ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ (ನಾಲ್ಕನೇದಿನ) ಮುಂದುವರಿಯಿತು.
ವಿಕ್ಟೋರಿಯ ಸಮುತ್ಛಯದ ಮುಂಭಾಗ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೂ ಪ್ರತಿಭಟನೆ ನಡೆಯಿತು. ಹಲ್ಲೆ ಮಾಡಿರುವ ಅಶ್ವಿನಿ ಗೌಡ ಸೇರಿಂದಂತೆ ಕರವೇ ಕಾರ್ಯಕರ್ತರನ್ನು ಬಂಧಿಸಬೇಕು. ಜೀವ ರಕ್ಷಿಸುವವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಪ್ರತಿಭಟನೆಗೆ ಭಾರತೀಯ ವೈದ್ಯ ಸಂಘವೂ (ಐಎಂಎ) ಪ್ರತಿಭಟನೆಗೆ ಬೆಂಬಲ ಸೂಚಿಸುವ ಹಿನ್ನೆಲೆ ಕರವೇ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಕೈಗೊಂಡು ಬಂಧಿಸದಿದ್ದರೆ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿರುವ ಐಎಂಎ ಕಾರ್ಯ ದರ್ಶಿ ಡಾ.ಎಸ್.ಶ್ರೀನಿವಾಸ್, ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದು, ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾರ್ಯಕರ್ತರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಕ್ಷಮೆ ಕೋರಬೇಕು ಎಂದು ವೈದ್ಯರು ಒತ್ತಾಯಿಸಿದರು.
ಹೊರರೋಗಿಗಳ ವಿಭಾಗ (ಒಪಿಡಿ) ಸೇವೆ ನಿಲ್ಲಿಸಿದರೆ ರೋಗಿಗಳಿಗೆ ತೊಂದರೆ ಯಾಗುತ್ತದೆ. ಹೀಗಾಗಿ, ವೈದ್ಯರ ಮೇಲೆ ಹಲ್ಲೆ ಖಂಡಿಸಿ ರಾಜ್ಯಾದ್ಯಂತ ಕಪ್ಪುಪಟ್ಟಿ ಧರಿಸಿ ಐಎಂಎ ವೈದ್ಯರು ಸೇವೆ ಸಲ್ಲಿಸಿದ್ದಾರೆ. ಮುಂದಿನ ಎರಡು ದಿನದಲ್ಲಿ ಕರವೇ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ (ನ.8) ಐಎಂಎ ವತಿಯಿಂದ ರಾಜ್ಯಾದ್ಯಂತ ಹೊರರೋಗಿಗಳ ಸೇವೆ (ಒಪಿಡಿ) ಬಂದ್ ಮಾಡಿ ಪ್ರತಿಭಟಿಸಲಾಗುವುದು. ಗುರುವಾರ ಹಾಗೂ ಶುಕ್ರವಾರ ಕಪ್ಪುಬಟ್ಟೆ ಪಟ್ಟಿ ಧರಿಸಿಯೇ ವೈದ್ಯರು ಸೇವೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ರೋಗಿಗಳ ಪರದಾಟ: ವಿಕ್ಟೋರಿಯಾ ಸಮುತ್ಛಯದ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗದಲ್ಲಿ ಮಂಗಳವಾರ ಹೆಚ್ಚು ಸಂಖ್ಯೆಯಲ್ಲಿ ರೋಗಿಗಳು ಬಂದಿದ್ದು, ವೈದ್ಯರ ಸಂಖ್ಯೆ ಕಡಿಮೆಯಿದ್ದ ಪರಿಣಾಮ ಸಮಯಕ್ಕೆ ಚಿಕಿತ್ಸೆಗಾಗಿ ಪರದಾಡಿದರು. ವಿವಿಧ ಚಿಕಿತ್ಸಾ ವಿಭಾಗಗಳ ಮುಂದೆ ರೋಗಿಗಳು ಸಾಲುಗಟ್ಟಿ ನಿಂತಿದ್ದರು.
ವಿಕ್ಟೋರಿಯಾ ಸಮುತ್ಛಯದ ಪ್ರಮುಖ ದ್ವಾರದ ಬಳಿ ಪ್ರತಿಭಟನೆ ನಡೆಯುತ್ತಿದ್ದರಿಂದ ಚಿಕಿತ್ಸೆಗಾಗಿ ಬಂದ ರೋಗಿಗಳು ಆಸ್ಪತ್ರೆ ಪ್ರವೇಶಕ್ಕೆ ಕಷ್ಟಪಡಬೇಕಾಯಿತು. ಇನ್ನು ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ ಇತರೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗ ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕೈಗೊಂತ್ತು. ಹೀಗಾಗಿ ಇತರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಕೆ.ಸಿ. ಜನರಲ್, ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ.