ಶ್ರೀನಿವಾಸಪುರ: ವೈದ್ಯರ ನಿರ್ಲಕ್ಷ್ಯದಿಂದ 3 ತಿಂಗಳ ಗಂಡು ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟಿಸಿದ ಘಟನೆ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗಡಿಭಾಗ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೌಮ್ಯಾ ಅವರ ನಿರ್ಲಕ್ಷ್ಯ, ಪೋಷಕರ ಮಾತಿಗೆ ಕಿವಿಗೊಡದೆ ವಿಶ್ವವನ್ನೇ ನೋಡದ 3 ತಿಂಗಳಗಂಡು ಮಗು ಮೃತಪಟ್ಟಿದೆ. ಇದರಿಂದ ಪೋಷಕರು, ಗ್ರಾಮಸ್ಥರು ಈ ಘಟನೆ ಖಂಡಿಸಿ, ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟಿಸಿದರು.
ದೂರವಾಣಿ ಕರೆ ಮಾಡಿದ್ರೂ ನಿರ್ಲಕ್ಷ್ಯ: ಗ್ರಾಮದ ಗಂಗರತ್ನ, ಸುಬ್ರಮಣಿ ಅವರ ಗಂಡು ಮಗು ಮೃತ ದುರ್ದೈವಿ. ಪೋಷಕರುಹೇಳುವಂತೆ ಗುರುವಾರ ಮಧ್ಯಾಹ್ನ ಆರೋಗ್ಯ ಸಿಬ್ಬಂದಿಅವರ ಸೂಚನೆಯಂತೆ ಪೆಂಟಾವೆಲೆಂಟ್ ವ್ಯಾಕ್ಸಿನ್ ನೀಡಲಾಗಿದೆ. ನಂತರ ಮನೆಗೆ ತೆರಳಿದ್ದು, ಮಗು ಗಟ್ಟಿಯಾಗಿ ಅಳಲಾರಂಭಿಸಿತು. ಇದರಿಂದ ವೈದ್ಯರಿಗೆ ದೂರವಾಣಿ ಕರೆ ಮಾಡಲಾಗಿದೆ. ಇದಕ್ಕೆ ವೈದ್ಯೆ ಸುಮಾ ಪರವಾಗಿಲ್ಲ ಎಂದಿದ್ದಾರೆ.
ಫೋನ್ ಸಂಭಾಷಣೆಯಲ್ಲಿ ತೊಡಗಿದ್ರು: ನಂತರ ರಾತ್ರಿ ಮಗು ನೋವಿನಿಂದ ಕಿರುಚಾಡಿದಾಗ ಮತ್ತೆ ವೈದ್ಯೆ ಸುಮಾ ಅವರಿಗೆ ದೂರವಾಣಿ ಕರೆ ಮಾಡಲಾಗಿದೆ. ಆದರೂ ಜವಾಬ್ದಾರಿಯುತ ವೈದ್ಯರು ಜಾರಿಕೆ ಉತ್ತರ ನೀಡಿದ್ದಾರೆ. ಮತ್ತೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿದೆ. ವಿಳಂಬ ಧೋರಣೆ ಅನುಸರಿಸಿ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದಾಗ, ನಾವೇ ವೈದ್ಯರಿಗೆ ಮಗುವಿನ ಪರಿಸ್ಥಿತಿ ಬಗ್ಗೆ ಹೇಳಿದ್ದು, ಆಗಲೂ ಪರವಾಗಿಲ್ಲ ಸುಧಾರಿಸುತ್ತೆ, ಹೆಚ್ಚಿನ ಚಿಕಿತ್ಸೆಗೆ ಪಟ್ಟಣಕ್ಕೆ ಹೋಗಿ ಎಂದಾಗಕೂಡಲೇ ಪಟ್ಟಣದ ಆಸ್ಪತ್ರೆಗೆ ಕರೆತರಲಾಗಿದೆ. ಅಷ್ಟರಲ್ಲಿ ಮಗು ಮೃತಪಟ್ಟಿದೆ.
ವೈದ್ಯರಿಗೆ ತೀವ್ರ ತರಾಟೆ: ಇದರಿಂದ ಮನನೊಂದ ಪೋಷಕರು, ಗ್ರಾಮಸ್ಥರು ಸಂಬಂಧಿಕರ ಜೊತೆಗೂಡಿ ಮೃತ ಮಗುವನ್ನು ಆಸ್ಪತ್ರೆಯಲ್ಲಿಟ್ಟು ವೈದ್ಯರ ನಿರ್ಲಕ್ಷದ ಬಗ್ಗೆ ಘೋಷಣೆ ಕೂಗಿದರು.ಇದೇ ವೇಳೆ ಆರೋಗ್ಯಾಧಿಕಾರಿ ವಿಜಯಮ್ಮ ಭೇಟಿ ನೀಡಿದಸಮಯದಲ್ಲಿ ಪೋಷಕರು, ಗ್ರಾಮಸ್ಥರು ಆರೋಗ್ಯಾಧಿಕಾರಿ ವಿಜಯಮ್ಮ, ಡಾ.ಸುಮಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ಪೂರ್ವಾಪರ ವಿಚಾರಿಸದೆ, ಮಗುವಿಗೆ ವ್ಯಾಕ್ಸಿನ್‌ಕೊಟ್ಟಿದ್ದು, ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರುಹರಿಹಾಯ್ದು, ಕಳೆದ 3 ವರ್ಷಗಳಿಂದ ಡಾ.ಸೌಮ್ಯಾ ಕೆಲಸ ಮಾಡುತ್ತಿದ್ದಾರೆ. ಆದರೂ, ರೋಗಿಗಳ ಜೊತೆ ಹೊಂದಾಣಿಕೆಇಲ್ಲದೆ ಬಾಯಿಗೆ ಬಂದಂತೆ ಗದರುತ್ತಿದ್ದರು. ಇದರಿಂದ ಡಿಎಚ್‌ಒ, ಟಿಎಚ್‌ಒ, ಶಾಸಕರ ಗಮನಕ್ಕೆ ತರಲಾಗಿದೆ. ಆದರೂ, ಈ ವೈದ್ಯೆ ರೋಗಿಗಳ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.