Advertisement

ಹನಿಟ್ರ್ಯಾಪ್ ಗೆ ಸಿಲುಕಿ 14 ಲಕ್ಷ ಕಳೆದುಕೊಂಡ ವೈದ್ಯ

03:45 AM May 16, 2017 | Team Udayavani |

ಮಂಗಳೂರು: ಹನಿಟ್ರ್ಯಾಪ್‌ ಮೂಲಕ ಯುವತಿಯ ಆಸೆ ತೋರಿಸಿ ನಗರದ ಪ್ರಮುಖ ಆಸ್ಪತ್ರೆಯೊಂದರ ವೈದ್ಯರೊಬ್ಬರಿಂದ ಬರೋಬ್ಬರಿ 14 ಲಕ್ಷ ರೂ. ಲಪಟಾಯಿಸಿದ ಹೈಟೆಕ್‌ ವೇಶ್ಯಾವಾಟಿಕೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಸೋಮೇಶ್ವರದ ನಾರಾಯಣ ಸಾಲ್ಯಾನ್‌, ಉಳ್ಳಾಲದ ಮಹಮ್ಮದ್‌ ರಂಜಿ ಹಾಗೂ ಸಾದಿಕ್‌ ಹನಿಟ್ರ್ಯಾಪ್ ನಡೆಸಿದ ಪ್ರಮುಖ ಆರೋಪಿಗಳು. ಈ ಪ್ರಕರಣವನ್ನು ಬೇಧಿಸಿರುವ ಕದ್ರಿ ಠಾಣೆ ಪೊಲೀಸರು, ಕೇಸು ದಾಖಲಿಸಿಕೊಂಡು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಹನಿಟ್ರಾಪ್‌ ಜಾಲಕ್ಕೆ ಸಾಥ್‌ ನೀಡಿರುವ ರಾಕೇಶ್‌, ಆತನ ಇಬ್ಬರು ಗೆಳೆಯರು, ಹನಿಟ್ರ್ಯಾಪ್ ಗೆ ಕೈಜೋಡಿಸಿದ್ದ ಯುವತಿ ತಲೆ ಮರೆಸಿಕೊಂಡಿದ್ದಾರೆ. ಮೋಸ ಹೋದ ವೈದ್ಯರು ನೀಡಿದ ದೂರಿನ ಮೇರೆಗೆ ಕದ್ರಿ ಪೊಲೀಸರು ಈ ಜಾಲವನ್ನು ಬೇಧಿಸಿದ್ದಾರೆ.

ಹನಿಟ್ರ್ಯಾಪ್ ನಡೆದಿದ್ದು ಹೇಗೆ?
ನಗರದ ಪ್ರಮುಖ ಆಸ್ಪತ್ರೆಯ ಅನುಭವಿ ವೈದ್ಯ ಹಾಗೂ ಆರೋಪಿ ಮೊಹಮ್ಮದ್‌ ರಂಜಿ ಮೊದಲೇ ಚಿರಪರಿಚಿತರಾಗಿದ್ದರು. ವೈದ್ಯರ ದೌರ್ಬಲ್ಯ ಅರಿತಿದ್ದ ರಂಜಿ ಆತನ ಗೆಳೆಯ ಸಾದಿಕ್‌ ಜತೆಗೂಡಿ ವೈದ್ಯರ ಹಣ ಲೂಟಿ ಮಾಡುವ ಸ್ಕೆಚ್‌ ಹಾಕಿಕೊಂಡಿದ್ದರು. ಆ ಪ್ರಕಾರ ಯುವತಿಯ ಆಸೆ ತೋರಿಸಿದ ರಂಜಿ ಮೇ 2ರಂದು ಯುವತಿಯನ್ನು ಕರೆದುಕೊಂಡು ಬಂದು ಮಲ್ಲಿಕಟ್ಟೆಯ ಬಸ್‌ ನಿಲ್ದಾಣದ ಬಳಿ ನಿಂತಿದ್ದ. ಅನಂತರ ಆ ವೈದ್ಯರಿಗೆ ಕರೆ ಮಾಡಿ ಅಲ್ಲಿಗೆ ಕರೆಸಲಾಯಿತು.

ಬಳಿಕ ಮೂವರು ಕೂಡ ವೈದ್ಯರ ಕಾರಿನಲ್ಲಿ ಕುಳಿತುಕೊಂಡು ಕದ್ರಿ ಬಳಿ ಅಂಗಡಿಯೊಂದಕ್ಕೆ ಜೂಸ್‌ ಕುಡಿಯಲು ತೆರಳಿದ್ದರು. ಈ ವೇಳಗೆ ಕಾರಿನಲ್ಲೇ ಕುಳಿತುಕೊಂಡಿದ್ದ ರಂಜಿ ಆತನ ಗೆಳೆಯ ಸಾದಿಕ್‌ಗೆ ಕರೆ ಮಾಡಿ ಪ್ಲಾನ್‌ನಂತೆ ನಾವು ಇಲ್ಲಿಂದ ಹೊರಡುತ್ತಿರುವುದಾಗಿ ಮುನ್ಸೂಚನೆ ಕೊಟ್ಟಿದ್ದ. ಅದರಂತೆ ಜೂಸ್‌ ಕುಡಿದ ಬಳಿಕ ಯುವತಿ ಜತೆಗೆ ಎಲ್ಲರೂ ವೈದ್ಯರ ಕಾರಿನಲ್ಲಿ ಮಲ್ಲಿಕಟ್ಟೆ ವೃತ್ತದಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ನಾರಾಯಣ ಸಾಲ್ಯಾನ್‌, ರಾಕೇಶ್‌ ಮತ್ತು ಆತನ ಇಬ್ಬರು ಗೆಳೆಯರ ಮತ್ತೂಂದು ತಂಡವು ಕಾರಿನಲ್ಲಿ ಬಂದು ಆಗ್ನೇಸ್‌ ರಸ್ತೆಯಲ್ಲಿ ವೈದ್ಯರ ಕಾರನ್ನು ಅಡ್ಡ ಹಾಕಿ ನಿಲ್ಲಿಸಿತು. ನಾವು ಪೊಲೀಸರು; ಹುಡುಗಿಯನ್ನು ಕರೆದುಕೊಂಡು ಎಲ್ಲಿಗೆ ಹೋಗುತ್ತಿದ್ದಿಯಾ? ಎನ್ನುತ್ತ ವಾಹನ ಚಲಾಯಿಸುತ್ತಿದ್ದ ವೈದ್ಯರನ್ನು ತಮ್ಮದೇ ಕಾರಿನ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿಕೊಂಡು ನೇರ ಸೋಮೇಶ್ವರಕ್ಕೆ ಕರೆದುಕೊಂಡು ಹೋದರು.

ವಿವಸ್ತ್ರಗೊಳಿಸಿ ಫೋಟೊ
ಅಲ್ಲಿ ತಮ್ಮ ಯೋಜನೆಯಂತೆ ರೂಮ್‌ಗೆ ಕರೆದುಕೊಂಡು ಹೋಗಿ ವೈದ್ಯರನ್ನು ವಿವಸ್ತ್ರಗೊಳಿಸಿ ಬೆತ್ತಲಾಗಿ ನಿಲ್ಲಿಸಿ ಬಲವಂತವಾಗಿ ಯುವತಿಯೊಂದಿಗೆ ವಿವಿಧ ಭಂಗಿಯಲ್ಲಿ ಫೋಟೊಗಳನ್ನು ತೆಗೆಸಿದರು. ಈ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ವೈದ್ಯರಿಗೆ ಬೆದರಿಸಿ ಬ್ಲ್ಯಾಕ್‌ವೆುàಲ್‌ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟರು. ತತ್‌ಕ್ಷಣಕ್ಕೆ ಹಣ ಇಲ್ಲದಿದ್ದರೂ ಹಣ ಹೊಂದಿಸಿ ಕೊಡುವುದಾಗಿ ತಿಳಿಸಿದರು.

Advertisement

ಅನಂತರ ಆರೋಪಿಗಳ ನಿರ್ದೇಶನದಂತೆ ಆರ್‌ಟಿಜಿಎಸ್‌ ಮೂಲಕ ಹಣ ಕೊಡಲು ಒಪ್ಪಿದರು. ಫಾರ್ಮ್ ತೆಗೆದುಕೊಂಡ ಬಳಿಕ ವೈದ್ಯರ ಅನುಪಸ್ಥಿತಿಯಲ್ಲಿ ವೈದ್ಯರು ಖಾತೆ ಹೊಂದಿರುವ ಬ್ಯಾಂಕ್‌ಗೆ ರಂಜಿ ತೆರಳಿದ್ದ. ಈ ನಡುವೆ ನಾರಾಯಣ ಸಾಲ್ಯಾನ್‌ ವೈದ್ಯರಿಗೆ ಕರೆ ಮಾಡಿ ಬ್ಯಾಂಕ್‌ ಮ್ಯಾನೇಜರ್‌ ಕರೆ ಮಾಡುವಾಗ ತನ್ನದೇ ಕುಟುಂಬದವರು ಎಂದು ಹೇಳಲು ಬೆದರಿಕೆ ಹಾಕಿದ್ದ. ಅದರಂತೆ ಬ್ಯಾಂಕ್‌ ಮ್ಯಾನೇಜರ್‌ ಕರೆ ಮಾಡುವಾಗ ಹಾಗೆಯೇ ತಿಳಿಸಿದ್ದರು. ಈ ಮೂಲಕ 14 ಲಕ್ಷ ರೂ. ಆರೋಪಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ.

ಮತ್ತಷ್ಟು ಹಣಕ್ಕೆ ಆಗ್ರಹ
ಕೆಲವು ದಿನಗಳ ಬಳಿಕ ಆರೋಪಿ ರಂಜಿ ಮತ್ತೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಇದರಿಂದ ಬೇಸತ್ತ ವೈದ್ಯರು ಅನ್ಯದಾರಿ ಕಾಣದೆ ಕದ್ರಿ ಪೊಲೀಸರಿಗೆ ದೂರು ನೀಡಿ, ಘಟನೆ ಬಗ್ಗೆ ವಿವರಿಸಿ ಆರೋಪಿಗಳ ಬಗ್ಗೆ ಸುಳಿವು ನೀಡಿದ್ದರು.  ವೈದ್ಯರು, ಆರೋಪಿಗಳು ಬಳಸಿದ್ದ ಕಾರಿನ ನೋಂದಣಿ ಸಂಖ್ಯೆಯನ್ನು ನೀಡಿದ್ದರು. ಈ ರೀತಿ ವೈದ್ಯರು ಕೊಟ್ಟ ಸುಳಿವು ಆಧರಿಸಿ ಕದ್ರಿ ಇನ್ಸ್‌ಪೆಕ್ಟರ್‌ ಮಾರುತಿ ನಾಯಕ್‌ ನೇತೃತ್ವದಲ್ಲಿ ಪೊಲೀಸರು ಉಪಾಯವಾಗಿ ಆರೋಪಿಗಳನ್ನು ನಂತೂರುಪಂಪ್‌ವೆಲ್‌ ರಸ್ತೆಗೆ ಕರೆಸಿದರು. ಅಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿ ನಗರದಲ್ಲಿ ನಡೆಯುತ್ತಿದ್ದ ಪ್ರಮುಖ ಹನಿಟ್ರಾಪ್‌ ಜಾಲವೊಂದನ್ನು ಬಯಲು ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next