Advertisement

ಸ್ನಾನಗಳಲ್ಲಿ ಎಷ್ಟು ವಿಧ ಇದೆ ಗೊತ್ತಾ? ಈ ಸ್ನಾನಗಳ ವೈಶಿಷ್ಠ್ಯವೇನು…

11:31 AM Apr 17, 2018 | |

ಸ್ನಾನ ಎಂದರೆ ನಮಗೆ ಗೋಚರಕ್ಕೆ, ಬರುವುದು ಮೈತೊಳೆದುಕೊಳ್ಳುವ ಕೊಳೆ ಹೋಗಲೆಂದು ಮಾಡುವ ಪ್ರಕ್ರಿಯೆ ಮಾತ್ರ. ಆದರೆ ಆಧ್ಯಾತ್ಮದ ವಿಚಾರದಲ್ಲಿ ಸ್ನಾನಕ್ಕೆ ಮಹತ್ವವಾದ ಸಂಪ್ರದಾಯವಿದೆ ಹಾಗೂ ಶಾಸ್ತ್ರನೀತಿ ಇದೆ.

Advertisement

ಮೊದಲಿಗೆ  ಆಧ್ಯಾತ್ಮಿಕ ಸ್ನಾನಗಳಲ್ಲಿ ಎಷ್ಟು ವಿಧವಿದೆ ಎಂದು ತಿಳಿದುಕೊಳ್ಳೋಣ :

7 ವಿಧದ ಆಧ್ಯಾತ್ಮಿಕ ಸ್ನಾನ
1 ಮಂತ್ರ ಸ್ನಾನ 
2 ಭೌಮ ಸ್ನಾನ
3 ಆಗ್ನೇಯಸ್ನಾನ
4 ವಾಯುವ್ಯಸ್ನಾನ 
5 ದಿವ್ಯ ಸ್ನಾನ 
6 ವರುಣ ಸ್ನಾನ
7 ಮಾನಸ ಸ್ನಾನ 

ಮಂತ್ರ ಸ್ನಾನ :
 ಕೆಲವು ಮಂತ್ರಗಳನ್ನು ಉಚ್ಚರಿಸಿಕೊಂಡು ಜಲವನ್ನು ತಲೆಗೆ, ಎದೆಗೆ ಹಾಗೂ ಪಾದಗಳಿಗೆ  ಪ್ರೋಕ್ಷಿಸಿಕೊಳ್ಳುವುದು ಮಂತ್ರಸ್ನಾನ 

ಭೌಮಸ್ನಾನ : 
ಭೌಮ ವೆಂದರೆ ಭೂಮಿ ಅಂದರೆ ಮೃತಿಕೆ ಎಂಬುದಾಗಿದೆ , ತುಳಸಿ ಗಿಡ ವಿರುವ ಅಥವಾ ಗೋಪದ ಸ್ಪರ್ಶದ ಮಣ್ಣು ಅಂದರೆ ಹಸು ಓಡಾಡಿದ ಜಗದ ಮಣ್ಣು, ಈ ಮೃತಿಕೆಯನ್ನು  ಮೈಗೆ ಹಚ್ಚಿಕೊಂಡು ಮಾಡುವ ಸ್ನಾನವೇ  ಭೌಮಸ್ನಾನವಾಗಿದೆ.

Advertisement

ಆಗ್ನೇಯಸ್ನಾನ:  
ಹೋಮ ಹವನ ಮಾಡಿದ ಭಸ್ಮವನ್ನು ಸರ್ವಾಂಗಗಳಿಗೆ ಲೇಪಿಸಿಕೊಂಡು ಮಾಡುವ ಸ್ನಾನವೇ ಆಗ್ನೇಯ ಸ್ನಾನವಾಗಿದೆ. 

ವಾಯುವ್ಯಸ್ನಾನ : 
ಹಸುವಿನ ಸಗಣಿಯಿಂದ ಸಣ್ಣ ಬಿಲ್ಲೆಗಳಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿ ಬೆರಣಿಯನ್ನು ಪುಡಿಮಾಡಿ ಅದನ್ನು ಲೇಪಿಸಿಕೊಂಡು ಮಾಡುವ ಸ್ನಾನವೇ ವಾಯವ್ಯ ಸ್ನಾನ. 

ದಿವ್ಯ ಸ್ನಾನ:  
ಪ್ರಕೃತಿದತ್ತವಾದ ಮಳೆ ಹನಿಗಳಿಂದ ಮಿಂದೇಳುವ ಪ್ರಕಾರವೇ ದಿವ್ಯಸ್ನಾನ.

ವರುಣಸ್ನಾನ :
ಕೋಪ, ತಟಾಕ ನದಿಗಳಲ್ಲಿ ಮುಳುಗಿ ಮಾಡುವ ಸ್ನಾನವು ವರುಣ ಸ್ನಾನವೆಂದು ಹೇಳಲಾಗಿದೆ. ಇದು ನಾವು ನೀವು ನಿತ್ಯ ಸ್ನಾನವನ್ನು ಹೀಗೆ ಮಾಡಬೇಕು ಎಂಬುದು ಶಾಸ್ತ್ರ ನಿಯಮ. ಈಗಿನ ಸನ್ನಿವೇಶವನ್ನು ಅರಿತು ಹಿರಿಯರು ಸೂಚಿಸಿದಂತೆ ಈಗ ನಾವು ಮಾಡುತ್ತಿರುವ ಸ್ನಾನವನ್ನು ವರುಣ ಸ್ನಾನವೆಂದು ಪರಿಗಣಿಸಿದೆ. ಪ್ರಸ್ತುತವಾಗಿ ನಾವು ಮಾಡುತ್ತಿರುವ ಸ್ನಾನವನ್ನು ಜಲಸ್ನಾನವೆಂದು ಸಹ ಕರೆಯಬಹುದು . ಈ ವರುಣ ಸ್ನಾನಕ್ಕೆ ಅವಗಾಹನ ಸ್ನಾನ ಎಂಬುದಾಗಿಯೂ ಕರಿಯುತ್ತಾರೆ.

ಮಾನಸ ಸ್ನಾನ : ಭಗವಂತ ರೂಪವಾದ ಪುಂಡರೀಕಾಕ್ಷನ ಸ್ಮರಣೆಯೇ ಮಾನಸ ಸ್ನಾನ . ಈ ಪುಂಡರೀಕಾಕ್ಷನ ಚಿಂತನೆ ಹೇಗಿರಬೇಕೆಂದರೆ ನಮ್ಮ ಕಣ್ಣುಗಳು ಮುಚ್ಚಿದೊಡನೆ ಆ ಭಗವಂತನ ರೂಪವು ನಮ್ಮ ಕಣ್ಣ ಮುಂದೆ ಬರುವಂತೆ ಚಿಂತಿಸಿದಾಗ ಮಾತ್ರ ಮಾನಸ ಸ್ನಾನ ಪೂರ್ಣವಾಗುತ್ತದೆ.

ಹೀಗೆ ಸ್ನಾನ ಮಾಡುವಾಗ ಕೆಲವು ನಿಯಮಗಳು ಸಹ ಶಾಸ್ತ್ರ ಸಮ್ಮತವೇ ಸರಿ. ಕೂದಲನ್ನು ಬಿಚ್ಚಿಡಬಾರದು, ಮೊಣಕಾಲು ತಾಕುವಷ್ಟು ಜಲದಲ್ಲಿ ನಿಲ್ಲಬೇಕು ಅಥವಾ ಕುಳಿತುಕೊಳ್ಳಬಹುದು. ಸಂಕಲ್ಪಿಸಿ ಜಲವನ್ನು ನಮಸ್ಕರಿಸಿ ಪೂರ್ವಾಭಿಮುಖವಾಗಿ ಅಥವಾ ಪ್ರವಾಹಭಿಮುಖವಾಗಿ ಮೂರಾವರ್ತಿ ಮುಳುಗಿ ದೇಹವನ್ನು ತಿಕ್ಕಿಕೊಂಡು ಪುನಃ ಸ್ನಾನ ಮಾಡಬೇಕು. ನಂತರ ಜಲವನ್ನು ಹಿಡಿದು ಮಂತ್ರಸ್ನಾನವನ್ನು ಮಾಡುವುದು ಉತ್ತಮ.

ನಿತ್ಯ ಸ್ನಾನ : 
ಒಂದು ನದಿಯಲ್ಲಿ ಸ್ನಾನ ಮಾಡುವಾಗ ಬೇರೆ ನದಿಯ ಸ್ಮರಣೆ ಸಲ್ಲದು , ಹಾಗೂ  ಕೆರೆ, ಹೊಳೆಗಳು ಇಲ್ಲದ ಪಕ್ಷದಲ್ಲಿ ಮನೆಯಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು, ತಣ್ಣೀರಿನಿಂದ ಮಾಡಬಾರದು. ಶುರುವಿಗೆ ಒಂದು ಪಾತ್ರೆಯಲ್ಲಿ ತಣ್ಣೀರು ಹಿಡಿದು ಅದರ ಮೇಲೆ ಬಿಸಿನೀರು ಹಾಕಿ ಕೆಲವು ಮಂತ್ರಗಳಿಂದ ಅಭಿಮಂತ್ರಿಸಿ ಪಠಿಸುತ್ತ ಸ್ನಾನ ಮಾಡಬೇಕು.  ಹೀಗೆ ಸ್ನಾನ ಮಾಡಲು ಉಪಯೋಗಿಸಿದ ವಸ್ತ್ರದಿಂದ ಅಥವಾ ಬರಿಗೈಯಿಂದ ಮೈಯನ್ನು ಒರೆಸಬಾರದು, ಒಣಗಿದ ಶುಭ್ರವಾದ ಹತ್ತಿಯ ಬಟ್ಟೆಯಿಂದ ಒರೆಸಬೇಕು. ಹೀಗೆ ನಿತ್ಯದ ಪ್ರಾತಃಕಾಲದಲ್ಲಿ ಸ್ನಾನ ಮಾಡಬೇಕು.

ನೈಮಿತ್ತಿಕ ಸ್ನಾನ 
ಸೂತಕ, ಹಡೆದವಳು, ಶವ ಇತ್ಯಾದಿಗಳ ಸ್ಪರ್ಶವಾದರೆ ಸ್ನಾನಮಾಡಬೇಕು. ಈ ನೈಮಿತ್ತಿಕ ಸ್ನಾನವನ್ನು ರಾತ್ರಿಯಲ್ಲಾದರೂ ಸಹ ಮಾಡಬೇಕು. ಹಾಗೂ ನೈಮಿತ್ತಿಕಸ್ನಾನವನ್ನು ಬಿಸಿನೀರಿನಿಂದ ಮಾಡಬಾರದು ತಣ್ಣೀರಿಂದಲೇ ಮಾಡಬೇಕು.

ಕಾಮ್ಯಸ್ನಾನ :
ಅಮಾವಾಸ್ಯೆ, ವ್ಯತೀಪಾತ ಯೋಗ, ರಥಸಪ್ತಮಿ, ಮೊದಲಾದ ದಿನಗಳಲ್ಲಿ ಮಾಡುವ ಸ್ನಾನ ಹಾಗೂ ಕಾರ್ತಿಕ ಸ್ನಾನ, ಮಾಘ ಸ್ನಾನಾದಿಗಳು, ಪರ್ವಕಾಲದ ಸ್ನಾನಗಳಿಗೆ ಕಾಮ್ಯ ಸ್ನಾನವೆಂದು ಹೇಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next