ಸಿಂಗಾಪುರ: ಭಾರತದ ಡಿ.ಗುಕೇಶ್ (D.Gukesh) ಅವರು 18ನೇ ವರ್ಷಕ್ಕೆ ಚೆಸ್ ವಿಶ್ವ ಚಾಂಪಿಯನ್ (Chess World Champion) ಆಗಿ ಇತಿಹಾಸ ಮೂಡಿಸಿದ್ದಾರೆ. ಗುಕೇಶ್ ವಿಶ್ವ ಚಾಂಪಿಯನ್ ಶಿಪ್ ಗೆದ್ದ ವಿಶ್ವದ 18ನೇ, ಭಾರತದ ಕೇವಲ 2ನೇ ಆಟಗಾರನಾಗಿದ್ದಾರೆ. ಈ ಹಿಂದೆ ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಡಿ.ಗುಕೇಶ್ ಅವರು ಅತ್ಯಂತ ಕಿರಿಯ ಚಾಂಪಿಯನ್ ಎಂಬ ಆಟಗಾರ ದಾಖಲೆಯನ್ನೂ ಮಾಡಿದ್ದಾರೆ.
ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೈನ 14 ನೇ ಮತ್ತು ಕೊನೆಯ ಕ್ಲಾಸಿಕಲ್ ಗೇಮನ್ನು ಗೆಲ್ಲುವ ಮೂಲಕ ಗುಕೇಶ್ 7.5-6.5 ರಿಂದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು.
ಈ ಹಿಂದೆ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಅವರು 22 ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚಾಂಪಿಯನ್ ಎಂಬ ದಾಖಲೆಯನ್ನು ಹೊಂದಿದ್ದರು. ಇದೀಗ 18ರ ಗುಕೇಶ್ ಇದನ್ನು ಅಳಿಸಿ ಹಾಕಿದ್ದಾರೆ.
ಗುಕೇಶ್ ಗೆದ್ದ ಪ್ರಶಸ್ತಿ ಮೊತ್ತವೆಷ್ಟು?
ವಿಶ್ವ ಚಾಂಪಿಯನ್ ಶಿಪ್ ನ ಪ್ರತಿ ಪಂದ್ಯದಲ್ಲಿ ಗೆದ್ದವರು 200,000 ಡಾಲರ್ (ಸುಮಾರು 1.69 ಕೋಟಿ ರೂ) ಗೆಲ್ಲುತ್ತಾರೆ. ಗುಕೇಶ್ ಮೂರು ಪಂದ್ಯಗಳನ್ನು ಗೆದ್ದ ಕಾರಣ ಒಟ್ಟು $ 600,000 (ಅಂದಾಜು ರೂ 5.07 ಕೋಟಿ) ಗಳಿಸಿದರು. ಮತ್ತೊಂದೆಡೆ, ಎರಡು ಪಂದ್ಯಗಳನ್ನು ಗೆದ್ದ ಲಿರೆನ್ $ 400,000 (ಅಂದಾಜು 3.38 ಕೋಟಿ ರೂ.) ಪಡೆದರು.
ಉಳಿದ $1.5 ಮಿಲಿಯನ್ ಬಹುಮಾನದ ಹಣವನ್ನು ಇಬ್ಬರು ಎದುರಾಳಿಗಳ ನಡುವೆ ಸಮಾನವಾಗಿ ಹಂಚಲಾಗುತ್ತದೆ.
ಇದರೊಂದಿಗೆ, ಗುಕೇಶ್ ಅವರ ಒಟ್ಟು ಬಹುಮಾನದ ಮೊತ್ತವು $ 1.35 ಮಿಲಿಯನ್ (ಅಂದಾಜು ರೂ 11.45 ಕೋಟಿ) ಆಗಿದ್ದರೆ, ಲಿರೆನ್ $ 1.15 ಮಿಲಿಯನ್ (ಅಂದಾಜು ರೂ 9.75 ಕೋಟಿ) ಗಳಿಸಿದ್ದಾರೆ.