Advertisement
ಮುಷ್ಕರದ ಮಾಹಿತಿ ಇದ್ದವರು, ಆಸ್ಪತ್ರೆಗಳತ್ತ ಬರಲಿಲ್ಲ. ಆದರೆ ಮಾಹಿತಿ ಇಲ್ಲದವರು ಎಂದಿನಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ದೊರೆಯದೆ ವಾಪಸ್ಸಾದರು. ಕೆಲವರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಕೆಮ್ಮು, ಶೀತ, ತಲೆನೋವು, ದಿಢೀರ್ ಅಸ್ವಸ್ಥತೆಯಿಂದಾಗಿ ಖಾಸಗಿ ಆಸ್ಪತ್ರೆ ಹೋದವರಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಂತಾಗಿತ್ತು.
Related Articles
Advertisement
ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಹೊರರೋಗಿ ವಿಭಾಗದ ಸಿಬ್ಬಂದಿ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ತುರ್ತು ನಿಗಾ ಘಟಕ ಹಾಗೂ ದಾಖಲು ವಿಭಾಗದಲ್ಲಿ ಸೇವೆಯಲ್ಲಿದ್ದ ವೈದ್ಯರು ಬೆಳಗ್ಗೆಯೇ ರೌಂಡ್ಸ್ ಮುಗಿಸಿದರೆ, ಹೊರರೋಗಿ ವಿಭಾಗದ ಸಿಬ್ಬಂದಿ ಕಚೇರಿಯಲ್ಲೇ ಕುಳಿತು ಕಾಲ ಕಳೆದರು.
ಮೊದಲೇ ಸಿದ್ಧವಾಗಿದ್ದೆವು: ಖಾಸಗಿ ವೈದ್ಯರು ಮುಷ್ಕರ ನಡೆಸುವ ಬಗ್ಗೆ ಮಾಹಿತಿ ಮುಂಚೆಯೇ ತಿಳಿದಿತ್ತು. ಖಾಸಗಿ ಆಸ್ಪತ್ರೆಗೆ ಹೋಗುವ ಹೊರ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುವ ಸಾಧ್ಯತೆ ಹೆಚ್ಚಿದ್ದರಿಂದ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಮೊದಲೇ ಸೂಚನೆ ನೀಡಿದ್ದೆವು.
ವಾರದ ರಜೆಯ ವೈದ್ಯರಿಗೆ ರೋಗಿಗಳ ಸಂಖ್ಯೆಯ ಆಧಾರದಲ್ಲಿ ಹೊಂದಾಣಿಕೆ ಮಾಡಲಾಗಿದೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಿದ್ದೇವೆ ಎಂದು ವಿಕ್ಟೋರಿಯ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ.ಎಚ್.ಎಸ್.ಸತೀಶ್ ಮಾಹಿತಿ ನೀಡಿದರು.
ತುರ್ತು ವಿಭಾಗಗಳಲ್ಲಿ ಮುಂದುವರಿದ ಚಿಕಿತ್ಸೆ: ಮುಷ್ಕರ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳಿಗೆ “ಉದಯವಾಣಿ’ ಭೇಟಿ ನಿಡಿದಾಗ ಹೊರ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದು ಕಂಡು ಬಂತು. ಇನ್‌ಫ್ಯಾಂಟ್ರಿ ರಸ್ತೆಯ ಸ್ಪರ್ಶ ಆಸ್ಪತ್ರೆ, ಕ್ರೆಸೆಂಟ್ ರಸ್ತೆಯ ಮಲ್ಲಿಗೆ ಆಸ್ಪತ್ರೆಗಳಿಗೆ ಶುಕ್ರವಾರ ಮುಂಜಾನೆಯಿಂದ ಸಂಜೆವರೆಗೆ ಬೆರಳೆಣಿಕೆಯಷ್ಟು ಹೊರ ರೋಗಿಗಳು ಭೇಟಿ ನೀಡಿದ್ದರು.
ಕಂಠೀರವ ಕ್ರೀಡಾಂಗಣ ಸಮೀಪದ ಮಲ್ಯ ಆಸ್ಪತ್ರೆಯಲ್ಲೂ ವೈದ್ಯರ ಕೊರತೆ ಕಂಡು ಬಂತು. ಇಲ್ಲೂ ಕೂಡ ಹೊರರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿರಲಿಲ್ಲ. ಆದರೆ ತುರ್ತು ವಿಭಾಗಕ್ಕೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಅಪಾಯವಿಲ್ಲದ್ದನ್ನು ಖಚಿತಪಡಿಸಿಕೊಂಡು ವಾಪಸ್ ಕಳುಹಿಸಿಕೊಡಲಾಯಿತು.
ಕನ್ನಿಂಗ್‌ಹ್ಯಾಮ್ ರಸ್ತೆಯ ವಿಕ್ರಮ್ ಆಸ್ಪತ್ರೆಯ ಎಲ್ಲ ಒಪಿಡಿ ವಿಭಾಗದ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಹೊರರೋಗಿಗಳು ಕಾಣಲಿಲ್ಲ. ಆದರೆ, ತುರ್ತು ವಿಭಾಗಕ್ಕೆ 21 ಪ್ರಕರಣಗಳು ಬಂದಿದ್ದು, ಈ ಪೈಕಿ ತೀವ್ರವಾಗಿ ಅಸ್ವಸ್ಥರಾಗಿದ್ದ ನಾಲ್ವರನ್ನು ದಾಖಲು ಮಾಡಿಕೊಳ್ಳಲಾಗಿದೆ. ಉಳಿದಂತೆ 17 ಮಂದಿಯನ್ನು ಚಿಕಿತ್ಸೆ ನಂತರ ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಒಳರೋಗಿ ವಿಭಾಗದ ಆರೋಗ್ಯ ಸೇವೆಯಲ್ಲಿ ಹೆಚ್ಚಿನ ವ್ಯತ್ಯಯ ಆಗಿಲ್ಲ. ಬೆಳಗ್ಗೆ ಮತ್ತು ಮಧ್ಯಾಹ್ನ ಒಳರೋಗಿಗಳ ತಪಾಸಣೆಗೆ ವೈದ್ಯರು ಬಂದಿದ್ದರು. ಒಪಿಡಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಎಂದು ವಿಕ್ರಂ ಆಸ್ಪತ್ರೆಯ ಡಾ.ರಾಜೇಶ್ ತಿಳಿಸಿದ್ದಾರೆ. ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇತ್ತು.