Advertisement

Politics: “ಹುಡುಗ ಬುದ್ಧಿ”ಗೆ ಅಧಿಕಾರ ಬೇಕೆ?

08:06 PM Aug 16, 2023 | Team Udayavani |

ಸಂಸದೀಯ ಮಂಡಳಿಯು ಚುನಾವಣಾ ಸ್ಪರ್ಧೆ ವಯೋಮಿತಿಯನ್ನು 25ರಿಂದ 18 ವರ್ಷಕ್ಕೆ ಇಳಿಸುವ ಚಿಂತನೆ ಗಮನಾರ್ಹ ಹಾಗೂ ಚಿಂತನಾರ್ಹ ಸಂಗತಿ. ಇದರಲ್ಲಿ ಒಳಿತಿನ ಜತೆಗೆ ಕೆಲವು ಎಡರು ತೊಡರುಗಳು ಎದುರಾಗುವ ಸಾಧ್ಯತೆ ಇದೆ. ಮತದಾನಕ್ಕೆ ಅರ್ಹತೆ ಪಡೆಯುವ 18ನೇ ವಯಸ್ಸಿಗೆ ಒಬ್ಬ ವ್ಯಕ್ತಿ ಚುನಾವಣೆ ಕಣಕ್ಕೆ ಇಳಿಯಬಹುದು ಎನ್ನುವುದು ವಿನೂತನ ಎನಿಸಿದರೂ ಬೆರಗುಗಣ್ಣಿನ ಕುತೂಹಲವಂತೂ ಇದ್ದೇ ಇದೆ.

Advertisement

16ನೇ ವಯಸ್ಸಿಗೆ ಎಸ್‌ಎಸ್‌ಎಲ್‌ಸಿ ಮುಗಿಸುವ ಯುವಕ-ಯುವತಿ ಪಿಯುಸಿ ಮುಗಿಸುವ ವೇಳೆಗೆ 18 ವರ್ಷ ತುಂಬುತ್ತದೆ. “ಹುಡುಗ ಬುದ್ಧಿ’ ವಯಸ್ಸಲ್ಲಿ ಕಾಲೇಜಿನಲ್ಲಿ ತಮ್ಮ ಭವಿಷ್ಯ ರೂಪಿಸುವ ವಿಷಯಗಳ ಆಯ್ಕೆಯಲ್ಲೇ ಗೊಂದಲ ಮಾಡಿಕೊಳ್ಳುತ್ತಾರೆ. ಹತ್ತಾರು ಜನರಿಗೆ ಕರೆ ಮಾಡಿ ಕೊನೆಗೆ ವಿಷಯ ಆಯ್ಕೆ ಮಾಡಿಕೊಳ್ಳುವ ಯೌವ್ವನಾವಸ್ಥೆಯಲ್ಲಿ ರಾಜಕೀಯ ರಂಗ ಎಂಬ ಚದುರಂಗ ಪ್ರವೇಶಕ್ಕೆ ಅನುಮತಿ ನೀಡುವುದು ತುಸು ಕಷ್ಟ ಸಾಧ್ಯವಾದೀತು.

ಈ ವಯಸ್ಸಿನ ಬಹುತೇಕ ಯುವಜನರಿಗೆ ಸಂವಿಧಾನ ಎಂದರೇನು, ಚುನಾವಣೆ ವ್ಯವಸ್ಥೆ ಹೇಗಿರುತ್ತದೆ, ಚುನಾವಣಾ ಆಯೋಗದ ಕಟ್ಟುಪಾಡುಗಳೇನು, ಖರ್ಚು-ವೆಚ್ಚ ಹೇಗಿರುತ್ತದೆ, ಪ್ರಚಾರ ವೈಖರಿ ಹೇಗಿರಬೇಕು, ಯಾವ ರೀತಿಯ ಭಾಷೆ ಬಳಸಬೇಕು, ಜನರ ಜತೆಗೆ ಸಂಪರ್ಕ ಸಾಧಿಸುವುದು ಹೇಗೆ, ಸಂಸದೀಯ ಕಾರ್ಯವೈಖರಿ ಹೇಗಿರುತ್ತದೆ, ಯಾವ ಇಲಾಖೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಅನುದಾನ ಎಲ್ಲಿಂದ ಬರುತ್ತದೆ, ಅಭಿವೃದ್ಧಿ ಕಾಮಗಾರಿಗಳು ಹೇಗೆಲ್ಲ ನಡೆಯುತ್ತವೆ, ಗುತ್ತಿಗೆದಾರರಿಂದ ಉತ್ತಮ ಗುಣಮಟ್ಟದ ಕಾಮಗಾರಿ ಹೇಗೆ ಮಾಡಿಸಿಕೊಳ್ಳಬೇಕು, ಸರ್ಕಾರದ ಯೋಜನೆಗಳನ್ನು ಹೇಗೆ ತಲುಪಿಸಬೇಕು ಸೇರಿದಂತೆ ಇತರೆ ವಿಷಯಗಳ ಪರಿಪೂರ್ಣ ಮಾಹಿತಿ ಇರುವುದಿಲ್ಲ.

ನಮ್ಮ ಉತ್ತರ ಕರ್ನಾಟಕ ಗ್ರಾಮೀಣ ಭಾಗದಲ್ಲಿ 18ರ ಆಸುಪಾಸಿನ ಯುವಜನತೆ ಚುನಾವಣಾ ಪ್ರಚಾರದಲ್ಲಿ ಪಕ್ಷ ಬಾವುಟ ಹಿಡಿದು ತಿರುಗಾಡಲು, ಭಿತ್ತಿಪತ್ರಗಳನ್ನು ಹಂಚಲು, ಮೈಕ್‌ನಲ್ಲಿ ಕೂಗುತ್ತ ನೆಚ್ಚಿನ ನಾಯಕನ ಪರ ಪ್ರಚಾರ ಮಾಡಲು, ಇಲ್ಲವೇ “ಬಣ ರಾಜಕೀಯ’ಕ್ಕೆ ಬಳಕೆಯಾಗುತ್ತಾರೆ. ಅವರನ್ನು ತಡೆದು ಕೇಳಿದರೆ ಚುನಾವಣೆ ಪ್ರಚಾರದ ಶೇ.10ರಷ್ಟು ಸಹ ಅವರಿಗೆ ಅರಿವಿರುವುದಿಲ್ಲ. ಚಹಾ, ಊಟದಲ್ಲೇ ಖುಷಿ ಪಟ್ಟು ತಮ್ಮ ನಾಯಕನಿಗಾಗಿ ಕೆಲಸ ಮಾಡುತ್ತಾರೆ.

ಇದೆಲ್ಲಾ ಒಂದೆಡೆಯಾದರೆ ಲೋಕಸಭೆ ಅಥವಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಸಣ್ಣದೇನು ಇರುವುದಿಲ್ಲ. ಒಬ್ಬ 18 ವರ್ಷದ ಯುವಕ ಅಥವಾ ಯುವತಿ ಈ ವಯಸ್ಸಲ್ಲಿ ಇಡೀ ಕ್ಷೇತ್ರದ ಮಾಹಿತಿ ತಿಳಿದಿರುವುದು ಕಷ್ಟ. ಆ ಕ್ಷೇತ್ರದ ಮತದಾರರೆಷ್ಟು, ಜಾತಿ ಸಮೀಕರಣ ಹೇಗಿದೆ, ಜನರ ನಾಡಿಮಿಡಿತ ಹೇಗಿದೆ, ಅಲ್ಲಿನ ನೈಜ ಸಮಸ್ಯೆ ಏನು, ಬೇಡಿಕೆಗಳೇನು ಎಂಬುದು ಅಕ್ಷರಶಃ ತಿಳಿದಿರುವುದಿಲ್ಲ. ಹೀಗಿರುವಾಗ ಇಡೀ ಕ್ಷೇತ್ರದ ಜನಪ್ರತಿನಿಧಿಯಾಗಿ ಪ್ರಜೆಗಳಿಗೆ ನ್ಯಾಯ ಒದಗಿಸುವುದು ಸವಾಲಿನ ಕೆಲಸ.

Advertisement

ಬಡ, ಸಾಮಾನ್ಯ ವರ್ಗದ ಯುವ ಜನರಿಗಂತೂ ಈ ವಯಸ್ಸಲ್ಲಿ ರಾಜಕೀಯ ಪ್ರವೇಶ ಅಸಾಧ್ಯವೆಂದರೂ ಅತಿಶಯೋಕ್ತಿ ಏನಲ್ಲ. ಆದರೆ, ರಾಜಕಾರಣಿಗಳ ಮಕ್ಕಳು ಅಥವಾ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಕುಡಿಗಳು, ಸಿರಿವಂತರು ಚಿಕ್ಕ ವಯಸ್ಸಿನ ತಮ್ಮ ಮಕ್ಕಳಿಗೆ ಜನಪ್ರತಿನಿಧಿಯಾಗಿ ಮಾಡಲು ಅನುಕೂಲವಾಗುವ ಅಪಾಯವಂತೂ ಇದ್ದೇ ಇದೆ. ಕೊಂಚ ಏರುಪೇರಾದರೂ ಅವರ ಮನೆಯ ಹಿರಿಯರು ಸಂಭಾಳಿಸುವ ಇಲ್ಲವೇ ಇವರ ಹೆಸರಲ್ಲೇ ಅವರು ರಾಜಕೀಯ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ 28 ವರ್ಷದ ತೇಜಸ್ವಿ ಸೂರ್ಯ, ಒಡಿಶಾದ ಕಿಯೋಂಜರ್‌ ಕ್ಷೇತ್ರದಿಂದ ಆಯ್ಕೆಯಾದ 25 ವರ್ಷದ ಚಂದ್ರಾಣಿ ಮುರ್ಮು, ಪಶ್ಚಿಮ ಬಂಗಾಳದ ಜಾಧವಪುರ ಕ್ಷೇತ್ರದಿಂದ ಆಯ್ಕೆಯಾದ 30 ವರ್ಷದ ಮಿಮಿ ಚಕ್ರವರ್ತಿ, ಪಶ್ಚಿಮ ಬಂಗಾಳದ ಇನ್ನೊಂದು ಕ್ಷೇತ್ರ ಬಷಿರತ್‌ನಿಂದ ಆಯ್ಕೆಯಾದ 29 ವರ್ಷದ ನುಸ್ರತ್‌ ಜಹಾನ್‌, ಮಹಾರಾಷ್ಟ್ರದ ಜಲಗಾಂವ್‌ ಕ್ಷೇತ್ರದಿಂದ ಆಯ್ಕೆಯಾದ ರಕ್ಷಾ ಖಡ್ಸೆ ಪಕ್ಷದ ಇಲ್ಲವೇ ರಾಜಕೀಯ ಗಣ್ಯರ ಕೃಪಾಕಟಾಕ್ಷದಿಂದ ಆಯ್ಕೆಯಾದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ತರುಣಾವಸ್ಥೆಯಲ್ಲಿ ಮನೆಯ ಜವಾಬ್ದಾರಿ ನಿಭಾಯಿಸಲು ಹೆಣಗಾಡುವ ಯುವಕ ಅಥವಾ ಯುವತಿ ಮೇಲೆ ಕ್ಷೇತ್ರದ ಲಕ್ಷಾಂತರ ಜನರ ಸಮಸ್ಯೆಗೆ ಸ್ಪಂದಿಸುವ ಹೊಣೆಗಾರಿಕೆಯಲ್ಲಿ ಲೋಪವಾಗುವ ಸಾಧ್ಯತೆ ಇದೆ. ರಾಜಕೀಯದ ಆಸೆಗೆ ಶಿಕ್ಷಣದಿಂದ ದೂರವಾಗುವ ಅಪಾಯವೂ ಇದೆ. ಹೀಗಾಗಿ ಕೊಂಚ ತಿಳಿವಳಿಕೆ, ಪ್ರೌಢಿಮೆ ಬರುವವರೆಗೂ ರಾಜಕೀಯ ರಂಗ ಪ್ರವೇಶಿಸಲು ಅನುಮತಿ ನೀಡದಿರುವುದು ಒಳಿತು.

– ಮಡು ಮೂಲಿಮನಿ, ಕವಿವಿ ಪತ್ರಿಕೋದ್ಯಮ ವಿಭಾಗ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next