Advertisement

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ: ಸ್ಪೀಕರ್‌ ಬೇಸರ

07:30 PM Feb 23, 2023 | Team Udayavani |

ವಿಧಾನಸಭೆ: ಗ್ರಾಮೀಣ ವೈದ್ಯರ ಕೊರತೆಯ ಬಗ್ಗೆ ವಿಧಾನಸಭೆಯಲ್ಲಿ ಮತ್ತೆ ಸುದೀರ್ಘ‌ ಚರ್ಚೆಯಾಗಿದ್ದು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಿರಿಯ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯ ಗೌಡರ ಪರವಾಗಿ ಶಾಸಕ ಅಜಯ್‌ ಸಿಂಗ್‌ ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಈ ಚರ್ಚೆ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ. ವೈದ್ಯಕೀಯ ಸಲಕರಣೆಗಳನ್ನೂ ಪೂರೈಸುತ್ತಿದೆ. ಆದರೆ ವೈದ್ಯರು ಗ್ರಾಮೀಣ ಸೇವೆಗೆ ಹೋಗುತ್ತಿಲ್ಲ. ವೈದ್ಯ ವೃತ್ತಿ, ಪವಿತ್ರ ವೃತ್ತಿ ಎಂದು ಓದಿದವರೇ ಶಹರಕ್ಕೆ ಸೀಮಿತವಾದರೆ ಹೇಗೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.

ವೈದ್ಯ ಪದವಿ ಪೂರ್ಣಗೊಳಿಸುವವರೆಗೆ ಪ್ರತಿಯೊಬ್ಬರಿಗೂ ಸರ್ಕಾರ ಸಾಕಷ್ಟು ಹಣ ವಿನಿಯೋಗಿಸುತ್ತದೆ. ಇಷ್ಟಾದರೂ ಗ್ರಾಮೀಣ ಸೇವೆಗೆ ಮನಸು ಮಾಡುವುದಿಲ್ಲ ಎಂದಾದರೆ ಸರ್ಕಾರ ಈ ಸದನದ ಮೂಲಕ ಕಠಿಣ ಸಂದೇಶ ರವಾನೆ ಮಾಡಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಶಾಸಕರಾದ ಹರತಾಳ ಹಾಲಪ್ಪ, ಕಳಕಪ್ಪ ಬಂಡಿ, ಪ್ರಿಯಾಂಕ ಖರ್ಗೆ, ನಾರಾಯಣಸ್ವಾಮಿ, ಎಚ್‌.ಪಿ.ಮಂಜುನಾಥ್‌, ಯು.ಟಿ.ಖಾದರ್‌ ಸೇರಿದಂತೆ ಹಲವರು ದನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಕಳೆದ 8-9 ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ವೈದ್ಯ ಕಾಲೇಜುಗಳು ದ್ವಿಗುಣವಾಗಿದೆ. 1080 ಎಂಬಿಬಿಎಸ್‌ ವೈದ್ಯರ ನೇಮಕವಾಗಿದೆ. ಇನ್ನೂ ಶೇ.5ರಷ್ಟು ವೈದ್ಯರ ಕೊರತೆ ಇದೆ. ವೈದ್ಯರು ಗ್ರಾಮೀಣ ಸೇವೆಗೆ ಹೋಗುತ್ತಿಲ್ಲ ಎಂಬುದು ನಿಜ. ನಾನು ಈ ಹಿಂದೆ ಕೌನ್ಸೆಲಿಂಗ್‌ ಮೂಲಕ ನೇಮಕ ವ್ಯವಸ್ಥೆ ಜಾರಿಗೆ ತಂದಿದ್ದೆ. ಆದರೆ ವರ್ಗಾವಣೆಗೆ ಯಾರಿಂದ ಶಿಫಾರಸು ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರ ವೇತನ ಪರಿಷ್ಕರಣೆ ಮಾಡುವುದರಿಂದ ಸಮಸ್ಯೆ ಬಗೆಹರಿಸುವುದಕ್ಕೆ ಸಾಧ್ಯವಿದೆ. ಗ್ರಾಮೀಣ ಸೇವೆಗೆ ಹೋಗುವ ವೈದ್ಯರಿಗೆ ಲೈನ್‌ಮ್ಯಾನ್‌ಗಳಿಗಿಂತ ಕಡಿಮೆ ವೇತನ ಕೊಟ್ಟರೆ ಹೇಗೆ ? ಎಂದು ಕಳಕಪ್ಪ ಬಂಡಿ ಹಾಗೂ ಹರತಾಳ ಹಾಲಪ್ಪ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next