Advertisement

“ಪ್ರಗತಿ ಮೋದಿಯಿಂದ ಮಾತ್ರ ಆಯಿತೇ?’

09:27 PM Apr 12, 2019 | Team Udayavani |

ನಗರ: ದೇಶದ ಉದ್ಧಾರವಾಗಿದ್ದು ಮೋದಿ ಬಂದ ಮೇಲೆಯೇ? ಹಾಗಾದರೆ ದೇಶವನ್ನು ಎಪ್ಪತ್ತು ವರ್ಷದಲ್ಲಿ ಯಾರಿಗೂ ಮಾರಿಲ್ಲ ತಾನೆ? ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರಶ್ನಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ರಕ್ಷಣೆ ಮಾಡಿದ್ದೇ ಮೋದಿ ಎನ್ನುವರ್ಥದಲ್ಲಿ ಬಿಜೆಪಿ ಪ್ರಚಾರ ಮಾಡುತ್ತಿದೆ. ಪಾಕಿಸ್ಥಾನದ ಸೊಕ್ಕು ಮುರಿದಿದ್ದು ಇದೇ 70 ವರ್ಷದ ಕಾಂಗ್ರೆಸ್‌ ಆಡಳಿತದಲ್ಲಿ ಎನ್ನುವುದನ್ನು ಬಿಜೆಪಿ ಮರೆತಿದೆ. ಪಾಕಿಸ್ಥಾನದ ಉಪಟಳ ಜಾಸ್ತಿಯಾದಾಗ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಭಾರತ ದಿಟ್ಟ ನಿರ್ಧಾರ ಕೈಗೊಂಡು ಪಾಕಿಸ್ಥಾನವನ್ನು ಸೋಲಿಸಿ ಬಾಂಗ್ಲಾ ವಿಮೋಚನೆ ಮಾಡಿತು. ಇದಕ್ಕೆ ಮೊದಲು ನಡೆದ ಎರಡು ಯುದ್ಧದಲ್ಲೂ ಪಾಕಿಸ್ಥಾನವನ್ನು ಭಾರತ ಸೋಲಿಸಿದೆ. ಬಿಜೆಪಿ ಹೇಳುವಂತೆ ದೇಶ ರಕ್ಷಣೆ ಕಾರ್ಯ ಮೋದಿಯಿಂದ ಮಾತ್ರ ನಡೆದಿದ್ದಲ್ಲ ಎಂದರು.

ಅಭ್ಯರ್ಥಿಗಳೇ ಇಲ್ಲವೇ?
ದೇಶಕ್ಕಾಗಿ ಕಳಪೆ ಸಂಸದನನ್ನು ಸಹಿಸಿಕೊಳ್ಳಬೇಕು ಎಂದು ಸಂಘ ಪರಿವಾರ ನಾಯಕರೇ ಹೇಳುತ್ತಾರೆ. ಬಿಜೆಪಿಯಲ್ಲಿ ಒಳ್ಳೆಯ ಅಭ್ಯರ್ಥಿಗಳೇ ಇಲ್ಲವೇ? ದೇಶಕ್ಕಾಗಿ ಮತ ನೀಡಿ ಎನ್ನುವ ಬಿಜೆಪಿಯವರಿಗೆ ನಮ್ಮ ಕ್ಷೇತ್ರ ಹಾಳಾದರೂ ಚಿಂತೆಯಿಲ್ಲ ಎನ್ನುವಂತಾಗಿದೆ ಎಂದರು.

ಅಭ್ಯರ್ಥಿ ಪರ ಮತ ಕೇಳುವ ಬದಲು ಬಿಜೆಪಿಯವರು ಮೋದಿ ಹೆಸರಲ್ಲಿ ಮತ ಕೇಳುತ್ತಾರೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಪಕ್ಷ ಎರಡರ ಹೆಸರಲ್ಲೂ ಮತ ಕೇಳುವ ಅರ್ಹತೆ ಹೊಂದಿದೆ. ಮಿಥುನ್‌ ರೈ ಜತೆ ಯುವಕರು ಬೆನ್ನುಲುಬಾಗಿ ನಿಂತಿದ್ದು, ಈ ಬಾರಿ ನಮ್ಮ ಪಕ್ಷದ ಗೆಲುವು ಖಂಡಿತ ಎಂದರು.

10 ಸಾವಿರ ಲೀಡ್‌
ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, 2013ರ ಫಲಿತಾಂಶ ಪುತ್ತೂರಿನಲ್ಲಿ ಈ ಬಾರಿ ಮರುಕಳಿಸಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಪುತ್ತೂರಿನಲ್ಲಿ 10 ಸಾವಿರ ಮತಗಳ ಮುನ್ನಡೆ ಪಡೆಯಲಿದ್ದಾರೆ ಎಂದು ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ವಿಟ್ಲ -ಉಪ್ಪಿನಂಗಡಿ ಬ್ಲಾಕ್‌ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಯು. ಲೋಕೇಶ್‌ ಹೆಗ್ಡೆ ಇದ್ದರು.

Advertisement

ಎ. 14: ಅಭಿಯಾನ
ಎ. 14ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಪಕ್ಷ ನಮ್ಮ ಬೂತ್‌ ನಮ್ಮ ಹೊಣೆ ಎನ್ನುವ ಹೆಸರಿನ ಅಭಿಯಾನ ನಡೆಸಲಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಬೂತ್‌ನಲ್ಲಿ ಪ್ರಚಾರ, ಮನೆ ಮನೆ ಭೇಟಿ ನಡೆಸಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮನೆ ಭೇಟಿ ಮುಗಿದಿದ್ದು, 2ನೇ ಸುತ್ತು ನಡೆಯುತ್ತಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next