧಾನಿಯನ್ನೇ ಉಳಿಸಿಕೊಂಡಿ ದ್ದರೂ ಈ ಸಂಘಟನೆಯ ಕೈಲಿ ಹೆಚ್ಚಿನ ಅಧಿಕಾರವಿದೆ. ಈ ಹೋರಾಟದಲ್ಲಿ ಹಲವು ಉಗ್ರ ಸಂಘಟನೆಗಳು ಭಾಗಿಯಾಗಿವೆ. ಐಸಿಸ್‌ ಸಹ ಭಾಗಿಯಾಗಿರುವುದರಿಂದ ಜಾಗತಿಕವಾಗಿ ಮತ್ತೆ ಉಗ್ರವಾದ ಹೆಚ್ಚಳವಾಗುವ ಭೀತಿ ಎದುರಾಗಿದೆ.

ದಂಗೆಗೆ ಕುಸಿದ ಇತರ ರಾಷ್ಟ್ರಗಳು
1. ಬಾಂಗ್ಲಾದೇಶ: ಸರಕಾರಿ ನೇಮಕಾತಿಯಲ್ಲಿನ ನಿಯಮ­ಗಳನ್ನು ವಿರೋಧಿಸಿ ವಿದ್ಯಾರ್ಥಿ ಗಳು ಆರಂಭಿಸಿದ ಚಳವಳಿ ತೀವ್ರಗೊಂಡು ದಂಗೆಯಾಗಿ ಮಾರ್ಪಟ್ಟು 2024ರಲ್ಲಿ ಶೇಖ್‌ ಹಸೀನಾ ನೇತೃತ್ವದ ಸರಕಾರ‌ ಪತನ

2.ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತು ಜನರು ಆರಂಭಿಸಿದ ಪ್ರತಿಭಟನೆ ತೀವ್ರಗೊಂಡ ಪರಿಣಾಮ 2022ರಲ್ಲಿ ಗೊಟಬಯ ರಾಜಪಕ್ಸೆ ಸರಕಾರ‌ವನ್ನೇ ಉರುಳಿಸಿತು.

3.ಅಫ್ಘಾನಿಸ್ಥಾನ: 20 ವರ್ಷಗಳ ಬಳಿಕ 2021ರಲ್ಲಿ ಸರಕಾರ‌ವನ್ನು ಬೀಳಿಸುವಲ್ಲಿ ಯಶಸ್ವಿಯಾದ ತಾಲಿಬಾನ್‌. ಪ್ರಸ್ತುತ ಇಡೀ ದೇಶದಲ್ಲಿ ತಾಂಡವವಾಡುತ್ತಿರುವ ಅಶಾಂತಿ.

4.ಲಿಬಿಯಾ: ಮುಅಮ್ಮರ್‌ ಗಢಾಫಿಯ ಸರ್ವಾಧಿಕಾರದ ವಿರುದ್ಧ ಆರಂಭವಾದ ಪ್ರತಿಭಟನೆ ದಂಗೆಯಾಗಿ ಮಾರ್ಪಾಡು. 2011ರಲ್ಲಿ ಗಢಾಫಿ ಸರಕಾರ‌ ಪತನ

ಸಿರಿಯಾ ಪತನದಿಂದ ಭಾರತದ ಮೇಲೇನು ಪರಿಣಾಮ?

1 ಮಿತ್ರರಾಷ್ಟ್ರವನ್ನು ಕಳೆದುಕೊಂಡ ಭಾರತ
ಸಿರಿಯಾದಲ್ಲಿ ಅಸಾದ್‌ ಆಡಳಿತವಿದ್ದ ಸಮಯದಲ್ಲಿ ಸಿರಿಯಾ ಭಾರತದ ಪ್ರಮುಖ ಮಿತ್ರ ರಾಷ್ಟ್ರವಾಗಿತ್ತು. ಜವಹರಲಾಲ್‌ ನೆಹರೂ ಕಾಲ ದಲ್ಲಿ ಆರಂಭವಾದ ದ್ವಿಪಕ್ಷೀಯ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಮುಂದುವರಿಸಿದ್ದರು. ಬಿಕ್ಕಟ್ಟಿನ ಸಮಯದಲ್ಲೆಲ್ಲಾ ಸಿರಿಯಾಕ್ಕೆ ಭಾರತ ನೆರವಾಗಿತ್ತು. 370ನೇ ವಿಧಿ ರದ್ದು ಸೇರಿದಂತೆ ಕಾಶ್ಮೀರದ ವಿಷಯದಲ್ಲಿ ಸಿರಿಯಾ ಎಂದಿಗೂ ಮೂಗು ತೂರಿಸದೆ ಅದು ಭಾರತದ ಆಂತರಿಕ ವಿಷಯ ಎಂದು ಸುಮ್ಮನಿತ್ತು. ಆದರೆ, ಈಗ ಉಭಯ ದೇಶಗಳ ನಡುವಿನ ಸಂಬಂಧ ಬದಲಾಗುವ ಸನ್ನಿವೇಶಗಳು ಎದುರಾಗಿವೆ.

2 ಭಾರತಕ್ಕೆ ಪೂರೈಕೆಯಾಗುವ ಕಚ್ಚಾತೈಲ ಸ್ಥಗಿತ?
ಭಾರತದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದ ಸಿರಿಯಾದಿಂದ ಭಾರತ ಪ್ರತಿನಿತ್ಯ ಸುಮಾರು 1 ಲಕ್ಷ ಬ್ಯಾರಲ್‌ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ. ಅಂದರೆ ವರ್ಷಕ್ಕೆ ಕನಿಷ್ಠ 25,000 ಕೋಟಿ ರೂ.ನಷ್ಟು ವ್ಯವಹಾರ ನಡೆಯುತ್ತಿತ್ತು. ಇದೀಗ ಸಿರಿಯಾ ಉಗ್ರರ ವಶವಾಗಿರುವ ಕಾರಣ ಈ ಕಚ್ಚಾತೈಲ ಪೂರೈಕೆ ನಿಧಾನವಾಗಬಹುದು ಅಥವಾ ಸ್ಥಗಿತವೂ ಆಗಬಹುದು. ಒಂದು ವೇಳೆ ಕಚ್ಚಾತೈಲ ಪೂರೈಕೆಯಕಲ್ಲಿ ವ್ಯತ್ಯಾಸವಾದರೆ ಅದು ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

3 ಭಾರತದ ಹೂಡಿಕೆಗಳು ಖೋತಾ?
ಮಿತ್ರ ರಾಷ್ಟ್ರವಾಗಿರುವ ಸಿರಿಯಾದಲ್ಲಿ ಭಾರತ ಸುಮಾರು 2000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೂಡಿಕೆಗಳನ್ನು ಮಾಡಲಾಗಿದೆ. ಇದನ್ನು ಭಾರತ ಸಾಲದ ರೂಪದಲ್ಲಿ ನೀಡಿದ್ದು, ಕಚ್ಚಾತೈಲ ಹಾಗೂ ಇತರ ವಸ್ತುಗಳ ಪೂರೈಕೆ ಮಾಡುವ ಮೂಲಕ ಸಿರಿಯಾ ಇದನ್ನು ತೀರಿಸಬೇಕಿತ್ತು. ಆದರೆ, ಈಗ ಅಲ್ಲಿನ ಸರಕಾರ‌ ಬದಲಾಗಿದೆ. ಹೀಗಾಗಿ ಭಾರತದ ಹೂಡಿಕೆ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಭಾರತದ ಹಲವು ಖಾಸಗಿ ಕಂಪೆ‌ನಿಗಳೂ ಸಿರಿಯಾದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹೂಡಿಕೆ ಮಾಡಿವೆ.

4 ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಳ?
ಸಿರಿಯಾ ಸಹ ಉಗ್ರ ಸಂಘಟನೆಯ ವಶವಾಗಿರುವುದು ಐಸಿಸ್‌ನ ಬೆಂಬಲ ಬಾಹುಗಳನ್ನು ವಿಸ್ತರಿಸುವ ಸಾಧ್ಯತೆಗಳಿವೆ. ಉಗ್ರ ಸಂಘಟನೆಗಳು ಹಾಗೂ ಐಸಿಸ್‌ನ ಬೆಂಬಲ ಹೆಚ್ಚಿದರೆ ಅದು ಕಾಶ್ಮೀರಕ್ಕೂ ಹಬ್ಬಲಿದ್ದು, ಇಲ್ಲಿ ಉಗ್ರ ಚಟುವಟಿಕೆ ಹೆಚ್ಚಬಹುದು ಎನ್ನಲಾಗುತ್ತಿದೆ. ಹಯಾತ್‌ ಅಲ್‌ ಶಾಮ್‌ ಈಗ ಅಲ್‌ಖೈದಾ ಜತೆಗಿನ ಸಂಪರ್ಕ ಕಳೆದುಕೊಂಡಿರು­ವುದಾಗಿ ಹೇಳಿಕೊಂಡರೂ ಐಸಿಸ್‌ ನಿಯಂತ್ರಣದಿಂದ ಮುಕ್ತವಾಗಲು ಸಾಧ್ಯವಾಗಿಲ್ಲ. ಹೀಗಾಗಿ ಉಗ್ರರ ಕಬಂಧ ಬಾಹುಗಳು ಮತ್ತೂಮ್ಮೆ ಕಾಶ್ಮೀರವನ್ನು ಕಬಳಿಸಲು ಯತ್ನಿಸಬಹುದು ಎನ್ನಲಾಗುತ್ತಿದೆ.

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next