ನೆಗೆಟಿವ್ ಥಿಂಕ್ ಒಮ್ಮೆ ಶುರುವಾದರೆ, ಮನಸ್ಸಿನ ಮೂಲೆಯಲ್ಲಿ ಆತಂಕದ ಒಲೆ ಹೊತ್ತಿಕೊಳ್ಳುತ್ತದೆ. ಅದರ ಮೇಲೆ ಗಾಬರಿ ಅನ್ನೋ ಪಾತ್ರೆ ಕೂತು, ಆ ದಿನದ ನೆಗೆಟಿವ್ ಘಟನೆಗಳೆಲ್ಲ ಅದರೊಳಗೆ ಬಿದ್ದು, ಕೊತಕೊತ ಕುದಿಯೋಕ್ಕೆ ಶುರುವಾಗುತ್ತದೆ…
ಕೋವಿಡ್ 19 ನ ಈ ಬಂಧನ ದೇಹಕ್ಕೆ ಮಾತ್ರ. ಮನಸ್ಸಿಗಲ್ಲ. ಹೀಗಂದುಕೊಂಡರೆ ನೀವು ಏನೇನೆಲ್ಲಾ ಸಾಧಿಸಬಹುದು ಗೊತ್ತಾ? ನಮ್ಮ ಮನಸ್ಸು ಹಾಗೇನೇ, ಸದಾ ನೆಗೆಟಿವ್ ಥಿಂಕ್ ಮಾಡುತ್ತಿರುತ್ತದೆ. ಕತ್ತಲು ಅಂದರೆ ಬಹಳ ಇಷ್ಟ. ಬೆಳಕು ಬಿದ್ದರೆ ಕಣ್ಣೇ ಬಿಡಲೊಲ್ಲದು… ಅಯ್ಯೋ, ಮನೆಯಲ್ಲೇ ಕೂತು, ಕೊಳೆಯೋ ಹಾಗೆ ಆಯ್ತಲ್ಲಪ್ಪಾ ಅಂತ ಅಂದುಕೊಂಡರೆ, ಇಡೀ ದಿನ ಇಂಥ ಋಣಾತ್ಮಕ ಯೋಚನೆಗಳೇ ನಿಮ್ಮನ್ನು ಮುತ್ತಿಕೊಂಡು ಬಿಡುತ್ತವೆ, ಅಂಥ ಘಟನೆಗಳನ್ನೇ ಹುಡುಕುತ್ತಾ ಹೋಗ್ತದೆ ಮನಸ್ಸು.
ಬೆಳಗಿನ ವಾತಾವರಣ, ಮನಸನ್ನು ಫ್ರೆಶ್ ಆಗಿಸುತ್ತದೆ. ಅದಕ್ಕೂ ಒಂದು ಕಾರಣವಿದೆ. ಏನೆಂದರೆ, ಟೆರಟೊಮೀನ್ ಅನ್ನೋ ಹಾರ್ಮೋನ್ ಗಳು ಉತ್ಪತ್ತಿ ಆಗೋದು ಈ ಧ್ಯಾನಸ್ಥಿತಿಯಲ್ಲಿ. ನೀವು ಈಗ ಪಾಸಿಟಿವ್ ಆಗಿ ಯೋಚನೆ ಮಾಡಿದಷ್ಟೂ ಇವುಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಅದೇ, ಏನ್ ಇವತ್ತು ಏನಾಗಿºಡುತ್ತೋ ಏನೋ, ಕೆಲಸಗಿಲಸ ಹೋಗಿಬಿಟ್ರೇ.. ಅಂತ ಒಂದು ಸಲ ಅಂದುಕೊಳ್ಳಿ ನೋಡೋಣ. ಕೂಡಲೇ, ನಮ್ಮ ಲುಂಬಿಕ್ ಸಿಸ್ಟಮ್‌ನಲ್ಲಿ, ಗಾಬಾ ಪೇಟಿಂಗ್ ಅನ್ನೋ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ತಕ್ಷಣ ಮನಸ್ಸಿನ ಮೂಲೆಯಲ್ಲಿ ಆತಂಕದ ಒಲೆ ಹೊತ್ತಿಕೊಳ್ಳುತ್ತದೆ. ಅದರ ಮೇಲೆ ಗಾಬರಿ ಅನ್ನೋ ಪಾತ್ರೆ ಕೂತು, ಆ ದಿನದ ನೆಗೆಟಿವ್ ಘಟನೆಗಳೆಲ್ಲ ಅದರೊಳಗೆ ಬಿದ್ದು, ಕೊತಕೊತ ಕುದಿಯೋಕ್ಕೆ ಶುರುವಾಗುತ್ತದೆ.
ಆಗಲೇ ನೋಡಿ, ನೀವು ಬುಸ್ ಬುಸ್ ಅಂತ ಸಿಕ್ಕವರ ಮೇಲೆಲ್ಲಾ ಎಗರಾಡೋದು. ಮನೆಯಲ್ಲಿ ಕೂತು ಹೀಗೆಲ್ಲಾ ಮಾಡಿದರೆ, ಯಾರು ತಾನೇ ಸಹಿಸಿಕೊಳ್ಳುತ್ತಾರೆ ಹೇಳಿ? ಈಗ ಸಿಕ್ಕಿರೋದು ಅಮೂಲ್ಯ ಸಮಯ. ಜೇಬಿನ ತುಂಬ ಹಣ ಇದೆಯೋ ಇಲ್ಲವೋ, ಆದರೆ ಕೈ ತುಂಬಾ ಸಮಯ ಅಂತೂ ಇದೆ. ಸಂಬಂಧಗಳ ನೇವರಿಕೆಗೆ, ಗೆಳೆತನದ ಶುದ್ಧೀಕರಣ, ಆತ್ಮಾವಲೋಕನದ ಮಜ್ಜನಕ್ಕೆ ಇದಕ್ಕಿಂತ ಅದ್ಭುತ ಸಮಯ ಬೇಕಾ ಹೇಳಿ…
ಯಾವುದಕ್ಕೂ ಮನಸ್ಸು ರಿಲ್ಯಾಕ್ಸ್ ಆಗಿರಬೇಕು. ಆಗಲೇ ಎಲ್ಲವೂ ಸ್ಪಷ್ಟವಾಗಿ ಕಾಣೋದು. ನಾವು ಸದಾ ಗಜಿಬಿಜಿ ಬದುಕಲ್ಲಿ ಇದ್ದವರು. ಈಗ, ಇದ್ದಕ್ಕಿದ್ದಂತೆ ಏಕಾಂತದ ಕೊಳದಲ್ಲಿ ಬಿದ್ದಾಗ ಏನಾಗಬೇಡ? ಚಿಂತೆ ಬೇಡ. ಮೊದಲು ಸಾವಧಾನದ ಬದುಕಿಗೆ ಹೊಂದಿಕೊಳ್ಳಲು. ಜಿಮ್ ಮಾಡಿ, ದೇಹಕ್ಕಲ್ಲ ರೀ. ಮನಸ್ಸಿಗೆ ಯೋಗ ಮಾಡಿಸಿ, ಆಗ ನೋಡಿ, ನಿಮ್ಮ ನಡೆಗೆ ತಕ್ಕಂತೆ ಜಗತ್ತು ಬರುತ್ತಿದೆ ಅನ್ನೋ ಅನುಭವ ಸಿಗುತ್ತದೆ.
-ಕೆ.ಜಿ