ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಹಾಗೂ ತುರ್ತು ಚಿಕಿತ್ಸಾ ಘಟಕ ಪ್ರಾರಂಭವಾಗಲಿದೆ. ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆ ಬಗ್ಗೆ ನಿರಂತರ ದೂರುಗಳಿದ್ದು, ಚಿಕಿತ್ಸಾ ಸೇವೆಯ ಕೊರತೆ ಜತೆಗೆ ಸೌಲಭ್ಯದ ಕೊರತೆಯ ಬಗ್ಗೆ ಸಾಮಾನ್ಯ ಆರೋಪಗಳಿದ್ದವು. ಪ್ರಸ್ತುತ ಆಸ್ಪತ್ರೆಯ ಸುಮಾರು 1.7 ಕೋಟಿ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿಯಾಗಿದ್ದು, ಹೊಸದಾಗಿ ಅನೇಕ ಸೌಲಭ್ಯ ಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮೇಲ್ದರ್ಜೆಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಆಸ್ಪತ್ರೆಗೆ ಕಾಯಕಲ್ಪ ದೊರಕಿಸಲು ಬಹಳ ವಿಳಂಬವಾಯಿತು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪರ ವ್ಯಾಪ್ತಿಗೂ ಸೇರುವ ಆಸ್ಪತ್ರೆಯನ್ನು ಆರೋಗ್ಯ ಸಚಿವರಾಗಿದ್ದ ವೇಳೆ 30 ಹಾಸಿಗೆಗಳಿಂದ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರು.
ಆದರೆ ಮೂಲ ಸೌಲಭ್ಯಗಳ ಕೊರತೆ ಹಾಗೆ ಉಳಿದಿತ್ತು. ಉಳಿದಂತೆ ವೈದ್ಯರ ಹಾಗೂ ಸೌಲಭ್ಯಗಳ ಕೊರತೆ ಹಾಗೂ ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧ, ಪರೀಕ್ಷೆ ಹಾಗೂ ಎಕ್ಸ್‌ರೇ ಮತ್ತು ಸ್ಕ್ಯಾನಿಂಗ್ ಮಾಡಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಬಡವರ ಸುಲಿಗೆ ನಡೆಯುತ್ತಿದೆ ಎಂಬ ದೂರುಗಳು ನಿರಂತರವಾಗಿ ಕೇಳಿ ಬಂದ ಹಿನ್ನೆಲೆ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಸಿದ್ದರಾಮಯ್ಯ, ಡಾ.ಮಹಾದೇವಪ್ಪ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಬಹಳ ನಿಧಾನಗತಿಯಲ್ಲಿ ಆಸ್ಪತ್ರೆಯ ಅಭಿವೃದ್ಧಿ ಆಗುತ್ತಿದೆ ಎಂಬುದು ಸಾರ್ವಜನಿಕ ಅಭಿಪ್ರಾಯ.
ರೋಗಿಗಳ ಪರದಾಟ: ವೈದ್ಯರ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ ಕೂಡ ಹೃದಯ ತಜ್ಞರು ಇಲ್ಲ. ಪ್ರತಿ ದಿನ 700ಕ್ಕೂ ಹೆಚ್ಚು ಹೊರ ರೋಗಿಗಳ ದಾಖಲಾತಿ ಇದ್ದು, ವೈದ್ಯರು ಸಾಲುತ್ತಿಲ್ಲ. ಒಳ ರೋಗಿಗಳ ಕೂಡ 150 ರಿಂದ 200 ಜನರು ಇರುತ್ತಾರೆ. ಇದರಿಂದ ವೈದ್ಯರ ಕೊರತೆ ಕಾಣುತ್ತಿದೆ. ಹಲವು ಬಾರಿ ರಜಾ ದಿನಗಳಲ್ಲಿ ಹಾಗೂ ಭಾನುವಾರದಂದು ವೈದ್ಯರಿಲ್ಲದೇ ರೋಗಿಗಳು ಪರದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದರಿಂದ ಇಲ್ಲಿನ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರ ನೇಮಕ ವಾಗಬೇಕು. ಹೆರಿಗೆ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾಸ್ಪತ್ರೆಗಳಿಗೆ ದಾಖಲಿಸಲು ಸೂಕ್ತ ಮಾಹಿತಿ ನೀಡಬೇಕು. ಬೆಳಗಿನಿಂದ ಸಂಜೆಯವರಿಗೆ ಇರಿಸಿಕೊಂಡು ಬಳಿಕ ಮೈಸೂರಿಗೆ ಹೋಗಿ ಎನ್ನುವ ವೈದ್ಯರ ಕ್ರಮದ ಬಗ್ಗೆ ಸಾರ್ವಜನಿಕರ ಆಕ್ಷೇಪವಿದೆ.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಆಸ್ಪತ್ರೆಯಿಂದ ಸಿಗುವ ಔಷಧ ಪಡೆಯಲು ಅನೇಕರು ಹಿಂಜರಿಯುತ್ತಾರೆ. ಹೊರಗೆ ತೆಗೆದುಕೊಳ್ಳುತ್ತೇವೆ ಬರೆದುಕೊಡಿ ಎಂದು ಹೇಳುತ್ತಾರೆ. ಔಷಧ ಹಾಗೂ ಪರೀಕ್ಷೆಗಳಿಗೆ ಹೊರಗೆ ಕಳುಹಿಸದಂತೆ ವೈದ್ಯರಿಗೆ ಸೂಚಿಸಲಾಗಿದೆ. ಎಲ್ಲಾ ಸೌಲಭ್ಯಗಳು ನಮ್ಮಲ್ಲಿಯೇ ಲಭ್ಯವಿದೆ. ಮುಂದಿನ ದಿನಗಳಲ್ಲಿ ಡಯಾಲಿಸಿಸ್. ತುರ್ತು ನಿಗಾ ಘಟಕ (ಐಸಿಯು) ಪ್ರಾರಂಭವಾಗಲಿದೆ.
-ಡಾ. ಗೋವಿಂದರಾಜು, ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
ಆಸ್ಪತ್ರೆಗೆ ರೋಗಿಗಳು ಬಂದ ಕೂಡಲೇ ಚಿಕಿತ್ಸೆ ಸಿಗಬೇಕೆಂಬ ಹಂಬಲವೇ ಸೇವಾ ಸಮಸ್ಯೆಗೆ ಕಾರಣವಾಗುತ್ತಿದೆ. ತಾಳ್ಮೆಯಿಂದ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದರೆ ಎಲ್ಲಾ ಸೌಲಭ್ಯ ಸಿಗುತ್ತದೆ. ಸಮಸ್ಯೆಗೆ ಸಂಬಂಧಿಸಿದ ವೈದ್ಯರನ್ನು ಭೇಟಿ ಮಾಡಿದರೆ ಹೆಚ್ಚು ಒತ್ತಡವಿರುವುದಿಲ್ಲ. ಅನೇಕ ವೇಳೆ ವಿನಾಕಾರಣ ವೈದ್ಯರ ಮೇಲೆ ಆರೋಪ ಮಾಡಲಾಗುತ್ತದೆ. ನಾವು ಕೈಲಾದಷ್ಟು ತ್ವರಿತ ಹಾಗೂ ಅಗತ್ಯ ಸೇವೆ ದೊರಕಿಸುತ್ತಿದ್ದೇವೆ.
-ಡಾ.ಗೋವಿಂದಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಾ ತಜ್ಞ
ಭಾನುವಾರ ಹಾಗೂ ರಜಾ ದಿನಗಳಲ್ಲಿ ರೋಗಿಗಳ ಪರದಾಟ ಹೇಳ ತೀರದು, ಆದಷ್ಟು ಇಂತಹ ದಿನಗಳಲ್ಲಿ 3- 4 ಮಂದಿ ವೈದ್ಯರನ್ನು ಹಾಕಿದರೆ ರೋಗಿಗಳಿಗೆ ಅನುಕೂಲವಾಗುತ್ತದೆ.
-ಮಹಾದೇವಪ್ಪ, ರೋಗಿ, ತಿ.ನರಸೀಪುರ
* ಎಸ್.ಬಿ.ಪ್ರಕಾಶ್