Advertisement

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

03:39 AM Dec 23, 2024 | Team Udayavani |

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ರವಿವಾರ ಅದ್ದೂರಿಯ ತೆರೆ ಬಿದ್ದಿದ್ದು, “ರಾಜ್ಯ ಸರಕಾರವು ರಾಷ್ಟ್ರಕವಿಯನ್ನು ಶೀಘ್ರದಲ್ಲೇ ಘೋಷಣೆ ಮಾಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಮತ್ತು ಕನ್ನಡೇತರ ಶಾಲೆ ಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು’ ಎಂಬುದರ ಸಹಿತ ಒಟ್ಟು 5 ನಿರ್ಣಯಗಳನ್ನು ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕೈಗೊಳ್ಳಲಾಯಿತು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ ಪಾಂಡು ನಿರ್ಣಯಗಳನ್ನು ಮಂಡಿಸಿದರೆ, ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅನುಮೋದಿಸಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಎಲ್ಲ ಉಪನಿಬಂಧಗಳು ಮತ್ತು ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವು ಸಮಗ್ರವಾಗಿ ಜಾರಿಗೆ ಬರಬೇಕಿದ್ದು, ಕೂಡಲೇ ಅನುಷ್ಠಾನವಾಗಬೇಕು.

ಸ್ವಾಯತ್ತೆ ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022’ರ “ರಾಜ್ಯ ಮಟ್ಟದ ಸಮಿತಿ’ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಸೂಕ್ತ ತಿದ್ದುಪಡಿ ತರಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ರಾಜ್ಯದಲ್ಲಿರುವ ಎಲ್ಲ ಸರಕಾರಿ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಕನ್ನಡ ಅನ್ನದ ಭಾಷೆಯಾಗಲು ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ಸರಕಾರ ಸಮರ್ಪಕವಾಗಿ ಎದುರಿಸಬೇಕು. ಕನ್ನಡಿಗರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವ “ಸರೋಜಿನಿ ಮಹಿಷಿ ವರದಿ’ಯನ್ನು ಶಾಸನಬದ್ಧಗೊಳಿಸಬೇಕು ಎಂಬ ನಿರ್ಣಯವನ್ನು ಕಸಾಪ ಕೈಗೊಂಡಿತು.

ದಾವಣಗೆರೆಯಲ್ಲಿ ನಡೆಯಬೇಕಾಗಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತೀ ಶೀಘ್ರದಲ್ಲಿ ನಡೆಸಬೇಕು ಎಂಬ ನಿರ್ಣಯವನ್ನು ಬಹಿರಂಗ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. ಹಾವೇರಿಯಲ್ಲಿ ನಡೆದ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 6 ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಕೇವಲ 2 ಮಾತ್ರ ಅನುಷ್ಠಾನಕ್ಕೆ ಬಂದಿವೆ.

Advertisement

ಸಮ್ಮೇಳನದ ಕೈಗೊಂಡ ನಿರ್ಣಯಗಳು:
* ಸರಕಾರ ಕೂಡಲೇ ರಾಷ್ಟ್ರಕವಿ ಘೋಷಣೆ ಮಾಡಬೇಕು

* ಶಿಕ್ಷಕರ ಹುದ್ದೆ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳಬೇಕು

* ಭಾಷಾ ಅಭಿವೃದ್ಧಿ ಸಮಿತಿಗೆ ಕಸಾಪ ಅಧ್ಯಕ್ಷರ ನೇಮಕ

* ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಶೀಘ್ರವೇ ಆಯೋಜನೆ

*  ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು


ಸಾಹಿತ್ಯ ಮತ್ತು ಸಂಸ್ಕೃತಿಯ ಸಂಬಂಧ ಬಲವಾಗಿದ್ದರೆ ಅದು ಸಮಾಜದ ಮೇಲೆ ವಿಶೇಷ ಪರಿಣಾಮ ಬೀರು ತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕು. 3 ದಿನಗಳ ಈ ಸಮ್ಮೇಳನ ಕನ್ನಡಿಗರಲ್ಲಿನ ಕನ್ನಡತನವನ್ನು ಎತ್ತಿ ಹಿಡಿದಿದೆ. ಅಭೂತಪೂರ್ವ ಯಶಸ್ಸು ಈ ಸಮ್ಮೇಳನಕ್ಕೆ ದೊರಕಿರುವುದಕ್ಕೆ ಕಾರಣವಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅರ್ಥಪೂರ್ಣ ವಿಚಾರಗೋಷ್ಠಿಗಳ ಮೂಲಕ ಎಲ್ಲರ ಮನಗೆಲ್ಲುವಲ್ಲಿ ಸಾಹಿತ್ಯ ಸಮ್ಮೇಳನ ಸಫ‌ಲವಾಗಿದೆ.

– ಗೊ.ರು. ಚನ್ನಬಸಪ್ಪ , 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಕಾರ್ಯ ಏನು?
ಆಡಳಿತ ಮತ್ತು ಶಿಕ್ಷಣದಲ್ಲಿ ಕನ್ನಡ ಜಾರಿ ಸಹಿತ ಅನೇಕ ಅಂಶಗಳನ್ನು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022′ ಒಳಗೊಂಡಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಎಲ್ಲ ಉಪ-ನಿಂಬಂಧಗಳು ಮತ್ತು ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವು ಸಮಗ್ರವಾಗಿ ಜಾರಿಗೆ ಬರಬೇಕಿರುವುದರಿಂದ ಸರಕಾರ ಈಗಾಗಲೇ ರಾಜ್ಯಮಟ್ಟದ ಉಪ ಸಮಿತಿ ನೇಮಕ ಮಾಡಿದೆ.

ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಈ ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಿದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಲಸವೇ ಇರುವುದಿಲ್ಲ. ಎಲ್ಲ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕೈಗೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ.

 

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next