Advertisement

ಅವಕಾಶಕ್ಕೆ ಕಾಯುವುದು ಬೇಡ

12:56 PM Mar 11, 2017 | |

ದಾವಣಗೆರೆ: ಸಬಲ, ಸದೃಢ ಸಮಾಜ ನಿರ್ಮಾಣದ ಕನಸು ನನಸಾಗಿಸಲು ಪ್ರತಿಯೊಬ್ಬರೂ ಮನಪೂರ್ವಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಪದ್ಮಶ್ರೀ, ರಾಮನ್‌ ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕೃತೆ ನೀಲಿಮಾ ಮಿಶ್ರಾ ಮನವಿ ಮಾಡಿದರು. ಶುಕ್ರವಾರ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು.

Advertisement

ನನ್ನ ಸಮಾಜಕ್ಕೆ ಏನಾದರೂ ಕಾಣಿಕೆ ನೀಡಬೇಕು ಎಂಬ ಮಹತ್ತರ ದೃಷ್ಟಿಯಿಂದ ಕೆಲಸ ಪ್ರಾರಂಭಿಸಿದಲ್ಲಿ ಅವಕಾಶಗಳು ತಾನೇ ತಾನಾಗಿ ಒದಗಿ ಬರುತ್ತವೆ. ನಾವ್ಯಾರು ಅವಕಾಶಕ್ಕೆ ಕಾಯುವ ಅನಿವಾರ್ಯತೆಯೇ ಇಲ್ಲ ಎಂಬುದಕ್ಕೆ ತಾವೇ ಉದಾಹರಣೆ ಎಂದರು. ನಾನು 13 ವರ್ಷದ ಬಾಲಕಿಯಾಗಿದ್ದಾಗ ನೆರೆ ಮನೆಯ ಮಹಿಳೆಯೊಬ್ಬರು ರಾತ್ರಿ ವೇಳೆ ಊಟಕ್ಕಿಲ್ಲದೆ ಹಸಿವು ತಡೆದುಕೊಳ್ಳುವುದಕ್ಕಾಗಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗುತ್ತಿದ್ದರು.

ಅದುವೇ ನನ್ನ ಹೋರಾಟಕ್ಕೆ ಸ್ಫೂರ್ತಿ. ನನ್ನ ತಾಯಿ ನೀಡಿದ ಅಪಾರ ಬೆಂಬಲದಿಂದ ಮಹಾರಾಷ್ಟ್ರದ ಚಿಕ್ಕ ಹಳ್ಳಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು. ಪೂನಾದಲ್ಲಿ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿದ್ದಾಗ ನನ್ನ ಗ್ರಾಮ, ಮಹಿಳೆಯರ ಅಭಿವೃದ್ಧಿಗೆ ಏನಾದರೂ ಮಾಡಬೇಕು ಎಂಬ ತುಡಿತ ಕಾಡುತ್ತಿತ್ತು.

ವಿದ್ಯಾಭ್ಯಾಸ ಮುಗಿಸಿ, ಗ್ರಾಮಕ್ಕೆ ಬಂದ ನಂತರ ಸ್ವಸಹಾಯ ಸಂಘ ಆರಂಭಿಸಿ, ಸಣ್ಣ ಪ್ರಮಾಣದ ಸಾಲ ಸೌಲಭ್ಯ, ಕರಕುಶಲ, ವಿವಿಧ ಬಗೆಯ ಖಾದ್ಯಗಳ ತಯಾರಿಕೆ ಆರಂಭಿಸಲಾಯಿತು. ಹೊಸ ಬಟ್ಟೆಯಲ್ಲಿ ಕೌದಿ ನೇಯ್ಗೆ ಪ್ರಾರಂಭಿಸಿದ ಒಂದು ತಿಂಗಳಲ್ಲಿ ಜರ್ಮನಿಯಿಂದ ಸಾವಿರಾರು ಕೌದಿಗಳಿಗೆ ಬೇಡಿಕೆ ಬಂತು. ಈಗ ಅಮೆರಿಕಾ, ಬ್ರಿಟನ್‌ ಮುಂತಾದ ದೇಶಕ್ಕೆ ಕೌದಿ ರಫ್ತು ಮಾಡಲಾಗುತ್ತಿದೆ.

ಈಗ 400ಕ್ಕೂ ಹೆಚ್ಚು ಸ್ವ ಸಹಾಯ ಸಂಘ ಇವೆ. ಹನಿ ನೀರಾವರಿಗೆ 30 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ನೂರಾರು ಮಹಿಳೆಯರಿಗೆ ಕಂಪ್ಯೂಟರ್‌ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಅತಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರು, ರೈತರಿಗೆ ಸಾಲ ಒದಗಿಸಲಾಗುತ್ತಿದೆ. ಸಾಲ ಪಡೆದುಕೊಳ್ಳುವರು ಕಡ್ಡಾಯವಾಗಿ ಶೌಚಾಲಯ, ಮಹಿಳೆಯರು ನಿಗದಿತ ಪ್ರಮಾಣದ ಹಿಮೋಗ್ಲೋಬಿನ್‌ ಹೊಂದಿರಲೇಬೇಕು ಎಂಬ ಕರಾರು ವಿಧಿಸಲಾಗುತ್ತದೆ.

Advertisement

ಇದರಿಂದ ಸ್ವತ್ಛ, ನಿರ್ಮಲ ಗ್ರಾಮ ನಿರ್ಮಾಣ ಸಾಧ್ಯವಾಗುತ್ತಿದೆ. ಮಹಿಳೆಯರ ಆರೋಗ್ಯ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಸಾಲ ಪಡೆಯಲಿಕ್ಕೆ ಮಳೆ ನೀರ ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯ ಪಡಿಸುವ ಚಿಂತನೆಯೂ ಇದೆ. ಸಾಲ ಕೊಡುವುದಕ್ಕಿಂತಲೂ ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ನಾವು ನಮ್ಮ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯ ಕನಸು ಕಾಣುವ ಜೊತೆಗೆ ಅದನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ನಮ್ಮಲ್ಲಿಯೇ ಸದಾ ಒಳ್ಳೆಯ ಆಲೋಚನೆ ಮಾಡಿ, ಕಾರ್ಯರೂಪಕ್ಕೆ ತರಬೇಕು. ನಾನು ಆ ರೀತಿ ಆಲೋಚನೆ ಮಾಡಿ, ಕೆಲಸಮಾಡುತ್ತಿರುವುದರಿಂದ ಬೆಳೆಯುತ್ತಿದೆ.  ಸರ್ಕಾರ ನೀಡುವ ಸಹಾಯಧನದಿಂದ ಬಡತನ ನಿರ್ಮೂಲನೆ ಸಾಧ್ಯವೇ ಇಲ್ಲ. ನಮ್ಮ ಅಭಿವೃದ್ಧಿಗೆ ನಾವೇ ಶ್ರಮಿಸಬೇಕು ಎಂದು ತಿಳಿಸಿದರು. 

ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಮಾ. 8 ರಂದು ಮಾತ್ರವೇ ಮಹಿಳಾ ದಿನಾಚರಣೆ ಅಲ್ಲ. ಮಹಿಳೆಯರು ಪ್ರತಿ ದಿನ ಬೆಳಗ್ಗೆ ಎದ್ದು ಕಸ ಹೊಡೆಯುವುದರಿಂದ ರಾತ್ರಿ ಮಲಗುವ ತನಕ ಒಂದಿಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ. ಹಾಗಾಗಿ ನಮಗೆ ಪ್ರತಿ ದಿನ ಮಹಿಳಾ ದಿನಾಚರಣೆಯೇ. ಮನೆಯ ಎಲ್ಲಾ ಕೆಲಸ ಮಾಡುವಂತಹ ಮಹಿಳೆಯರಿಗೆ ಸೂಕ್ತ ಗೌರವ, ಸ್ಥಾನಮಾನ ದೊರೆಯುವಂತಾಗಬೇಕು ಎಂದು ಆಶಿಸಿದರು. 

ಕಾಲೇಜು ಪ್ರಾಚಾರ್ಯ ಪ್ರೊ| ಪಿ.ಎಸ್‌. ಶಿವಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ, ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಡಾ| ಪಿ.ಎಂ. ಅನುರಾಧ, ಡಾ| ಎಂ.ಎಸ್‌. ನಂಜುಂಡಸ್ವಾಮಿಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next