ರಾಮನಗರ: ಮೇ 12ರಂದು ನಡೆಯುವ ಚುನಾವಣೆಯಲಿ ಗರಿಷ್ಠ ಸಂಖ್ಯೆಯ ಮತದಾರರನ್ನು ಮತದಾನ ಮಾಡುವಂತೆ ಸೆಳೆಯಲು ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಿರ್ಮಿಸಿರುವ ಮೂರು ನಿಮಿಷಗಳ ಸಾಕ್ಷ್ಯಚಿತ್ರದ ಸಿ.ಡಿ.ಗಳನ್ನು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಲ್ಲೆ„ ಮುಹಿಲನ್ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಈ ಸಿಡಿಗಳನ್ನು ಬಿಡುಗಡೆ ಮಾಡಿಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಮತದಾನ ಸಂವಿಧಾನ ನೀಡಿರುವ ಹಕ್ಕು. ಮತದಾನ ಮಾಡುವುದು ಪ್ರಜೆಗಳ ಕರ್ತವ್ಯವೂ ಹೌದು. ಹೀಗಾಗಿ ಮತದಾರರು ಚುನಾವಣೆಯ ದಿನ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು. ತಮ್ಮ ಹಕ್ಕು ಚಲಾಯಿಸುವುದರ ಮೂಲಕ ಪ್ರಜೆಗಳು ಉತ್ತುಮ ಅಭ್ಯರ್ಥಿಯನ್ನು ಅರಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಮುಲ್ಲೆ ಮುಹಿಲನ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.82 ಮತದಾನವಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಮತದಾನಕ್ಕೆ ಪ್ರೇರಣೆ ನೀಡುವ ಉದ್ದೇಶದಲ್ಲಿ ಕಿರುಸಾಕ್ಷ್ಯ ಚಿತ್ರವನ್ನು ನಿರ್ಮಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿಯೂ ವೀಕ್ಷಿಸಬಹುದು.
ಎಲ್‌ಇಡಿ ಡಿಸ್ಪೆ ವಾಲ್‌ಗಳಲ್ಲಿ ಹಾಗೂ ಇತರೆಡೆ ಪ್ರದರ್ಶಿಸಲಾಗುವುದು. ಈ ಸಾಕ್ಷ್ಯಚಿತ್ರದಲ್ಲಿ ಮತದಾನ ಮಾಡಲು ಪ್ರೇರೇಪಿಸುವ ಸಂಗತಿಗಳಿವೆ ಎಂದರು.ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಇದ್ದರು.
ಈ ಕಿರು ಸಾಕ್ಷ್ಯಚಿತ್ರದಲ್ಲಿ ಏನಿದೆ?
ಮೂರು ನಿಮಿಷಗಳ ಸಾಕ್ಷ್ಯಚಿತ್ರ ಮಂಚನಬೆಲೆ ಜಲಾಶಯದ ಮೇಲ್ನೋಟದಿಂದ ಆರಂಭವಾಗಿದೆ. ನಂತರ ಕೂಟಗಲ್ ಬೆಟ್ಟದ ಉದ್ದನೆಯ ಬಂಡೆಗಳು, ಶ್ರೀ ರಾಮದೇವರ ಬೆಟ್ಟ, ರಾಮನಗರ ನಗರ ಪ್ರದೇಶ, ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣ, ಪೊಲೀಸ್ ಭವನ, ಚನ್ನಪಟ್ಟಣದ ಬೊಂಬೆಗಳು, ಜಾನಪದ ಲೋಕ ಹೀಗೆ ಜಿಲ್ಲೆಯ ಪ್ರಮುಖ ಸ್ಥಳಗಳ ಚಿತ್ರಗಳನ್ನು ತೋರಿಸಲಾಗಿದೆ. ಕೃಷಿಕರು, ರೇಷ್ಮೆ ಬೆಳೆಗಾರರು, ಅರಣ್ಯ ರಕ್ಷಕ, ವಿದ್ಯಾರ್ಥಿನಿ, ಮಂಗಳಮುಖೀ ಹೀಗೆ ಸಮಾಜದ ವಿವಿಧ ನಡೆಗಳ ಸಾಮಾನ್ಯ ಜನತೆ ತಾವು ಮತಚಲಾಯಿಸುವುದಾಗಿ ಹೇಳಿ ಪ್ರೇರೇಪಿಸಿದ್ದಾರೆ. ತಾವು ಮೇ 12ರಂದು ಮತಚಲಾಯಿಸುವುದಾಗಿ ಎಲ್ಲಾ ಅರ್ಹ ಮತದಾರರು ಮತಚಲಾಯಿಸುವಂತೆ ಸಾಕ್ಷ್ಯ ಚಿತ್ರದ ಮೂಲಕ ಪ್ರೇರೇಪಿಸಿದ್ದಾರೆ.