Advertisement
ಶಾಲೆ ಮತ್ತು ಅಳು ಇವೆರಡಕ್ಕೂ ಎಲ್ಲಿಲ್ಲದ ನಂಟು. ಆರು ವರುಷ ತುಂಬಿತು, ಇನ್ನು ಶಾಲೆಗೆ ಭರ್ತಿ ಮಾಡುವ ಎಂದು ಮನೆಯಲ್ಲಿ ಹೆತ್ತವರು ನಿರ್ಧಾರ ತೆಗೆದುಕೊಂಡಾಗಲೇ ಅಳುವಿನ ನದಿಯು ಹೃದಯದಲ್ಲಿ ಉದ್ಭವಿಸುತ್ತದೆ. ಪರೋಕಿಯಲ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ನಾನು ಕಲಿತ ಶಾಲೆ. ಒಂಬತ್ತು ಮಕ್ಕಳಲ್ಲಿ ಕೊನೆಯವನಾದ ನನಗೆ ಅಮ್ಮನ ಮಡಿಲು ತಂದೆಯ ವಾತ್ಸಲ್ಯ ಮತ್ತು ತಲಾ ನಾಲ್ಕು ಅಕ್ಕ, ಅಣ್ಣಂದಿರ ಪ್ರೀತಿಯು ಶಾಲೆಯನ್ನು ಮೊದಲನೆಯ ಜೈಲು ಎಂಬ ಬಂಧನದಂತೆ ಭಯವನ್ನು ಹುಟ್ಟಿಸಿತ್ತು. ಒಂದನೆಯ ತರಗತಿಗೆ ಭರ್ತಿಗೊಂಡ ಮೊದಲ ದಿನವೇ ಮನೆಯಿಂದ ಹಿಡಿದ ನನ್ನ ಅಳಲು ದಾರಿಯುದ್ದಕ್ಕೂ ಏರುತ್ತ ಶಾಲೆಗೆ ಬಂದುಬಿಡಬೇಕಾದರೆ ಆರ್ಭಟ ಶಬ್ದದಿಂದ ಮುಗಿಲು ಮುಟ್ಟಿತ್ತು. ಶಾಲೆಗೆ ಬಂದು ನೋಡಬೇಕಾದರೆ ಹೀಗೆ ನನ್ನಂತೆಯೇ ಅಳುವ ಮಕ್ಕಳನ್ನು ಕಂಡಾಗ ನನ್ನ ಅಳುವಿಗೆ ಇನ್ನೂ ಬಲ ಮತ್ತು ಬೆಂಬಲ ಎರಡೂ ಸಿಕ್ಕಿತು. ಅಂತೂ ಅಧ್ಯಾಪಕಿಯ ಮಮಕಾರ, ತಂದೆಯ ಬೈಗಳು ಗೆ¨ªಾಗ ನನ್ನ ಅಳಲನ್ನು ಕೇಳುವವರಾರೂ ಇಲ್ಲ ಎಂಬಂತೆ ತರಗತಿಯಲ್ಲಿ ಹಲವು ವಿದ್ಯಾರ್ಥಿಗಳಿದ್ದರೂ ಎಲ್ಲರಂತೆ ನಾನೂ ತಬ್ಬಲಿಯಾಗಿದ್ದೆ.
Related Articles
Advertisement
ಮೂರನೆಯ ತರಗತಿಗೆ !ಎರಡನೆಯ ತರಗತಿಯಿಂದ ತೇರ್ಗಡೆಗೊಂಡು ನಾನು ಮೂರನೆಯ ತರಗತಿಗೆ ಸೇರ್ಪಡೆಗೊಂಡೆ. ಜೂನ್ ತಿಂಗಳಲ್ಲಿ ಶಾಲೆ ಪ್ರಾರಂಭ. ಒಂದನೆಯ ತರಗತಿಯಲ್ಲಂತೂ ಅಳುವೇ ಅಳು. ಎರಡನೆಯ ತರಗತಿಯಲ್ಲೂ ಸ್ವಲ್ಪ ಕೇಳಿಸುತ್ತಿತ್ತು. ಆದರೆ, ಮೂರನೆಯ ತರಗತಿಯಲ್ಲಿ ಮಕ್ಕಳು ಸ್ವಲ್ಪ ಮಟ್ಟಿಗೆ ಪ್ರಬುದ್ಧರಾಗುತ್ತಾರೆ ಅಂದ ಮೇಲೆ ಅಳು ನಿಂತು ಹೋಗುತ್ತದೆ. ಆದರೆ ನಮ್ಮ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದ. ಶಾಲೆಗೆ ಬರುವ ಅವನ ಭಯ ಮತ್ತು ಅಳು ಇನ್ನೂ ಆತನನ್ನು ಬಿಟ್ಟಿರಲಿಲ್ಲ. ಶಾಲೆ ಪ್ರಾರಂಭವಾಗಿ ಹದಿನೈದು ದಿವಸಗಳು ಕಳೆದಿದ್ದವು. ಇವನ ತಾಯಿ ದಿನಾಲೂ ಬೆಳಗ್ಗೆ ಇವನನ್ನು ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಆದರೆ, ಇವನು ಮಾತ್ರ ಸ್ಟಡಿ ಪೀರಿಯಡ್ ಆದ ನಂತರ ಕೆಲವೇ ಹೊತ್ತಿನಲ್ಲಿ ಶಾಲೆಯಿಂದ ಓಡುತ್ತಿದ್ದ. ಹೀಗೆ ಓಡಿದ ಆತನನ್ನು ಹಿಂಬಾಲಿಸಿ ಹೋಗಿ ವಾಪಸು ಕರೆದು ತಂದು ಬರುವುದು ಶಿಕ್ಷಕರಿಗೆ ಕಷ್ಟ ಸಾಧ್ಯವೇ. ಆದ್ದರಿಂದ ಆತ ಓಡಿದ ಎನ್ನುವಾಗ ನಮ್ಮ ಶಿಕ್ಷಕರು ತಕ್ಷಣ, “ಅವನನ್ನು ಹಿಡಿಯಿರೋ’ ಎಂದು ಒಮ್ಮೆಲೇ ಜೋರಾಗಿ ಬೊಬ್ಬೆಯಿಡುತ್ತಿದ್ದರು. ನಾನು ಮತ್ತು ಕೆಲವು ವಿದ್ಯಾರ್ಥಿಗಳು ತತ್‌ಕ್ಷಣವೇ ಓಡಿ ಹೋಗಿ ಆತನನ್ನು ಹೊಡೆದು ಶಾಲೆಗೆ ಕರೆದು ತರುತ್ತಿದ್ದೆವು. ಹೀಗೆ ದಿನಾಲೂ ಆತ ಶಾಲೆಯಿಂದ ಓಡುವುದು, ಮತ್ತೆ ನಾವು ಆತನನ್ನು ಹಿಡಿದು ವಾಪಸು ತಂದು ಬರುವುದು ನಮಗೆ ಒಂದು ತರಹದ ಆಟ ಮತ್ತು ಮೋಜು ಆಗಿ ಬಿಟ್ಟಿತ್ತು. ಸ್ಟಡಿ ಪೀರಿಯೆಡ್‌ನಲ್ಲಿ ನಮ್ಮೆಲ್ಲರ ಗಮನ ಓದಿಗಿಂತ ಆತನ ಮೇಲೆಯೇ ಇರುತ್ತಿತ್ತು- ಎಲ್ಲಿ ಆತ ಓಡಿಯಾನು, ಯಾವಾಗ ನಮಗೂ ಕೂಡ ಓಡುವ ಅವಕಾಶ ಸಿಕ್ಕೀತು ಎಂದು. ಜೈಲಿನಿಂದ ಓಡಿಹೋಗುವ ಕೈದಿಗೆ ಹಿಡಿದು ತರಲು ಇರುವ ಪೊಲೀಸ್ ಪೇದೆಗಳಂತೆ ನಾನು ಮತ್ತು ಕೆಲವರು ಆತನನ್ನು ಹಿಡಿದು ತರುವ ಅಂಗರಕ್ಷಕರಂತೆ ನಿಯೋಜಿತಗೊಂಡಿದ್ದೆವು. ಆತ ಹಿಂದೆ ನೋಡಿದಾಗ, ಎದ್ದಾಗ, ಕೈ ಮೇಲೆ ಮಾಡಿದಾಗ ನಮಗಂತೂ ಕಾತರ- ಯಾವ ಗಳಿಗೆಗೆ ಓಡುವವನೆಂದು. ನಮ್ಮ ಭರವಸೆಯಲ್ಲಿಯೇ ನಮ್ಮ ಶಿಕ್ಷಕರು ನಿಶ್ಚಿಂತೆಯಿಂದಿದ್ದರು. ನಮ್ಮ ಸ್ಟಡಿ ಪೀರಿಯೆಡ್‌ನಲ್ಲಂತೂ ಅವರು ಕೂಡ ಸಹಶಿಕ್ಷಕಿಯರೊಂದಿಗೆ ಹರಟೆ ಹೊಡೆಯುವುದರಲ್ಲಿ ತಲ್ಲೀನರಾಗಿ ಬಿಡುತ್ತಿದ್ದರು. ಈ ನಮ್ಮ ಕಳ್ಳ-ಪೊಲೀಸ್ ಆಟ ಹೀಗೆಯೇ ದಿನದಿಂದ ದಿನಕ್ಕೆ ಮುಂದುವರಿಯತೊಡಗಿತ್ತು. ನಮ್ಮ ಶಾಲೆಯ ಕಟ್ಟಡ ಇಂಗ್ಲಿಷ್ ಅಕ್ಷರದ “ಎಲ್’ ಆಕಾರದಲ್ಲಿತ್ತು. ಮತ್ತೆ ನಮ್ಮ ಶಾಲೆಗೆ ಎರಡು ಪ್ರವೇಶಗಳಿದ್ದವು. ಒಂದು, ಎರಡು ಮತ್ತು ಮೂರನೆಯ ತರಗತಿಗಳು ಶಾಲೆಯ ಬಲ ಬದಿಯಲ್ಲಿದ್ದುದರಿಂದ ಆ ಕಡೆ ಸಣ್ಣ ಪ್ರವೇಶ, ಉಳಿದ ತರಗತಿಗಳು ಎಡ ಬದಿಯಲ್ಲಿದ್ದರಿಂದ ಅಲ್ಲಿ ಒಂದು ಮುಖ್ಯ ಪ್ರವೇಶ ಇದ್ದಿತ್ತು. ಸಣ್ಣಮಕ್ಕಳನ್ನು ಸಣ್ಣ ಪ್ರವೇಶದಿಂದಲೇ ಹೆತ್ತವರು ಕರೆದುಕೊಂಡು ಬರುತ್ತಿದ್ದರು. ಕೊನೆಗೂ ಓಡಿಹೋದ !
ಅಂತೂ ಆ ಒಂದು ದಿನ ಬಂದೇ ಬಿಟ್ಟಿತು. ಇಷ್ಟು ದಿನ ಶಾಲೆ ಬೇಡವೆಂದು ಎದ್ದು ಮೈದಾನದಲ್ಲಿ ಓಡುತ್ತಿದ್ದ ಆತ ಇಂದು ಏನೋ ಮೊದಲೇ ನಿರ್ಧರಿಸಿದಂತೆ, ಪಗಡೆಯಾಟದಲ್ಲಿ ಎದುರಾಳಿ ನಿದ್ದೆಯಲ್ಲಿ ತಲ್ಲೀನರಾದಂತೆ ನಮ್ಮೆಲ್ಲರ ಕಣ್ತಪ್ಪಿಸಿ ಓಡತೊಡಗಿದ. ಅವನು ಓಟ ಪ್ರಾರಂಭಿಸಿದ ತಕ್ಷಣವೇ ನಮ್ಮ ಶಿಕ್ಷಕಿಯೂ ಓಲಿಂಪಿಕ್ ಓಟದಲ್ಲಿ ಸ್ಪರ್ಧಿಗಳಿಗೆ ಸೂಚನೆ ಕೊಟ್ಟ ಹಾಗೆ ಒಮ್ಮೆಲೇ ಬೊಬ್ಬೆ ಹಾಕಿ “ಹಿಡಿಯಿರಾ’ ಎಂದು ಕಿರುಚಿಯೇ ಬಿಟ್ಟರು. ಈ ಸ್ಪರ್ಧೆಗೆ ಮೊದಲೇ ಒಂಟಿ ಕಾಲಲ್ಲಿ ನಿಂತ ನಾವು, ಶಿಕ್ಷಕಿಯ ಸ್ವರ ಕೇಳಿದ್ದೇ ತಡ ಒಂದೇ ಸಮನೆ ಓಟಕ್ಕಿತ್ತೆವು. ಓಡಿ ಹೋದ ಆತ ಮೈದಾನದ ಗೇಟನ್ನು ದಾಟಿ ಮುಖ್ಯರಸ್ತೆಯಲ್ಲಿ ಓಡತೊಡಗಿದ. ಆತನ ಹಿಂದೆ ಹತ್ತು-ಹದಿನೈದು ವಿದ್ಯಾರ್ಥಿಗಳು. ಆಗ ತತ್‌ಕ್ಷಣ ನನ್ನ ತಲೆಗೆ ಒಂದು ಉಪಾಯ ಹೊಳೆಯಿತು. ಓಡಿ ಹೋದ ಆತನ ಮನೆಯ ದಾರಿಯು ಶಾಲೆಯ ಮುಖ್ಯದ್ವಾರದ ದಿಕ್ಕಿನಲ್ಲಿಯೇ ಹಾದುಹೋಗುತ್ತಿತ್ತು. ಎಲ್ಲರೂ ಆತನನ್ನು ಹಿಂಬಾಲಿಸಿ ಸಣ್ಣದ್ವಾರದ ಮೂಲಕ ಓಡುತ್ತಿರುವಾಗ, ಓಟದಲ್ಲಿಯೂ ವೇಗವಾಗಿದ್ದ ನಾನು ಮುಖ್ಯದ್ವಾರದ ಮೂಲಕ ಶಾಲೆಯ ಆವರಣದಿಂದ ಹೊರಗೆ ಓಡಿದೆ. ಪರಿಣಾಮ, ಆತನನ್ನು ನಾನು ಉಳಿದ ಸಹಪಾಠಿಗಳಿಗಿಂತ ಹೆಚ್ಚಾಗಿ ಸಮೀಪಿಸಿದೆ. ಮುಖ್ಯರಸ್ತೆಯಲ್ಲಿ ಶಾಲೆ ಬೇಡವೆಂದು ಓಡುತ್ತಿದ್ದ ಆತನು ಮೊದಲ ಸ್ಥಾನದಲ್ಲಿ, ಆತನನ್ನು ಹಿಂಬಾಲಿಸಿ ಸಮೀಪಿಸಿದ ನಾನು ದ್ವಿತೀಯ ಸ್ಥಾನದಲ್ಲಿ ಮತ್ತು ನಮ್ಮನ್ನು ಹಿಂಬಾಲಿಸುತ್ತಿರುವವರು ಒಬ್ಬರಿಗೊಬ್ಬರಂತೆ ಹಿಂದೆ ಹಾಕಿ ತಮ್ಮ ಸ್ಥಾನವನ್ನು ಹಂಚಿಕೊಳ್ಳುತ್ತಿದ್ದರು. ಆತನನ್ನು ಹಿಡಿಯುವುದರಲ್ಲಿ ಎಲ್ಲರಿಗಿಂತ ಮುಂದೆ ಇದ್ದ ನನಗೆ ಎಲ್ಲಿಲ್ಲದ ಖುಷಿ. ಆತ ನನ್ನ ಕೈಗೆ ಎರಡು-ಮೂರು ಬಾರಿ ಸಿಕ್ಕಿದ. ಆದರೂ ನಾನು ಆತನನ್ನು ಹಿಡಿಯಲಿಲ್ಲ. ಕಾರಣ, ಆತನನ್ನು ಹಿಡಿಯುವ ಧೈರ್ಯ ನನಗಂತೂ ಇರಲಿಲ್ಲ. ಅದಕ್ಕಾಗಿ ನಾನು ಇತರ ಸಹಪಾಠಿಗಳನ್ನು ಕಾಯುತ್ತಿದ್ದೆ. ಆದರೆ, ಅವರೆಲ್ಲರೂ ಇನ್ನೂ ಐದಾರು ಗಜ ದೂರದಲ್ಲಿದ್ದರು. ಶಾಲೆಯ ಹತ್ತಿಪ್ಪತ್ತು ಮಂದಿ ವಿದ್ಯಾರ್ಥಿಗಳು ಹೀಗೆ ರಸ್ತೆಯಲ್ಲಿ ಓಡುತ್ತಿರುವುದನ್ನು ನೋಡಿ ಅಂಗಡಿ ಮಾಲಿಕರು, ಬಸ್ಸಿನ ಡ್ರೆçವರ್, ಕಂಡಕ್ಟರ್‌ಗಳು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ನಮ್ಮನ್ನೇ ಆಶ್ಚರ್ಯಚಕಿತರಾಗಿ ಇದೇನು ಸಂಗತಿ ಎಂದು ನೋಡುತ್ತಿದ್ದರು. ಆತನನ್ನು ಹಿಡಿಯಲು ನಾನು ವಿಫಲನಾದ ಕಾರಣ ನಮ್ಮ ಈ ಓಟವು ಇನ್ನೂ ದೂರ ಸಾಗಿತು. ಮುಂದೆ ರಸ್ತೆಯ ಬಲಭಾಗದಲ್ಲಿ ನಮ್ಮೂರಿನ ನ್ಯಾಯಬೆಲೆ ಅಂಗಡಿ ಇದ್ದಿತ್ತು. ಅಲ್ಲಿ ಅನೇಕ ಜನರು ರೇಷನ್ ತೆಗೆದುಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದರು. ಅವರಲ್ಲಿ ಒಬ್ಬರು ನನ್ನ ತಾಯಿ. ಕೈಯಲ್ಲಿದ್ದ ಚೀಲಗಳನ್ನು ಅಲ್ಲಿಯೇ ಬಿಟ್ಟು ಕಣ್ಣುಗಳನ್ನು ಕಂಬಳಕಾಯಿಯನ್ನಾಗಿಸಿ ರಸ್ತೆಬದಿಯಲ್ಲಿ ಹೀಗೆ ಓಡುತ್ತಿದ್ದ ನನ್ನನ್ನು ನೋಡುತ್ತಿದ್ದರು. ಅಲ್ಲದೆ, ನಮ್ಮನ್ನೇ ನೋಡುತ್ತಿ¤ದ್ದ ಊರಿನ ಜನ, “ಎಲ್ಲಿಗೆ ಓಡುತ್ತಿದ್ದಾರೆ ಈ ಮಕ್ಕಳು ! ಅಧ್ಯಾಪಕರು ಶಿಕ್ಷೆ ಏನಾದರೂ ಕೊಟ್ಟಿದ್ದಾರೋ, ಶಾಲೆಗೆ ಬೆಂಕಿ ಬಿದ್ದಿದೆಯೋ, ನಿಜವಾಗಿ ಶಾಲೆಯಲ್ಲಿ ಓಟದ ಸ್ಪರ್ಧೆಯನ್ನೇ ಆಯೋಜಿಸಿದ್ದಾರೋ’ ಹೀಗೆ ತಲೆಗೊಂದರಂತೆ ಮಾತನಾಡಿಕೊಳ್ಳುತ್ತಿದ್ದರು.ಅಷ್ಟರಲ್ಲಿ ಮುಂದೆ ಎಲ್ಲಿ ಹೋಗುವುದೆಂದು ತಿಳಿಯದೇ ಓಡಿ ಹೋದ ವಿದ್ಯಾರ್ಥಿ ದಿಕ್ಕು ತೋಚದೆ ಕಂಗಾಲಾದ. ಅಷ್ಟರಲ್ಲಿ ಆತನನ್ನೇ ಗುರಿಯಿಟ್ಟ ನನ್ನ ಸಹಪಾಠಿಗಳು ಅವನನ್ನು ಹಿಡಿದೇ ಬಿಟ್ಟರು. ನಾನು ಸಹ ಅವರೊಡನೆ ಕೈ ಜೋಡಿಸಿ ಪ್ರಶ್ನಾರ್ಥಕರಾಗಿ ನೋಡುತ್ತಿದ್ದ ನನ್ನ ತಾಯಿ ಮತ್ತು ಅನೇಕರಿಗೆ ಉತ್ತರ ಕೊಟ್ಟೆ. ರಸ್ತೆಯಲ್ಲಿ ಸಾಗಿದ ನಮ್ಮ ಓಟದ ಸುದ್ದಿಯು ಅಷ್ಟರಲ್ಲಿಯೇ ಶಾಲಾ ಮುಖ್ಯೋಪಾಧ್ಯಾಯರಿಗೆ ಯಾರೋ ತಿಳಿಸಿ ಆಗಿತ್ತು. ವಿಪರೀತ ಕೋಪಗೊಂಡ ಅವರು ಅದಾಗಲೇ ನಮ್ಮ ತರಗತಿಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡೂ ಆಗಿತ್ತು. ಓಡಿಹೋದ ಕೈದಿಯನ್ನು ಪೊಲೀಸರು ಹಿಡಿದು ತಂದಂತೆ, ಪ್ರತಿದಿನದಂತೆ ಇಂದು ಕೂಡ ಸಫಲಗೊಂಡ ಗತ್ತಿನಿಂದ ಆತನನ್ನು ನಾವು ಹಿಡಿದು ತಂದು ಶಾಲೆಯ ಆವರಣದೊಳಕ್ಕೆ ಬಂದೆವು. ಶಿಕ್ಷಕಿಯಿಂದ ಶಹಭಾಸ್‌ಗಿರಿ, ಮೆಚ್ಚುಗೆಯ ಮಾತುಗಳು ಸಿಗಬಹುದೆಂದು ನಾವು ಬಹಳ ಸಂತೋಷದಿಂದ ಶಾಲೆಯನ್ನು ಸಮೀಪಿಸುತ್ತಿದ್ದೆವು. ನಮ್ಮ ಶಿಕ್ಷಕಿಯು ಶಾಲೆಯ ಬಾಗಿಲಿನ ಹತ್ತಿರ ನಿಂತುಕೊಂಡು ಓಡಿಹೋದ ವಿದ್ಯಾರ್ಥಿಗಳಲ್ಲಿ ಕೊನೆಯದಾಗಿ ವಾಪಸು ತರಗತಿಗೆ ಹೋಗುತ್ತಿದ್ದ ಒಬ್ಬೊಬ್ಬರನ್ನು ಕೈಯಲ್ಲಿದ್ದ ನಾಗರ ಬೆತ್ತದಿಂದ ಎರಡೆರಡು ಬಾರಿಸುತ್ತ ಕಳುಹಿಸುತ್ತಿರುವುದನ್ನು ನಾನು ದೂರದಿಂದ ಗಮನಿಸಿದೆ. ನಮಗೇ ಆವಾಗಲೇ ಆಶ್ಚರ್ಯ, ಬಿಸಿ ಮತ್ತು ನಡುಕ ಶುರುವಾಗಿತ್ತು. ಮಖ್ಯೋಪಾಧ್ಯಾಯರ ಕೋಪಕ್ಕೆ ನಮ್ಮ ಶಿಕ್ಷಕಿಯ ಕೋಪವೂ ಸೇರಿ ಬೆತ್ತ ಬುಸುಗುಟ್ಟುವಾಗ ಓಟದಲ್ಲಿ ಜಯಶಾಲಿಯಾದ ನಮಗೆ ವಿಚಿತ್ರ ಬಹುಮಾನ ಸಿಕ್ಕಿತೆಂದು ಭಾವಿಸಿದೆವು ! ಇಬ್ಬರು-ಮೂವರು ಹೋಗುವುದನ್ನು ಬಿಟ್ಟು ಇಷ್ಟು ಮಂದಿಗೆ ರಸ್ತೆಯಲ್ಲಿ ಓಡಲು ಯಾರು ಹೇಳಿದ್ದು ಎಂದು ರಾಜಕಾರಿಣಿಯಂತೆ ತಮ್ಮ ಮಾತನ್ನು ಬದಲಾಯಿಸಿದ ಶಿಕ್ಷಕಿಯ ತಪ್ಪಿಗೆ ನಮಗೆ ಶಿಕ್ಷೆ ಲಭಿಸಿತು. ಯಾರಿಗೂ ಬಿಡದೆ ಎಲ್ಲರಿಗೂ ನಾಗರ ಬೆತ್ತದ ರುಚಿ ತೋರಿಸಿದಾಗ “ಇದು ಅನ್ಯಾಯ’ ಎಂದು ನಾನು ಮನಸ್ಸಿನಲ್ಲಿಯೇ ಹೇಳಿಕೊಂಡೆ. – ರೋಶನ್ ಸಿಕ್ವೇರಾ
(ಬಜ್ಪೆ ಪರೋಕಿಯಲ್ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ)