Advertisement
ಹೌದು, ಎಂಬಿಬಿಎಸ್ ಪದವೀಧರ ಡಾ.ಅನಿಲ್ ಕುಮಾರ್ ಅವಲಪ್ಪ, ತಮ್ಮ ಕ್ಲಿನಿಕ್‌ನಲ್ಲಿ ಕುಳಿತೇ ಕೈ ತುಂಬ ಹಣ ಸಂಪಾದಿಸಿಬಹುದು. ಆದರೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ, ತಾಲೂಕಿನ ಜನರಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುತ್ತಾ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಕೆಮ್ಮು, ನೆಗಡಿ, ಜ್ವರ, ಮಧುಮೇಹ, ರಕ್ತದೊತ್ತಡದಂಥ ಕಾಯಿಲೆ ಇರುವ ಜನರಿಗೆ ಚಿಕಿತ್ಸೆ- ಔಷಧಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.ಹೇಳಿ ಕೇಳಿ ಬಾಗೇಪಲ್ಲಿ ರೈತಾಪಿ, ಕೂಲಿ ಕಾರ್ಮಿಕರು, ಹಿಂದುಳಿದ ವರ್ಗ, ತಾಂಡಗಳೇ ಹೆಚ್ಚಾಗಿರುವ ತಾಲೂಕು. ಅತ್ಯಾಧುನಿಕ ಆರೋಗ್ಯ ಸೇವೆಗಳಿಂದ ಬಹುದೂರ ಇರುವ ಈ ಸಮುದಾಯಗಳಿಗೆ ಈಗ ಅನಿಲ್ ಕುಮಾರ್ ವೈದ್ಯೋ ನಾರಾಯಣೋ ಹರಿಃ. ಹಳ್ಳಿ ಹಳ್ಳಿಗೂ ಹೋಗಿ ವೈದ್ಯ ಕಾಯಕ ಮಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ 40 ರಿಂದ 60 ಮಂದಿಗೆ ಜ್ವರ, ಸಕ್ಕರೆ ಖಾಯಿಲೆ ಮುಂತಾದವುಗಳ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಡಾ. ಅನಿಲ್ ಕುಮಾರ್, ಬಾಗೇಪಲ್ಲಿ ಪಟ್ಟಣದಲ್ಲಿ ಪೀಪಲ್ ಶಸ್ತ್ರ ಚಿಕಿತ್ಸಾ ಹಾಗೂ ಪ್ರಸೂತಿ ಆಸ್ಪತ್ರೆ ನಡೆಸುತ್ತಿದ್ದಾರೆ. ಆದರೆ, ಕೋವಿಡ್ ಆರ್ಭಟ ನೋಡಿ, ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ ನಿತ್ಯ ಐದಾರು ಗಂಟೆ ಕಾಲವನ್ನು ಈ ಸೇವೆಗೆ ಎತ್ತಿಡುತ್ತಾರೆ. ಈವರೆಗೆ, ಐದು ಸಾವಿರಕ್ಕೂ ಹೆಚ್ಚು ಜನರಿಗೆ ಇವರ ಆರೋಗ್ಯ ಸೇವೆ ತಲುಪಿದೆ. ಈ ನಾಲ್ಕೈದು ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ವೈದ್ಯಕೀಯ ಉಪಚಾರ ನೀಡಿ ಬಂದಿದ್ದಾರೆ. ವಿಶೇಷವಾಗಿ, ಅಸಂಖ್ಯಾತ ಕೂಲಿ ಕಾರ್ಮಿಕರಿಗೆ ಇವರ ಸೇವೆಯಿಂದ ಲಾಭವಾಗುತ್ತಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ, ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಊರಿಗೊಂದು ಗ್ರಾಮ ಆರೋಗ್ಯ ಪಡೆ ಎಂಬ ಯುವಕರ ಗುಂಪನ್ನು ರಚಿಸಿದ್ದಾರೆ. ಗ್ರಾಮದಲ್ಲಿನ ಪದವೀಧರ ವಿದ್ಯಾರ್ಥಿಗಳನ್ನು ಹಾಗೂ ಯುವಕರನ್ನು ಒಂದು ಕಡೆ ಸೇರಿಸಿ, ಕೋವಿಡ್ ತಡೆಗೆ ಯಾವೆಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು, ಸೋಂಕಿನ ಲಕ್ಷಣಗಳೇನು ಎಂಬುದರ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಆ ಗುಂಪುಗಳಿಗೆ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಪರೀಕ್ಷಿಸುವ ಪಾಲ್ಸಾಕ್ಸಿ ಮೀಟರ್ ಹಾಗೂ ಉಷ್ಣಾಂಶ ಪರೀಕ್ಷೆ ಮಾಡುವ ಇನ್ಟ್ರಾರೆಡ್ ಥರ್ಮೋಮೀಟರ್ ಸಹ ಉಚಿತವಾಗಿ ನೀಡಿದ್ದಾ ರೆ. ಅನುಮಾನ ಬಂದ ವ್ಯಕ್ತಿಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ, ತಮಗೆ ಮಾಹಿತಿ ನೀಡುವಂತೆ ಯುವಕರ ತಂಡಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
Related Articles
Advertisement
ಕಾಗತಿ ನಾಗರಾಜಪ್ಪ