Advertisement

ವೈದ್ಯ ಮಂಜುನಾಥ್‌ ಮನೆಗಳವು ಆರೋಪಿ ಸೆರೆ

06:27 AM Jan 13, 2019 | |

ಬೆಂಗಳೂರು: ಮನೆ ಮಾಲೀಕರ ವಿಶ್ವಾಸ ಗಳಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಆಂಧ್ರಪ್ರದೇಶದಲ್ಲಿ ಸ್ವಂತ ಮನೆಯನ್ನು ನವೀಕರಣ ಮಾಡಿಸಿಕೊಂಡಿರುವುದಲ್ಲದೆ, ಸೇಹಿತರ ಜತೆ ಪ್ರವಾಸಿತಾಣಗಳಿಗೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದ ಆರೋಪಿಯೊಬ್ಬ ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಚಾಮುಂಡೇಶ್ವರಿನಗರ ನಿವಾಸಿ ಆನಂದ ಅಲಿಯಾಸ್‌ ಆನಂದ ಕುಮಾರ್‌(27) ಬಂಧಿತ. ಈತನಿಂದ 14.40 ಲಕ್ಷ ರೂ. ಮೌಲ್ಯದ 480 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಮನೆ ಸೇವಕನೆ ಕೃತ್ಯವೆಸಗಿರುವುದು ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಾಗಿತ್ತು ಎಂದು ಪೊಲೀಸರು ಹೇಳಿದರು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಮ್ಮಲ್‌ ಪಲ್ಲಿ ತಾಲೂಕಿನ ಆನಂದ ಕೆಲ ವರ್ಷಗಳ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದ. ನಗರದಲ್ಲಿ ವೈದ್ಯರು, ಎಂಜಿನಿಯರ್‌ಗಳ ಮನೆಗಳಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಬಳಿಕ ಅವರ ವಿಶ್ವಾಸಗಳಿಸಿ, ಆ ಮನೆಯ ಎಲ್ಲ ಸದಸ್ಯರ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳುತ್ತಿದ್ದ. ಒಂದೇ ಬಾರಿ ಎಲ್ಲ ಚಿನ್ನಾಭರಣಗಳನ್ನು ಕಳವು ಮಾಡಿದರೆ ಅನುಮಾನ ಬರಬಹುದು ಎಂದು ಭಾವಿಸಿ, ಆಗಾಗ್ಗೆ ಒಂದೊಂದೇ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ. ನಂತರ ಬೆಂಗಳೂರು ಅಥವಾ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ಕೋರಮಂಗಲದಲ್ಲಿ ಖಾಸಗಿ ಕ್ಲೀನಿಕ್‌ ನಡೆಸುವ ವೈದ್ಯ ಮಂಜುನಾಥ್‌ ಎಂಬುವರ ಮನೆಯಲ್ಲಿ ಕಾರು ಚಾಲಕನಾಗಿದ್ದ. ಅವರ ಮನೆ ಸದಸ್ಯರ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಆರೋಪಿ, 14.40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ, ಅವುಗಳನ್ನು ಮಾರಾಟ ಮಾಡಿದ್ದ  ಎಂದು ಪೊಲೀಸರು ಹೇಳಿದರು.

Advertisement

ಸ್ನೇಹಿತರೊಂದಿಗೆ ಪ್ರವಾಸ: ಆರೋಪಿ ಆನಂದ್‌ ಕೃತ್ಯದಿಂದ ಬಂದ ಹಣದಲ್ಲಿ ಆಂಧ್ರಪ್ರದೇಶದ ಸ್ವಂತ ಊರಿನಲ್ಲಿ ದುರಸ್ತಿಗೊಂಡಿರುವ ತನ್ನ ಮನೆಯನ್ನು ನವೀಕರಣ ಮಾಡಿಕೊಳ್ಳಲು ಬಳಸಿಕೊಂಡಿದ್ದಾನೆ. ಅಲ್ಲದೆ, ಕೆಲ ಸ್ನೇಹಿತರಿಗೆ ಸಾಲ ಕೊಡ ಕೊಟ್ಟಿರುವ ಆರೋಪಿ, ಸ್ನೇಹಿತರ ಜತೆ ಗೋವಾ, ಪಾಂಡಿಚೇರಿ ಹಾಗೂ ಪ್ರತಿಷ್ಠಿತ ಹೋಟೆಲ್‌ಗ‌ಳಲ್ಲಿ ಉಳಿದುಕೊಂಡು ಮೋಜು-ಮಸ್ತಿ ಮಾಡುತ್ತಿದ್ದ. ಈತನ ಮೇಲೆ ಅನುಮಾನಗೊಂಡ ಪೊಲೀಸರು ಈತನ ಚಲವಲನಗಳ ಮೇಲೆ ನಿಗಾವಹಿಸಿದ್ದರು. ಈ ವೇಳೆ ಈತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯನಾಗಿರುವುದು ಕಂಡು ಬಂದಿತ್ತು ಎಂದು ಪೊಲೀಸರು ಹೇಳಿದರು.

ಫೇಸ್‌ಬುಕ್‌ ಕೊಟ್ಟ ಸುಳಿವು: ಆರೋಪಿ ಆನಂದ ತನ್ನ ಹಳೇ ಮನೆಯನ್ನು ನವೀಕರಣ ಮಾಡಿಕೊಂಡಿರುವುದು, ಪ್ರತಿಷ್ಠಿತ ಹೋಟೆಲ್‌ಗ‌ಳಲ್ಲಿ ಸ್ನೇಹಿತರ ಜತೆ ಉಳಿದುಕೊಂಡಿರುವುದು, ಪ್ರವಾಸಿತಾಣಗಳಲ್ಲಿ ಮೋಜು-ಮಸ್ತಿ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next