Advertisement
ಆಧುನೀಕರಣದ ಕಾಲಘಟ್ಟದಲ್ಲಿಯೂ, ಬಿಳಿ ಕೋಟಿನ ದಂಧೆಕೋರರುಗಳ ನಡುವೆಯಲ್ಲೂ “ವೈದ್ಯೋ ನಾರಾಯಣೋ ಹರಿ” ಎಂಬ ಮಾತಿಗೆ ನಿಜ ಅರ್ಥ ಕೊಡುತ್ತಿರುವ ಕೆಲವೇ ಕೆಲವು ವೈದ್ಯರಗಳ ಪೈಕಿಯಲ್ಲಿ ಇಲ್ಲೊಬ್ಬರು ಬಡವರಿಗಾಗಿ, ನಿರ್ಗತಿಕರಿಗಾಗಿ ಅಸಾಮಾನ್ಯ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎನ್ನುವುದು ಹುಬ್ಬೇರಿಸುವ ಸಂಗತಿ.
Related Articles
Advertisement
‘ನಾನು ವಿ ಐ ಎಂ ಎಸ್ ಆರ್ ನಲ್ಲಿ ಸಿನಿಯರ್ ರೆಸಿಡೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ ಆ ಸ್ಥಾನದಲ್ಲಿದ್ದ ನನಗೆ ಖಾಸಗಿ ಚಿಕಿತ್ಸಾಲಯಗಳಲ್ಲಿ ಸೇವೆ ನೀಡಲು ಅನುಮತಿ ನೀಡಿರಲಿಲ್ಲ. ಆ ಸಮಯದಲ್ಲಿ ನನಗೆ ಕ್ಲಿನಿಕ್ ತೆರೆಯಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಸಿಕ್ಕಿತು ಹಾಗೂ ಅದರ ಜೊತೆಗೆ ಕ್ಲಿನಿಕ್ ತೆರೆಯಲು ಈ ಅನುಮತಿ ದೊರೆಯಿತು. ಹೀಗಾಗಿ ನಾನು ಈಗ ಬಾಡಿಗೆ ಮನೆಯಲ್ಲಿ ನನ್ನ ‘ಒಂದು ರೂಪಾಯಿ’ ಕ್ಲಿನಿಕ್ ಅನ್ನು ಆರಂಭಿಸಿದ್ದೇನೆ’ ಎನ್ನುತ್ತಾರೆ ರಾಮ್ ಚಂದಾನಿ.
“ನಾನು ಬಡವರಿಂದ ಚಿಕಿತ್ಸಗಾಗಿ ಕೇವಲ 1 ರೂ. ಶುಲ್ಕ ಪಡೆಯುತ್ತೇನೆ. ಏಕೆಂದರೆ ತಾವು ಶುಲ್ಕವಿಲ್ಲದೇ ಸೇವೆ ಪಡೆಯುತ್ತಿದ್ದೇವೆ ಎಂಬುದು ಅವರಿಗೆ ಅನ್ನಿಸಬಾರದು. ತಮ್ಮ ಉಪಚಾರಕ್ಕಾಗಿ ತಾವು ಅಲ್ಪ ಹಣವನ್ನಾದರು ನೀಡಿದ್ದೇವೆ ಎಂಬುದು ಅವರಿಗೆ ಸಮಾಧಾನವಾಗಬೇಕಿ .” ಎಂದಿದ್ದಾರೆ. ಈ ಕ್ಲಿನಿಕ್ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 7 ಗಂಟೆಯವರೆಗೆ ತೆರೆದಿರುತ್ತದೆ”. ಎಂದು ‘ಕೇವಲ 1 ರೂ. ಶುಲ್ಕ ಯಾಕೆ ?’ ಎಂಬ ಪ್ರಶ್ನೆಗೆ ರಾಮ್ ಚಂದಾನಿ ಉತ್ತರಿಸುತ್ತಾರೆ.
ಮೊದಲ ದಿನ ಎಷ್ಟು ರೋಗಿಗಳು ಭೇಟಿ ನೀಡಿದ್ದಾರೆ ?
ತಮ್ಮ ಪತ್ನಿ ದಂತ ವೈದ್ಯೆಯಾಗಿರುವುದಾಗಿ ಹೇಳುವ ರಾಮ್ ಚಂದಾನಿ, ಅವರು ಕೂಡ ತಮಗೆ ಈ ಕಾರ್ಯದಲ್ಲಿ ಸಹಕರಿಸುತ್ತಾರೆ ಎಂದು ಹೇಳುತ್ತಾರೆ. ಈ ಕ್ಲಿನಿಕ್ ಅನ್ನು ಶುಕ್ರವಾರ ಉದ್ಘಾಟಿಸಲಾಗಿದೆ ಹಾಗೂ ಮೊದಲ ದಿನ 33 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ತಂದೆಯ ಮಾತಿಗೆ ಗೌರವ : ರಾಮ್ ಚಂದಾನಿ
ಕುಷ್ಠರೋಗದ ರೋಗಿಯೋರ್ವನನ್ನು ಸ್ವತಃ ತನ್ನ ಕೈಯಲ್ಲಿ ಎತ್ತಿಕೊಂಡು ಅವರ ಮನೆಗೆ ಕರೆದೊಯ್ದಿದ್ದಕ್ಕಾಗಿ 2019 ರಲ್ಲಿ ದೇಶದಾದಯಂತ ಗುರುತಿಸಿಕೊಳ್ಳುವುದರ ಮೂಲಕ ಬೆಳಕಿಗೆ ಬಂದ ರಾಮ್ ಚಂದಾನಿ , ‘ನನ್ನ ದಿವಂಗತ ತಂದೆ ಬ್ರಹ್ಮಾನಂದ್ ರಾಮ್ ಚಂದಾನಿ ಅವರು ನರ್ಸಿಂಗ್ ಹೋಮ್ ತೆರೆಯಲು ಹೇಳಿದ್ದರು, ಆದರೆ ಇದಕ್ಕೆ ದೊಡ್ಡ ಹೂಡಿಕೆ ಬೇಕಾಗಿತ್ತು ಮತ್ತು ಅದರಿಂದ ಬಡರೋಗಿಗಳಿಗೆ 1 ರೂ.ಗೆ ಚಿಕಿತ್ಸೆ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ತಂದೆಯವರ ಗೌರವಾರ್ಥವಾಗಿ ಈ ‘ಒಂದು ರೂಪಾಯಿ’ ಕ್ಲಿನಿಕ್ ತೆರೆದಿದ್ದೇನೆ ಎಂದು ರಾಮ್ ಚಂದಾನಿ ಹೇಳಿದರು.
ಒಟ್ಟಿನಲ್ಲಿ, ಈ ದುಬಾರಿ ದುನಿಯಾದಲ್ಲೂ ಇಂತಹದ್ದೊಂದು ಆದರ್ಶ ಪ್ರಯತ್ನಕ್ಕೆ ಡಾ. ರಾಮ್ ಚಂದಾನಿ ಮುಂದಾಗಿರುವುದು ನಿಜಕ್ಕೂ ಶ್ಲಾಘಿನೀಯ. ರಾಮ್ ಚಂದಾನಿ ಅವರ ಪ್ರಯತ್ನದ ಯಶಸ್ವಿಗೆ ಹಾಗೂ ಅವರ ಪ್ರಯತ್ನ ಹತ್ತಾರು ವೈದ್ಯರಿಗೆ ಮಾದರಿಯಾಗಿ ಬಡವರ, ನಿರ್ಗತಿಕರ ಪಾಲಿಗೆ ದೇವರಾಗಿ ಕಾಣಿಸಲಿ ಎಂದು ಪ್ರಾರ್ಥಿಸೋಣ.
–ಶ್ರೀರಾಜ್ ವಕ್ವಾಡಿ