Advertisement

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

09:44 PM Dec 04, 2022 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಬಲವೃದ್ಧಿಗಾಗಿ ಆಸಕ್ತಿಯಿಂದ ಕೆಲಸ ಮಾಡಿ. ಇಲ್ಲದಿದ್ದರೆ ಕೆಲಸ ಮಾಡುವವರಿಗೆ ಅವಕಾಶ ನೀಡಿ – ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ನೀಡಿರುವ ಖಡಕ್‌ ಸೂಚನೆ.

Advertisement

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಹೊಸದಿಲ್ಲಿಯಲ್ಲಿ ರವಿವಾರ ನಡೆದ ಮೊದಲ ಪಕ್ಷದ ಸಂಚಾಲನ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಜತೆಗೆ ಪಕ್ಷದಲ್ಲಿ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದೂ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಜನರು ಅನುಭವಿಸುತ್ತಿರುವ ಸಮಸ್ಯೆಗಳು, ಅವುಗಳ ಪರವಾಗಿ ಯಾವ ರೀತಿ ಹೋರಾಟ ನಡೆಸಬೇಕು, ಮುಂದಿನ ಚುನಾವಣೆಗಳ ಬಗೆಗಿನ ಕಾರ್ಯತಂತ್ರದ ಬಗ್ಗೆ 30ರಿಂದ 90 ದಿನಗಳ ಒಳಗಾಗಿ ನೀಲನಕ್ಷೆ ಸಲ್ಲಿಸುವಂತೆ ರಾಜ್ಯಗಳ ಪಕ್ಷದ ಉಸ್ತುವಾರಿಗಳಿಗೆ ಖರ್ಗೆ ತಾಕೀತು ಮಾಡಿದ್ದಾರೆ.

ಹೊಣೆಗಾರಿಕೆ ವಹಿಸಲೇಬೇಕು
ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ವಿಧಾನಸಭೆ, 2024ರ ಎಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಸಂಘಟನೆಯಲ್ಲಿ ಹೊಣೆಗಾರಿಕೆಯನ್ನು ನಿಗದಿ ಮಾಡಬೇಕಾಗಿದೆ. ದೇಶ ಮತ್ತು ಪಕ್ಷದ ನಿಟ್ಟಿನಲ್ಲಿ ನಮ್ಮೆಲ್ಲರಿಗೆ ದೊಡ್ಡ ಹೊಣೆಗಾರಿಕೆ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ಬಲಿಷ್ಠವಾಗಿರುವ ಹಾಗೂ ಸಂಘಟಿತವಾಗಿರುವ ಪಕ್ಷವೂ ಅಗತ್ಯ. ಹೀಗಿದ್ದಾಗ ಮಾತ್ರ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯ. ಹೆಚ್ಚಿನ ಹೊಣೆಗಾರಿಕೆ ವಹಿಸಿ ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು. ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಪಕ್ಷ ಸಂಘಟನೆಯತ್ತ ನಿರಾಸಕ್ತಿ ವಹಿಸಿದರೆ, ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಆಸಕ್ತಿಯಿಂದ ಪಕ್ಷಕ್ಕಾಗಿ ಕೆಲಸ ಮಾಡದಿದ್ದರೆ, ಕೆಲಸ ಮಾಡುವವರಿಗೆ ಅವಕಾಶ ನೀಡಿ ಎಂದು ಮುಖಂಡರಿಗೆ ಖರ್ಗೆ ಹೇಳಿದ್ದಾರೆ.

ಮುಖಂಡರಿಗೆ ಸರಣಿ ಪ್ರಶ್ನೆ
ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದೀರಾ? ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಹಾಗೂ ಮುಖಂಡರ ಜತೆಗೆ ಪರಾಮರ್ಶೆ ನಡೆಸಿದ್ದೀರಾ? ಅದರ ಪರಿಹಾರಕ್ಕಾಗಿ ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಸೂಚನೆ ನೀಡಿದಂತೆ ರಾಜ್ಯ, ಜಿಲ್ಲೆ ಮತ್ತು ಬ್ಲಾಕ್‌ ಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದೀರಾ? ರಾಜ್ಯ ಮತ್ತು ರಾಷ್ಟ್ರೀಯ ವಿಚಾರಗಳಿಗಾಗಿ ಎಲ್ಲಿ ಮತ್ತು ಎಷ್ಟು ಪ್ರತಿಭಟನೆಗಳನ್ನು ನಡೆಸಲಾಗಿದೆ? ಜಿಲ್ಲೆ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳನ್ನು ರಚನೆ ಮಾಡಲಾಗಿದೆಯೇ? ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದರ ವಿರುದ್ಧ ಹೋರಾಟ ಮಾಡಲಾಗಿದೆಯೇ? ಪಕ್ಷದ ಸ್ಥಳೀಯ ಘಟಕಗಳಲ್ಲಿ ಹೊಸ ಮುಖಂಡರಿಗೆ ಅವಕಾಶ ನೀಡಲಾಗಿದೆಯೇ? ಐದು ವರ್ಷಗಳಲ್ಲಿ ಜಿಲ್ಲೆ, ಬ್ಲಾಕ್‌ ಮಟ್ಟದ ಪದಾಧಿಕಾರಿಗಳ ಮಟ್ಟದಲ್ಲಿ ಬದಲಾವಣೆ ಮಾಡಿಲ್ಲವೇಕೆ ಮುಂತಾದ ಹಲವು ಪ್ರಶ್ನೆಗಳನ್ನು ನಾಯಕರ ಮುಂದಿರಿಸಿದ್ದಾರೆ.

Advertisement

ಕಾರ್ಯತಂತ್ರವೇನಿದೆ?
ಮುಂದಿನ ಲೋಕಸಭೆ ಚುನಾವಣೆ ವರೆಗೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿ ಪಕ್ಷ ರಾಜ್ಯ ಘಟಕಗಳು ಪ್ರಚಾರ ಮತ್ತು ಜಯಗಳಿಸಲು ಯಾವ ರೀತಿಯಲ್ಲಿ ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿವೆ ಎಂದು ಖರ್ಗೆ ಪ್ರಶ್ನಿಸಿದರು. ಪಿಸಿಸಿಗಳ ಅಧ್ಯಕ್ಷರು, ಶಾಸಕರು, ಸಂಸದರು, ಕಾರ್ಯದರ್ಶಿಗಳು ಕಾರ್ಯತಂತ್ರ ರೂಪಿಸಿದರೆ ಹೊಣೆಗಾರಿಕೆ ಮುಕ್ತಾಯ ಆಗುವುದಿಲ್ಲ. ಅವುಗಳನ್ನು ಅಷ್ಟೇ ಆಸಕ್ತಿ ವಹಿಸಿ ಅನುಷ್ಠಾನಗೊಳಿಸಲೂ ಮುಖಂಡರು ಮುಂದಾಗಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ನೇತೃತ್ವದಲ್ಲಿ “ಹಾಥ್‌ ಸೆ ಹಾಥ್‌ ಜೋಡೋ’
ಸದ್ಯ ದೇಶಾದ್ಯಂತ ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ಪಾದಯಾತ್ರೆಗೆ ಭಾರೀ ಬೆಂಬಲ ಸಿಕ್ಕಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ ಎಂಬುದು ನಾಯಕರ ಹೇಳಿಕೆ. ಇದನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಜ.26ರ ಗಣರಾಜ್ಯೋತ್ಸವ ದಿನದಿಂದ 2 ತಿಂಗಳು ಮಹಿಳೆಯರಿಗಾಗಿ “ಹಾಥ್‌ ಸೆ ಹಾಥ್‌ ಜೋಡೋ’ ಎಂಬ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಭೆಯ ಬಳಿಕ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಡಿ.24ರಂದು ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ದಿಲ್ಲಿ ಪ್ರವೇಶಿಸಲಿದೆ. ಇದುವರೆಗೆ ಯಾತ್ರೆಗೆ ಅದ್ದೂರಿ ಬೆಂಬಲ ಸಿಕ್ಕಿದೆ. ಸಭೆಯಲ್ಲಿ ರಾಹುಲ್‌ ಯಾತ್ರೆಯನ್ನು ಒಂದು ತಪಸ್ಸು ಎಂದು ಬಣ್ಣಿಸಲಾಯಿತು ಎಂದು ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಮಹಾಧಿವೇಶನ
ಮುಂದಿನ ಫೆಬ್ರವರಿ ಮಧ್ಯದಲ್ಲಿ ಛತ್ತೀಸ್‌ಘಡ ರಾಜಧಾನಿ ರಾಯ್‌ಪುರದಲ್ಲಿ ಮೂರು ದಿನಗಳ ಕಾಲ ಪಕ್ಷದ ಮಹಾಧಿವೇಶನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಲ್ಲಿ ಹಲವಾರು ರಾಜ್ಯಗಳ ವಿಧಾನಸಭೆ, ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ವೇಣುಗೋಪಾಲ್‌ ತಿಳಿಸಿದರು.

ಚುನಾವಣೆಯತ್ತ ಗಮನ ಹರಿಸಿ
ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ. ಜತೆಗೆ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌, ಛತ್ತೀಸ್‌ಘಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಅದಕ್ಕೆ ಪೂರಕವಾಗಿ ಆಯಾ ರಾಜ್ಯಗಳಲ್ಲಿ ಪಕ್ಷದ ಬಲವರ್ಧಿಸುವ ಬಗ್ಗೆಯೂ ಕಾರ್ಯತಂತ್ರ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಖರ್ಗೆ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಖರ್ಗೆ ಸಿಡಿ ಮಾತು
– ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ಆಸಕ್ತಿ ಇರುವವರಿಗೆ ಅವಕಾಶ ಕೊಡಿ
– ಮುಖಂಡರು ಕಾರ್ಯತಂತ್ರ ರೂಪಿಸಿದರೆ ಸಾಲದು; ಅನುಷ್ಠಾನಕ್ಕೆ ಆಸಕ್ತಿ ವಹಿಸಬೇಕು.
– ಪಕ್ಷದ ಸೂಚನೆಯಂತೆ ರಾಜ್ಯ, ರಾಷ್ಟ್ರೀಯ ವಿಚಾರಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಎಷ್ಟು ಧರಣಿ, ಪ್ರತಿಭಟನೆ ಮಾಡಲಾಗಿದೆ?
– ಸ್ಥಳೀಯ ಘಟಕಗಳ ಪುನಾರಚನೆ ಮಾಡಲಾಗಿದೆಯೇ?
– ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದೀರಾ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next