ಉಡುಪಿ: ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿ ಹೋಮಿ ಯೋಪತಿ ವಿರುದ್ಧ ಶೇ. 4, ಆಯುರ್ವೇದಿಕ್ ವಿರುದ್ಧ ಶೇ. 4 ಮತ್ತು ಅಲೋಪತಿ ವಿರುದ್ಧ ಶೇ. 92 ಪ್ರಕರಣಗಳು ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆ ಯಲ್ಲಿವೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ತಿಳಿಸಿದರು.
ಉಡುಪಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ಹಾಗೂ ಹೋಮ್ ಡಾಕ್ಟರ್ ಫೌಂಡೇಶನ್‌ನ ಜಂಟಿ ಆಶ್ರಯದಲ್ಲಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದಲ್ಲಿ ರವಿವಾರ ಆಯೋಜಿಸಲಾದ ವೈದ್ಯಕೀಯ ನಿರ್ಲಕ್ಷ್ಯಗಳ ಕುರಿತ ಕಾನೂನು ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಚಿಕಿತ್ಸೆ ಸಂಬಂಧ ವೈದ್ಯರನ್ನು ಪ್ರಶ್ನಿಸುವ ಹಕ್ಕು ರೋಗಿ ಹಾಗೂ ರೋಗಿ ಸಂಬಂಧಿಗಳಿಗೆ ಇದೆ. ವೈದ್ಯರು ರೋಗಿಯ ಚಿಕಿತ್ಸೆಯ ಸಂದರ್ಭ ಯಾವುದನ್ನು ಮಾಡಬೇಕೋ ಅದನ್ನು ಮಾಡದಿದ್ದರೆ, ಯಾವುದನ್ನು ಮಾಡಬಾರದೋ ಅದನ್ನು ಮಾಡಿದರೆ ವೃತ್ತಿ ನಿರ್ಲಕ್ಷ್ಯವಾಗುತ್ತದೆ. ವೈದ್ಯರ ಹಾಗೂ ರೋಗಿಗಳ ಸಂಬಂಧ ಸೇವೆಗಾಗಿ ಒಪ್ಪಂದವೇ ಹೊರತು ಸೇವೆಯ ಒಪ್ಪಂದ ಅಲ್ಲ. ಹಾಗಾಗಿ ವೈದ್ಯರು ಕೂಡ ಗ್ರಾಹಕರ ಕಾನೂನಿನ ವ್ಯಾಪ್ತಿಗೆ ಒಳಪಡುತ್ತಾರೆ ಎಂದರು.
ವೈದ್ಯಕೀಯ ಶಿಕ್ಷಣದ ಪಠ್ಯಪುಸ್ತಕದಲ್ಲಿರುವ ಚಿಕಿತ್ಸೆ ಹಾಗೂ ಶೇ. 95ರಷ್ಟು ವೈದ್ಯರು ಪಾಲಿಸುವ ಚಿಕಿತ್ಸೆಯ ವಿಧಾನಗಳ ಕುರಿತು ರೋಗಿಗಳು ಪ್ರಶ್ನಿಸುವಂತಿಲ್ಲ. ಆದರೆ ವೈದ್ಯರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ, ವಿದ್ಯಾರ್ಹತೆ, ಸರಿಯಾದ ಮಾಹಿತಿ ನೀಡದೆ ಚಿಕಿತ್ಸೆ, ಸರಿಯಾದ ದಾಖಲೆಗಳ ನಿರ್ವಹಣೆ ಇಲ್ಲದಿರುವ ಮತ್ತು ಮಾಹಿತಿ ಹಾಗೂ ಒಪ್ಪಿಗೆ ಇಲ್ಲದೆ ಚಿಕಿತ್ಸೆ ನೀಡುವ ಬಗ್ಗೆ ಪ್ರಶ್ನಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಹೋಮ್ ಡಾಕ್ಟರ್ ಫೌಂಡೇಶನ್‌ನ ಡಾ| ಶಶಿಕಿರಣ್ ಶೆಟ್ಟಿ ಶಿಬಿರವನ್ನು ನಡೆಸಿಕೊಟ್ಟರು. ಬಳಿಕ ಸಭಿಕರೊಂದಿಗೆ ವೈದ್ಯಕೀಯ ನಿರ್ಲಕ್ಷ್ಯಗಳ ಕುರಿತು ಸಂವಾದ ನಡೆಯಿತು.