Advertisement

ಧರಣಿಗೆ ವೈದ್ಯರು-ವಕೀಲರ ಬೆಂಬಲ

12:49 PM Dec 06, 2018 | |

ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಹುನಗುಂದ-ಮುದ್ದೇಬಿಹಾಳ-ತಾಳಿ ಕೋಟೆ ರಾಜ್ಯ ಹೆದ್ದಾರಿ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬುಧವಾರ ವಕೀಲರು, ವೈದ್ಯರು, ಕ್ರಿಯೇಟಿವ್‌ ಫ್ರೆಂಡ್ಸ್‌ ಕ್ಲಬ್‌
ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

Advertisement

ವಕೀಲರು ಕೋರ್ಟ್‌ ಕಲಾಪದಿಂದ ದೂರ ಉಳಿದು, ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸುವ ಮೂಲಕ ಹೋರಾಟಕ್ಕೆ ಹೆಚ್ಚಿನ ಬಲ ತಂದುಕೊಟ್ಟರು. ಪಟ್ಟಣದ ಎಲ್ಲ ಖಾಸಗಿ ವೈದ್ಯರು ಒಂದು ಗಂಟೆ ಕಾಲ ತಮ್ಮ ಆಸ್ಪತ್ರೆಗಳನ್ನು ಸಾಂಕೇತಿಕವಾಗಿ ಬಂದ್‌ ಮಾಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ವೈದ್ಯ ಡಾ| ಎ.ಎಂ. ಮುಲ್ಲಾ, ಡಾ| ಮಹಾಂತೇಶ ಅಂಗಡಿ ಇನ್ನಿತರರು ಮಾತನಾಡಿ, ಹೋರಾಟ ಊರಿನ ಹಿತಕ್ಕಾಗಿ ನಡೆಸುತ್ತಿರುವಂಥದ್ದು. ಇದಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದರು.

ವೈದ್ಯರಾದ ಡಾ| ಎ.ಬಿ. ಹೊಕ್ರಾಣಿ, ಡಾ| ಉತ್ಕರ್ಷ ನಾಗೂರ, ಡಾ| ಎಂ.ಎಂ. ಅಥಣಿ, ಡಾ| ಎಂ.ಎಂ. ಹಿರೇಮಠ, ಡಾ| ನಾಯಕ್‌, ಡಾ| ಜುಲ್ಪೆ, ಡಾ| ಡಿ.ಬಿ. ಓಸ್ವಾಲ್‌, ಡಾ| ವೀರೇಶ ಪಾಟೀಲ, ಡಾ| ವೀರೇಶ ಇಟಗಿ, ಡಾ| ಎಸ್‌.ಕೆ. ಶಿವಯೋಗಿಮಠ ಮತ್ತಿರರು ಪಾಲ್ಗೊಂಡಿದ್ದರು.

ಕ್ರಿಯೇಟಿವ್‌ ಫ್ರೆಂಡ್ಸ್‌ ಕ್ಲಬ್‌ನ ಗೆಳೆಯರ ಬಳಗದ 20ಕ್ಕೂ ಹೆಚ್ಚು ಸದಸ್ಯರು ಕ್ಲಬ್‌ ಅಧ್ಯಕ್ಷ ಅಶೋಕ ರೇವಡಿ ನೇತೃತ್ವದಲ್ಲಿ ಧರಣಿಗೆ ಬೆಂಬಲ ಸೂಚಿಸಿ ಕೆಲ ಹೊತ್ತು ಪಾಲ್ಗೊಂಡಿದ್ದು ಬೇಡಿಕೆ ಈಡೇರದಿದ್ದಲ್ಲಿ ಎಲ್ಲರೂ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಭರವಸೆ ನೀಡಿದರು. ಊರಿನ ಹಿತಕ್ಕಾಗಿ ಎಂಥದ್ದೇ ಹೋರಾಟ ನಡೆದರೂ ಬೆಂಬಲಿಸುವುದಾಗಿ ತಿಳಿಸಿದರು. ಪದಾಧಿಕಾರಿಗಳಾದ ಪಾರಸ್‌ ಪೋರವಾಲ, ಮಾಣಿಕಚಂದ ದಂಡಾವತಿ, ಡಿ.ಬಿ. ವಡವಡಗಿ, ಸಿದ್ದರಾಜ ಹೊಳಿ, ಬಸಯ್ಯ ನಂದಿಕೇಶ್ವರಮಠ ಬೇಡಿಕೆ ಈಡೇರಿಕೆ ಅವಶ್ಯಕತೆ ಕುರಿತು ಮಾತನಾಡಿದರು.

ವಕೀಲರಿಂದ ಮಾನವ ಸರಪಳಿ: ಹೋರಾಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ ಎಲ್ಲ ವಕೀಲರು ನ್ಯಾಯವಾದಿಗಳ ಸಂಘದಲ್ಲಿ ಸಭೆ ಸೇರಿ ಕೋರ್ಟ್‌ ಕಲಾಪದಿಂದ ದೂರ ಉಳಿಯುವ ಠರಾವು ಸ್ವೀಕರಿಸಿದರು. ನಂತರ ಎಲ್ಲರೂ ಸಾಮೂಹಿಕವಾಗಿ ತಹಶೀಲ್ದಾರ್‌ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಂ.ಎಸ್‌. ಬಾಗವಾನ ಅವರಿಗೆ ಸಲ್ಲಿಸಿದರು.

Advertisement

ಹೆದ್ದಾರಿ ಅಗಲೀಕರಣ ಕುರಿತು 28-11-2018ರಂದು ಮನವಿ ಕೊಟ್ಟಿದ್ದರೂ ಜಿಲ್ಲಾಧಿಕಾರಿ ಸ್ಪಂದಿಸಿಲ್ಲದಿರುವುದು ವಿಪರ್ಯಾಸ ಎಂದು ತಿಳಿಸಿ ಹೆದ್ದಾರಿ ಅಗಲೀಕರಣ ಬೇಡಿಕೆ ಈಡೇರಿಸುವ ಕುರಿತು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಂತರ ತಹಶೀಲ್ದಾರ್‌ ಕಚೇರಿಯಿಂದ ಪಾದಯಾತ್ರೆ ಮೂಲಕ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿದರು. ಇದರಿಂದಾಗಿ ಕೆಲಹೊತ್ತು ರಸ್ತೆ ಸಂಚಾರ್‌ ಬಂದ್‌ ಆಗಿ ಸಾರ್ವಜನಿಕರು ಪರದಾಡುವಂತಾಯಿತು.
 
ಈ ವೇಳೆ ಹಿರಿಯ ವಕೀಲರಾದ ಎಂ.ಎಚ್‌. ಹಾಲಣ್ಣವರ, ಎಂ.ಎಸ್‌. ನಾವದಗಿ, ಎಸ್‌.ಎಸ್‌. ಮಾಲಗತ್ತಿ, ಎಚ್‌.ವೈ. ಪಾಟೀಲ, ಎನ್‌.ಆರ್‌. ಮುದ್ನಾಳ, ವಿಜಯಮಹಾಂತೇಶ ಸಾಲಿಮಠ ಮಾತನಾಡಿ, ಯೋಜನಾ ವರದಿಯಲ್ಲಿನ ಬ್ಲೂಪ್ರಿಂಟ್‌ನಲ್ಲಿ ಇರುವಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿಲ್ಲ. ಹೆದ್ದಾರಿ ಬ್ಲೂಪ್ರಿಂಟ್‌ ಬಗ್ಗೆ ಮಾಹಿತಿ ಕೇಳಿದರೆ ಹುಬ್ಬಳ್ಳಿಯಲ್ಲಿ ಕಚೇರಿ ಹೊಂದಿರುವ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು ಕೊಡುತ್ತಿಲ್ಲ.

ಗುತ್ತಿಗೆದಾರರು ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ 7, 8, 9 ಮೀಟರ್‌ ಹೀಗೆ ಮನಸ್ಸಿಗೆ ಬಂದ ಅಳತೆಯಲ್ಲಿ ರಸ್ತೆ ಅಗಲಗೊಳಿಸುತ್ತಿದ್ದಾರೆ. ಅಗಲೀಕರಣಕ್ಕಾಗಿ ಈಗ ನಡೆದಿರುವ ಹೋರಾಟದಲ್ಲಿ ಯಾರದೇ ವೈಯುಕ್ತಿಕ ಸ್ವಾರ್ಥ ಇಲ್ಲ ಊರಿನ ಹಿತಾಸಕ್ತಿ ಇದೆ. ನಮ್ಮ ಪ್ರಾಣ ಕೊಟ್ಟಾದರೂ ಸರಿ ಬೇಡಿಕೆ ಈಡೇರುವ ತನಕ ಹೋರಾಟ ಕೈ ಬಿಡುವುದಿಲ್ಲ. ವಾರದೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ವಕೀಲರೂ ಸಹಿತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪರಮೇಶ ಮಾತಿನ ವಕೀಲರು, ಸಿದ್ದರಾಜ ಹೊಳಿ, ಬಸವರಾಜ ನಂದಿಕೇಶ್ವರಮಠ, ಭೀಮನಗೌಡ ಪಾಟೀಲ, ಮಹಾಂತೇಶಗೌಡ ಬಿರಾದಾರ, ಹಿರಿಯರಾದ ಮಲಘಾಣದ ಶಿವಲಿಂಗಪ್ಪಶೆಟ್ಟಿ ಮಹಾಜನಶಟ್ರಾ, ವಿವಿಧ ಸಂಘಟನೆಗಳ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಸುರೇಶ ಪಾಟೀಲ ಇಂಗಳಗೇರಿ, ಮಂಜುನಾಥ ಕುಂದರಗಿ, ಅರುಣ ಪದಕಿ, ರಾಜುಗೌಡ ತುಂಬಗಿ, ಶಬ್ಬೀರ ಬಾಗಲಕೋಟೆ ಸೇರಿದಂತೆ ಹಲವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next