ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಿಕೆ ತೋಟಗಳಲ್ಲಿ ಫಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ, ಅಡಿಕೆ ಮರಗಳಲ್ಲಿ ತೊನೆಯುವ, ಬೆಳೆದು ತೂಗುವ ಅಡಿಕೆ ಗೊನೆಗಳು, ಹಾಲು ತುಂಬಿದ ಭತ್ತದ ತೆನೆಗಳು.
ಸಮೃದ್ಧ ಭೂದೇವಿಯ ಒಡಲು ಅದು. ದೀಪಾವಳಿಯ ಸಿದ್ಧತೆ ಪ್ರಾರಂಭವಾಯಿತೆಂದರೆ, ಕೃಷಿಕರಿಗೆ ಬಿಡುವಿಲ್ಲದ ಚಟುವಟಿಕೆ. ವರ್ಷ ಋತುವಿಗೆ ವಿದಾಯ ಹೇಳಿ ಮಾರ್ಗಶಿರದ ಚಳಿಗೆ ಅನುವಾಗುವ ಪ್ರಾಕೃತಿಕ ಸಿದ್ಧತೆಗಳು. ವಾಡಿಕೆಯಂತೆ ಜುಲೈ- ಆಗಸ್ಟ್ ನಲ್ಲಿ ಮಲೆನಾಡಿನ ಮಳೆ ಭರ್ಜರಿಯಾಗಿ ಬಂದು, ಹೊಳೆ ಕೊಳ್ಳಗಳು ತುಂಬಿ, ಝರಿ ಒರತೆಗಳ ಧಾರೆಗಳನ್ನು ಹರಿಸಿ, ಇಡೀ ಭೂಪ್ರದೇಶವನ್ನು ಹಸಿ ಹಸಿ ಹಸಿರಾಗಿಸಿ ತೆರಳುತ್ತದೆ. ಅಕ್ಟೋಬರ್ ಬಂತೆಂದರೆ, ಆ ಹಸಿಯ ಪಸೆಗೆ ಕೊನೆ ಬಿದ್ದು ಹೀರಿಕೊಂಡ ನೀರಿನ ತನಿಯನ್ನು ಒಡಲೊಳಗಿಟ್ಟುಕೊಂಡ ವಸುಂಧರೆ, ಹಸಿರಾಗಿ “ಹಸಿರುಡುಗೆ ಪೊಸೆದುಟ್ಟು’ ಲಾಸ್ಯವನ್ನು ಪ್ರದರ್ಶಿಸುತ್ತಿರುತ್ತಾಳೆ.
ಅಡಿಕೆ ಕೊಯ್ಲಿಗೆ ಇನ್ನೂ ದಿನವಿದೆ. ಮಳೆಗಾಲದಲ್ಲಿ ಬಿದ್ದ ಕೊಳೆ ಅಡಿಕೆಗಳನ್ನು ಹೆಕ್ಕಿ ತೆಗೆದಾಗಿದೆ. ತೋಟವೂ ಸ್ವತ್ಛವಾಗಿ ಇರುವಂಥ ದಿನಗಳು. ಭೂಮಿ ಹುಣ್ಣಿಮೆಯಂದು ತೋಟದಲ್ಲಿಯೇ ಕೂತು ಊಟ ಮಾಡುವ ಸಂಪ್ರದಾಯವಿದೆ. ಇದು ಹೆಚ್ಚು ಕಡಿಮೆ ವಾರ್ಷಿಕವಾಗಿ ಮಲೆನಾಡು ಕಾಣುವ ವರ್ಷಕಾಲದ ವಿದಾಯದ ದಿನಗಳ ನೋಟ.
ತೋಟಕ್ಕೆ ಇಳಿದರೆ ಕೊಳೆತು ನಾರುವ ಕೊಳೆ ಅಡಿಕೆಯ ರಾಶಿ! ದುರ್ಗಂಧ. ಪ್ರತಿ ವರ್ಷ ಕೊಳೆ ಔಷಧಿ ಹಾಕಿದ ಬಳಿಕ ಎಲ್ಲೋ ಸ್ವಲ್ಪ ಪ್ರಮಾಣದಲ್ಲಿ ಕೊಳೆ ರೋಗ ಬಂದು ವಾಸಿಯಾಗಿ, ಅಡಿಕೆ ಬೆಳೆಯನ್ನು ತೀರಾ ಅಲ್ಪ ಪ್ರಮಾಣದಲ್ಲಿ ನಾಶ ಮಾಡಿರುತ್ತಿತ್ತು. ಅದನ್ನು ತೆಗೆದು ಒಣಗಿಸಿ ಕಚ್ಚಾ ಅಡಿಕೆಯನ್ನು ಸಿದ್ಧಪಡಿಸುವಷ್ಟರಲ್ಲಿ ನಿಜವಾದ ಸದೃಢ ಸುಂದರ ಅಡಿಕೆ ಗೊನೆಗಳು ಮನೆ ಸೇರಲು ಸಿದ್ಧವಾಗಿರುತ್ತಿದ್ದವು. ಬೆಳೆಗಾರ, ಸಂಭ್ರಮದಿಂದ ಅಡಿಕೆ ಕೊಯ್ಲು ಮಾಡುತ್ತಿದ್ದ. ಆದರೆ ಈ ಬಾರಿ ಮಲೆನಾಡಿನಲ್ಲಿ ಅಡಿಕೆ ಕೊಯ್ಲಿನ ಸಂಭ್ರಮವೇ ಇಲ್ಲ. ನೂರರಲ್ಲಿ ತೊಂಬತ್ತು ಭಾಗ ಕೊಳೆ ರೋಗದಿಂದ ಉದುರಿ ಹೋದ ಅಡಿಕೆಗಳು. ಇದು ಅಡಿಕೆ ಭಾಗಾಯ್ತುದಾರರ ಜೀವನಾಧಾರವನ್ನೇ ಉಡುಗಿಸಿ ಬಿಟ್ಟಿದೆ. ಹಳ್ಳಿಗರು ತಮ್ಮ ತಮ್ಮ ಮನೆಗಳ ಕೂಡು ರಸ್ತೆಗಳನ್ನು ತಾವೇ ಶ್ರಮವಹಿಸಿ ಕಲ್ಲು ಗೊಚ್ಚು ಹಾಕಿ ಸಿದ್ಧಪಡಿಸಿಕೊಂಡಾರು. ಆದರೆ, ವಾಹನಗಳ ಓಡಾಟವೇ ಸಾಧ್ಯವಿಲ್ಲದ ಗ್ರಾಮೀಣ ರಸ್ತೆಗಳನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಗಳ ಬಳಿ ಹಣವಿಲ್ಲ. ಸರಕಾರ ಎಂದಿನಂತೆ ತನಗೆ ಸಂಬಂಧವಿಲ್ಲದ ವಿಷಯವೆಂಬಂತೆ ದಿವ್ಯ ನಿರ್ಲಕ್ಷ್ಯ ತೋರಿದೆ.
ಗ್ರಾಮೀಣ ಬದುಕು ಈ ಬಾರಿ ಅತ್ಯಂತ ದುಸ್ತರ. ತೋಟದಲ್ಲಿ ಉದುರಿ ಬಿದ್ದ ಕೊಳೆ ಅಡಿಕೆ ರಾಶಿಯನ್ನು ನೋಡಿದ ಅಡಿಕೆ ಬೆಳೆಗಾರನ ಜಂಘಾಬಲವೇ ಉಡುಗಿ ಹೋಗಿದೆ. ಅದನ್ನು ಹೆಕ್ಕಿ ತಂದು ಅಂಗಳದಲ್ಲಿ ಸುಲಿದು, ಬೆಂಕಿಯಲ್ಲಿ ಒಣಗಿಸಿ, ಶ್ರಮವಹಿಸಿ ಪರಿಷ್ಕರಿಸಿದರೂ ಅತ್ಯಂತ ಕಳಪೆ ಮಟ್ಟದ ಕೊಳೆಅಡಿಕೆ ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇಲ್ಲ. ಅನಿವಾರ್ಯವೆಂಬಂತೆ ವಹಿಸಲಾದ ಶ್ರಮದ ಖರ್ಚು ವೆಚ್ಚ ಯಾವುದೂ ಅದರಿಂದ ಬರುವಂತಿಲ್ಲ. ಅಲ್ಲದೆ, ಈ ಕಳಪೆ ಕೊಳೆ ಅಡಿಕೆಯಿಂದಾಗಿ “ಅಡಿಕೆಯ ಮಾನ’ ಹೋಗುವ ಸಂದರ್ಭವೂ ಎದುರಾಗಿದೆ. ಮಲೆನಾಡಿನ ಅಡಿಕೆ ಬೆಳೆಗಾರರ ದುರಂತವೆಂದರೆ, ಈ ಕೊಳೆ ಅಡಿಕೆಯ ನಷ್ಟವನ್ನು ಭರಿಸುವಂತೆ ಪ್ರಾಕೃತಿಕ ವಿಪ್ಲವದಡಿ ಸೇರಿಸಿ ಕೊಡುವ ಪರಿಹಾರಕ್ಕೆ ಇದು ಅರ್ಹವಾಗಿಯೇ ಇಲ್ಲ. ಒಂದಲ್ಲ ಒಂದು ದಿನ ನೆರೆ ಪರಿಹಾರದ ಹಣ ಸಿಗಬಹುದೆಂಬ ದೂರದ ಆಸೆ, ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆ ಇರಬಹುದು. ಆದರೆ ಮಲೆನಾಡಿನ ಅಡಿಕೆ ಬೆಳೆಗಾರರು ಈ ಯಾವುದೇ ಭರವಸೆಯನ್ನು ಹೊಂದಿಲ್ಲ. ಪ್ರಕೃತಿ ಮಾತೆ ತಮಗಿತ್ತ ಶಿಕ್ಷೆಯನ್ನು ಮೂಕವಾಗಿ ಅನುಭವಿಸುವ ಮೌನ ರೋದನ ಮಾತ್ರ, ಅವರ ಪಾಲಿಗಿದೆ. ಮರಳಿ ಅರಳುವ ಮಲೆನಾಡಿಗಾಗಿ ಪ್ರಾರ್ಥನೆ.
- ಭುವನೇಶ್ವರಿ ಹೆಗಡೆ