ಕೋಯಿಕ್ಕೋಡ್ : ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್‌ಗೆ ಈ ವರೆಗೆ 17 ಮಂದಿ ಬಲಿಯಾಗಿದ್ದಾರೆ. ಇವರಲ್ಲಿ 14 ಮಂದಿ ಕೋಯಿಕ್ಕೋಡ್‌ನವರು, ಮೂವರು ನೆರೆಯ ಮಲಪ್ಪುರಂ ಜಿಲ್ಲೆಯವರು.
ವಿಶೇಷವೆಂದರೆ ನಿಫಾ ವೈರಸ್‌ಗೆ ತುತ್ತಾದವರ ಅಂತ್ಯಕ್ರಿಯೆಗೆ ಅವರ ನಿಕಟ ಸಂಬಂಧಿಗಳು ಮುಂದೆ ಬರುತ್ತಿಲ್ಲ; ಕಾರಣ ನಿಫಾ ವೈರಸ್ ತಮಗೂ ತಗುಲಿ ತಾವೂ ಸಾಯಬಹುದು ಎಂಬ ಭೀತಿ.
ಇಂತಹ ಸ್ಥಿತಿಯಲ್ಲಿ ಕೋಯಿಕ್ಕೋಡ್ ಕಾರ್ಪೊರೇಶನ್‌ನ 41ರ ಹರೆಯದ ವೈದ್ಯಾಧಿಕಾರಿ ಡಾ. ಆರ್ ಎಸ್ ಗೋಪಕುಮಾರ್ ಅವರೇ ಸ್ವತಃ ಮುಂದೆ ನಿಂತು ನಿಫಾ ವೈರಸ್‌ನಿಂದ ಮೃತಪಟ್ಟ 12 ಮಂದಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ನಿಫಾ ವೈರಸ್‌ಗೆ ಬಲಿಯಾಗಿರುವವರಲ್ಲಿ 17 ವರ್ಷ ಪ್ರಾಯದ ಹುಡುಗ ಕೂಡ ಸೇರಿದ್ದಾನೆ. ಆತನ ತಾಯಿ ಶಂಕಿತ ನಿಫಾ ವೈರಸ್‌ಗೆ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್‌ಗೆ ಸೇರಿದ್ದಾರೆ. ಹಾಗಾಗಿ ಡಾ. ಗೋಪಕುಮಾರ್ ಅವರೇ ಸ್ವತಃ ಈ ಬಾಲಕನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಸ್ವಂತ ಮಗನನ್ನು ಕೊನೇ ಬಾರಿ ಕಾಣಲು ಮತ್ತು ಆತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆ ನತದೃಷ್ಟ ತಾಯಿಗೆ ಸಾಧ್ಯವಾಗಲಿಲ್ಲ ಎಂದು ಗೋಪಕುಮಾರ್ ಹೇಳಿದರು.
ನಿಫಾಗೆ ಬಲಿಯಾದವರ ಮೃತ ದೇಹಗಳನ್ನು ದಫನ ಮಾಡಲು ಹತ್ತು ಅಡಿ ಆಳದ ಗುಂಡಿ ತೋಡಿ ಅದರಲ್ಲಿ 5 ಕೆಜಿ ಬ್ಲೀಚಿಂಗ್ ಪೌಡರ್ ಹರಡಿ ಬಳಿಕ ಏರ್ ಟೈಟ್ ಪ್ಲಾಸ್ಟಿಕ್ ಡಬಲ್ ಬಾಡಿ ಬ್ಯಾಗ್‌ನಲ್ಲಿ ಶವವನ್ನು ಭದ್ರಗೊಳಿಸಿ ಅನಂತರ ಅದನ್ನು ಗುಂಡಿಗೆ ಇಳಿಸುವ “ಎಬೋಲಾ’ ರೀತಿಯ ದಫನವನ್ನು ಇಲ್ಲೂ ಅನುಸರಿಸಲಾಗಿದೆ ಎಂದಿರುವ ಗೋಪಕುಮಾರ್, ಈ ನಿಟ್ಟಿನಲ್ಲಿ ಎಬೋಲಾ ಕೇಸುಗಳನ್ನು ನಿರ್ವಹಿಸಿ ಅನುಭವ ಇರುವ ಪುಣೆಯ ನ್ಯಾಶನಲ್ ವೈರಾಲಜಿ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಡಾ. ರೇಶ್ಮಾ ಸಹಾಯ್ ನೆರವಾಗಿದ್ದಾರೆ ಎಂದು ಹೇಳಿದರು.