ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷ್ಯ ಚಿತ್ರದ ವಿರುದ್ಧ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಉನ್ನತ ಅಧಿಕಾರಿಗಳು ಸೇರಿ ಒಟ್ಟು 302 ಮಂದಿಯ ಗುಂಪು ಪತ್ರಕ್ಕೆ ಸಹಿ ಹಾಕಿದ್ದು, “ಬ್ರಿಟಿಶ್ ಸಾಮ್ರಾಜ್ಯಶಾಹಿ ಪುನರುತ್ಥಾನದ ಭ್ರಮೆಗಳಿಂದ ಸಾಕ್ಷ್ಯ ಚಿತ್ರ ಸಿದ್ಧಪಡಿಸಲಾಗಿದೆ’ ಎಂದು ದೂರಿದೆ.
ಅಂದಿನ ಬ್ರಿಟಿಶ್ ಸರ್ಕಾರದ ಒಡೆದು ಹಾಳುವ ನೀತಿಯಿಂದಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದೀಗ ಸಾಕ್ಷ್ಯ ಚಿತ್ರದ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವಿನ ಉದ್ವಿಗ್ನತೆಯನ್ನು ಪುನಃ ತೀವ್ರಗೊಳಿಸಲು ಸ್ವತಃ ಬಿಬಿಸಿ ನ್ಯಾಯಾಧೀಶ ಮತ್ತು ತೀರ್ಪುಗಾರರಾಗಿ ವರ್ತಿಸಿದೆ ಎಂದು ಆರೋಪಿಸಿದೆ.
“ಇಂಡಿಯಾ: ದಿ ಮೋದಿ ಕೊಶೆನ್’ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಬಿಬಿಸಿ ಸಾಕ್ಷ್ಯ ಚಿತ್ರ ತಯಾರಿಸಿದೆ. ಇದರಲ್ಲಿ 2002ರಲ್ಲಿ ಗುಜರಾತ್ ಗಲಭೆಗಳ ಬಗ್ಗೆ ಚಿತ್ರಿಸಲಾಗಿದೆ. ಆ ಸಮಯದಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು.
“ಬಿಬಿಸಿಯು ಪೂರ್ವಗ್ರಹಪೀಡಿತವಾಗಿ ಮತ್ತು ಪಕ್ಷಪಾತಿಯಾಗಿ ಈ ಸಾಕ್ಷ್ಯ ಚಿತ್ರವನ್ನು ತಯಾರಿಸಿದೆ. ಇದು ತಟಸ್ಥ ವಿಮರ್ಶೆಯಲ್ಲ. ದೇಶಭಕ್ತರಾಗಿರುವ ನರೇಂದ್ರ ಮೋದಿ ಅವರ ವಿರುದ್ಧ ದುರುದ್ದೇಶಪೂರ್ವಕ ಆರೋಪಗಳನ್ನು ಹೊರಿಸಿದೆ. ಇಷ್ಟೇ ಅಲ್ಲದೇ ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಭಾರತದ ಜನರ ಇಚ್ಛೆಗೆ ಅನುಸಾರವಾಗಿ ನಡೆಯುವ ರಾಷ್ಟ್ರವಾಗಿ, ಭಾರತದ ಕಳೆದ 75 ವರ್ಷಗಳ ಮೂಲ ಅಸ್ತಿತ್ವವನ್ನೇ ಇದು ಪ್ರಶ್ನಿಸುತ್ತದೆ,’ ಎಂದು ಆರೋಪಿಸಿದೆ.
Related Articles
ಈ ಪತ್ರಕ್ಕೆ ರಾಜಸ್ಥಾನ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅನಿಲ್ ಡಿಯೊ ಸಿಂಗ್, ಗೃಹ ಖಾತೆ ನಿವೃತ್ತ ಕಾರ್ಯದರ್ಶಿ ಎಲ್.ಸಿ. ಗೋಯಲ್, ವಿದೇಶಾಂಗ ಖಾತೆ ನಿವೃತ್ತ ಕಾರ್ಯದರ್ಶಿ ಶಶಾಂಕ್, ರಾ ನಿವೃತ್ತ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಎನ್‌ಐಎ ನಿವೃತ್ತ ನಿರ್ದೇಶಕ ಯೋಗೇಶ್ ಚಂದರ್ ಮೋದಿ ಸೇರಿದಂತೆ ಅನೇಕ ಪ್ರಮುಖರು ಸಹಿ ಹಾಕಿದ್ದಾರೆ.
ಟ್ವೀಟ್ ಡಿಲೀಟ್
“ಬಿಬಿಸಿ ಸಾಕ್ಷ್ಯ ಚಿತ್ರವು ಅಲ್ಪಸಂಖ್ಯಾತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಬಹಿರಂಗಪಡಿಸಿದೆ,’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಟ್ವಿಟರ್ ಡಿಲೀಟ್ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡೆರೆಕ್, “ಇದು ಸೆನ್ಸಾರ್‌ಶಿಪ್. ನನ್ನ ಟ್ವೀಟ್‌ಗೆ 1 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆ ಬಂದಿತ್ತು. ಆದರೆ ನನ್ನ ಟ್ವೀಟ್ ಡಿಲೀಟ್ ಮಾಡಲಾಗಿದೆ,’ ಎಂದು ದೂರಿದ್ದಾರೆ.
ಸಾಕ್ಷ್ಯ ಚಿತ್ರದ ಲಿಂಕ್ ಡಿಲೀಟ್‌ಗೆ ಆದೇಶ
ಪ್ರಧಾನಿ ಮೋದಿ ವಿರುದ್ಧ ಬಿಡುಗಡೆ ಸಾಕ್ಷ್ಯ ಚಿತ್ರದ ಮೊದಲ ಭಾಗದ ಲಿಂಕ್‌ಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್, ಯೂಟ್ಯೂಬ್‌ಗ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಬಿಬಿಸಿಯ 50ಕ್ಕೂ ಹೆಚ್ಚು ಟ್ವಿಟರ್ ಲಿಂಕ್‌ಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್‌ಗೆ ಸೂಚಿಸಿದೆ. “ಸಾಕ್ಷ್ಯಚಿತ್ರವು ಪ್ರಚಾರದ ಸರಕಾಗಿದೆ. ಇದು ವಸ್ತುನಿಷ್ಠತೆಯನ್ನು ಹೊಂದಿಲ್ಲ. ಇದು ಬ್ರಿಟಿಶ್ ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ,’ ಎಂದು ಭಾರತ ದೂರಿದೆ.