Advertisement

ಬ್ರೇಕ್‌ಫಾಸ್ಟ್‌ ಬಿಟ್ಟರೆ ಕೆಟ್ಟಿರಿ…

06:00 AM Aug 15, 2018 | |

ಕಾಲೇಜಿಗೆ, ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚಿನವರು ಬೆಳಗ್ಗಿನ ತಿಂಡಿಯನ್ನು ಮಿಸ್‌ ಮಾಡ್ತಾರೆ. ತೂಕ ಇಳಿಸುವ ಹಠಕ್ಕೆ ಬಿದ್ದು, ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎಂಬ ಸೋಮಾರಿತನದಿಂದ ಲೇಟಾಗಿ ಎದ್ದು, ಅಯ್ಯೋ ಲೇಟಾಯ್ತು, ತಿಂಡಿ ತಿನ್ನೋಕೆ ಟೈಮಿಲ್ಲ ಅನ್ನುತ್ತಾ ಬ್ರೇಕ್‌ಫಾಸ್ಟ್‌ಗೆ ಬ್ರೇಕ್‌ ಹಾಕುವವರೂ ಇದ್ದಾರೆ. ಆದರೆ, ಬೆಳಗ್ಗೆ ಒಂದು ಹೊತ್ತು ತಿನ್ನದಿದ್ದರೆ ಏನೇನಾಗುತ್ತದೆ ಅಂತ ನಿಮಗೆ ಗೊತ್ತಾ? 

Advertisement

1. ಹೃದಯಕ್ಕೆ ಪೆಟ್ಟು 
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಬೆಳಗ್ಗೆ ನಿಯಮಿತವಾಗಿ ತಿಂಡಿ ತಿನ್ನುವವರಿಗಿಂತ, ತಿನ್ನದೇ ಇರುವವರಲ್ಲಿ ಹೃದಯಾಘಾತದ ಅಪಾಯ ಶೇ.27ರಷ್ಟು ಹೆಚ್ಚಿರುತ್ತದೆಯಂತೆ! ಬೆಳಗ್ಗೆ ಆರೋಗ್ಯಯುತ ಆಹಾರ ಸೇವನೆಯಿಂದ ಪಾರ್ಶ್ವವಾಯು, ಹೃದಯಾಘಾತವನ್ನು ತಡೆಯಬಹುದು ಎನ್ನುತ್ತದೆ ಆ ಸಂಶೋಧನೆ.  

2. ಟೈಪ್‌-2 ಸಕ್ಕರೆ ಕಾಯಿಲೆ
ಸಿಹಿನಿದ್ದೆಯ ಆಸೆಗೆ ಬಿದ್ದು ತಿಂಡಿ ಬಿಟ್ಟಿರೋ, ಸಕ್ಕರೆ ಕಾಯಿಲೆಯನ್ನು ಬರಮಾಡಿಕೊಳ್ಳಲು ಸಿದ್ಧರಾಗಿ. ಬೆಳಗ್ಗೆ ಹೊಟ್ಟೆಯನ್ನು ಖಾಲಿ ಬಿಡುವುದರಿಂದ, ಟೈಪ್‌ 2 ಡಯಾಬಿಟೀಸ್‌ಗೆ ತುತ್ತಾಗುವ ಅಪಾಯ ಶೇ.54ರಷ್ಟು ಅಧಿಕವಿರುತ್ತದೆಯಂತೆ.

3. ತೂಕ ಹೆಚ್ಚಳ
ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಯುತ್ತದೆ ಎಂಬುದು ಅನೇಕರ ತಪ್ಪುಕಲ್ಪನೆ. ಆದರೆ, ಬೆಳಗ್ಗೆ ಏನೂ ತಿನ್ನದಿದ್ದರೆ ನಿಮ್ಮ ಹಸಿವು ಹೆಚ್ಚಿ, ನಂತರ ಸಿಕ್ಕಿದ್ದೆಲ್ಲವನ್ನೂ ತಿನ್ನುವ ತುಡಿತ ಉಂಟಾಗುತ್ತದೆ. ಆಮೇಲೆ ದಿನವಿಡೀ ನಿಮಗೇ ತಿಳಿಯದಂತೆ ಹೆಚ್ಚೆಚ್ಚು ಕ್ಯಾಲೊರಿ ಸೇವಿಸುತ್ತೀರಿ. ಇದರಿಂದ ದೇಹದ ತೂಕ ಹೆಚ್ಚುತ್ತದೆ.

4. ಮೈಗ್ರೇನ್‌ ಪಕ್ಕಾ
ರಾತ್ರಿಯಿಡೀ ಖಾಲಿಯಿರುವ ಹೊಟ್ಟೆಗೆ ಬೆಳಗ್ಗೆ ಸರಿಯಾದ ಆಹಾರ ಸಿಗಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾಗುತ್ತದೆ. ಆ ಪರಿಸ್ಥಿತಿಯನ್ನು ಸರಿದೂಗಿಸಲು ಕೆಲವು ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ರಕ್ತದೊತ್ತಡವೂ ಹೆಚ್ಚಿ, ಮೈಗ್ರೇನ್‌ ತಲೆನೋವು ಶುರುವಾಗುತ್ತದೆ. 

Advertisement

5. ಕೂದಲು ಉದುರುವಿಕೆ
ಕೂದಲುದುರುವ ಸಮಸ್ಯೆ ಕಾಡಿದಾಗ, ಎಲ್ಲರೂ ಶ್ಯಾಂಪೂ, ಎಣ್ಣೆಯ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಆಗ ನೀವು ಗಮನ ಹರಿಸಬೇಕಾಗಿದ್ದು ನಿಮ್ಮ ಬೆಳಗ್ಗಿನ ತಿಂಡಿಯ ಮೇಲೆ. ಬೆಳಗಿನ ತಿಂಡಿಯಲ್ಲೇ ಕೂದಲಿನ ಆರೋಗ್ಯ ಅಡಗಿದೆ. ಹೊಟ್ಟೆಯನ್ನು 12ಕ್ಕೂ ಹೆಚ್ಚು ಗಂಟೆಗಳ ಕಾಲ ಖಾಲಿಬಿಟ್ಟರೆ, ಪ್ರೊಟೀನ್‌ ಪೂರೈಕೆಯಲ್ಲಿ ವ್ಯತ್ಯಯವಾಗಿ ಕೂದಲು ಉದುರುತ್ತದೆ. 

6. ತಲೆನೋವು, ನಿತ್ರಾಣ
ಪೆಟ್ರೋಲ್‌ ಇಲ್ಲದಿದ್ದರೆ ಗಾಡಿ ಹೇಗೆ ಓಡುವುದಿಲ್ಲವೋ, ಹಾಗೆಯೇ ಬೆಳಗ್ಗೆ ಸರಿಯಾದ ಆಹಾರ ಹೊಟ್ಟೆಗೆ ಬೀಳದಿದ್ದರೆ ದೇಹಕ್ಕೂ ಸುಸ್ತು ಕಾಡುತ್ತದೆ. ತಲೆನೋವು, ತಲೆ ತಿರುಗುವುದು, ಆಲಸಿತನವೂ ಜೊತೆಯಾಗಿ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀಳುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next