ಧಾರವಾಡ: ಮಕ್ಕಳು ಕೇವಲ ಮನರಂಜನೆಯಲ್ಲಿ ಕಾಲಹರಣ ಮಾಡದೇ ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಜ್ಞಾನವನ್ನು ಸಂಪಾದಿಸಬೇಕು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ನಗರದಲ್ಲಿ ರಂಗಾಯಣವು ಹಮ್ಮಿಕೊಂಡಿದ್ದ ಚಿಣ್ಣರ ಮೇಳದ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಜೀವನದ ಗುರಿಯನ್ನು ಮುಟ್ಟಲು ಅಧ್ಯಯನ ಮಾಡಬೇಕು. ಅಂದಾಗ ಮಾತ್ರವೇ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಮಕ್ಕಳು ಆಧುನಿಕತೆ ಭರಾಟೆಯಲ್ಲಿ ಕೇವಲ ಮೊಬೈಲ್‌ಗಳಲ್ಲಿ ಕಳೆದು ಹೋಗಿದ್ದಾರೆ. ಇಂತಹ ಮಕ್ಕಳಿಗೆ ಹಳ್ಳಿಯ ಕುರಿತು ಪರಿಚಯ ನೀಡುವುದರ ಜತೆಗೆ ಮನರಂಜನೆಯನ್ನು ಧಾರವಾಡ ರಂಗಾಯಣ ನೀಡುತ್ತಿದೆ. ಈ ಶಿಬಿರದಲ್ಲಿ ಹೇಳಿಕೊಡುವ ಚಟುವಟಿಕೆಗಳು ಮಕ್ಕಳ ಮುಂದಿನ ಗುರಿ ತಲುಪಲು ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಮಕ್ಕಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು. ಅಂತಹ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸಲು ಧಾರವಾಡ ರಂಗಾಯಣ ಹಳ್ಳಿಯ ಪರಿಚಯದ ವಿನೂತನ ಪ್ರಯೋಗ ಮಾಡಿದೆ. ಆವರಣದಲ್ಲಿ ಹಳ್ಳಿಯ ಸೊಗಡಿನ ವಾತಾವರಣ ಸೃಷ್ಟಿಸಿದೆ. ಮಕ್ಕಳು ಹಳ್ಳಿಯ ಕುರಿತು ತಿಳಿದುಕೊಳ್ಳಲು ಶಿಬಿರ ಸಹಕಾರಿಯಾಗಲಿದೆ ಎಂದರು.
ಮಕ್ಕಳಿಗಾಗಿ ಪರಿಸರ ಎಂಬ ವಿಷಯದ ಕುರಿತು ಕನ್ನಡ ಉಪನ್ಯಾಸಕ ಡಾ| ಶಿವಾನಂದ ಟವಳಿ ಮಾತನಾಡಿ, ಪರಿಸರದಲ್ಲಿರುವ ನೀರು, ಗಾಳಿ, ಪ್ರಕೃತಿ ಹೀಗೆ ಎಲ್ಲವೂ ಮನುಷ್ಯನ ಜೀವನಕ್ಕೆ ಬೇಕಾದಂತಹ ಅತ್ಯಮೂಲ ಜೀವಸಂಪನ್ಮೂಲಗಳಾಗಿವೆ. ಪ್ರತಿಯೊಬ್ಬರು ಇವುಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ದಿನ ಒಂದು ಗಿಡವನ್ನು ನೆಡಬೇಕು. ನಮ್ಮ ಪ್ರಕೃತಿಯನ್ನು ಉಳಿಸಬೇಕು ಎಂದರು.
ಹಿರಿಯ ವಕೀಲರಾದ ಅರುಣ ಜೋಶಿ, ಮಲ್ಲಪ್ಪ ಹೊಂಗಲ ಇನ್ನಿತರರಿದ್ದರು.